ಕಸ್ತೂರಿ ರಂಗನ್ ವರದಿ | ರೈತರು, ಜನರ ಹಿತರಕ್ಷಣೆಗೆ ಬದ್ಧ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು : ‘ಪಶ್ಚಿಮ ಘಟ್ಟ ಪ್ರದೇಶದ ವಿಚಾರಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ರೈತರು ಮತ್ತು ಜನರ ಹಿತರಕ್ಷಣೆ ಮುಖ್ಯವಾಗಿದ್ದು, ಅದಕ್ಕೆ ಬದ್ಧರಾಗಿದ್ದೇನೆ. ನಮಗೆ ದೊರೆತಿರುವ ಈ ಅವಕಾಶವನ್ನು ಬಳಸಿಕೊಂಡು ಎಲ್ಲರನ್ನೂ ರಕ್ಷಣೆ ಮಾಡಬೇಕು. ಸಮಸ್ಯೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವ ಯಾವುದೇ ಉದ್ದೇಶ ನನಗಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ‘ಕಸ್ತೂರಿ ರಂಗನ್ ವರದಿ ಆಧರಿಸಿ ಕೇಂದ್ರ ಹೊರಡಿಸಿರುವ ಕರಡು ಅಧಿಸೂಚನೆ’ ವಿಚಾರ ಸಂಬಂಧ ಕರೆದಿರುವ ಅಧಿವೇಶನದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅವರು, ರೈತರ ವಿಚಾರದಲ್ಲಿ ನಾವೆಲ್ಲರೂ ರಾಜಕಾರಣ ಬದಿಗಿಟ್ಟು ರಾಜ್ಯದ ಹಿತಕಾಪಾಡುವ ಕೆಲಸ ಮಾಡಬೇಕಿದೆ. ಹೀಗಾಗಿ ಪ್ರತಿಪಕ್ಷಗಳು ಅಮೂಲ್ಯ ಸಲಹೆಗಳನ್ನು ಸ್ವೀಕಾರ ಮಾಡುವ ಉದ್ದೇಶದಿಂದ ಅಧಿವೇಶನ ಕರೆದಿದ್ದೇವೆ’ ಎಂದರು.
ನಮ್ಮ ಭೂಮಿ ಬಿಡುವ ಮಾತೇ ಇಲ್ಲ: ‘ನಾವು ನಿಂತಿರುವ ಈ ಭೂಮಿ ನಾವೆಲ್ಲಾ ನಮ್ಮದೇ ಅಂದುಕೊಂಡಿದ್ದೇವೆ. ನಾವು ಮೃತಪಟ್ಟಾಗಿ ಇದೇ ಭೂಮಿಗೇ ಸೇರುತ್ತೇವೆ. ನಮ್ಮನ್ನು ಇದೇ ಭೂಮಿಯ ಸೌದೆಯಿಂದಲೇ ಸುಟ್ಟು ಅದನ್ನೂ ಭೂಮಿಗೇ ಬಿಡುತ್ತಾರೆ. ಹಾಗಾಗಿ ಈ ಭೂಮಿಯನ್ನು ನಾವು ಬಿಟ್ಟುಕೊಡುವ ಮಾತೇ ಇಲ್ಲ’ ಎಂದು ಶಿವಕುಮಾರ್ ಹೇಳಿದರು.
ಸ್ಥಳೀಯರೊಂದಿಗೆ ಚರ್ಚಿಸಿದ್ದೇನೆ: ‘ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಇದು ರೈತರ ಬದುಕಿನ ಹಕ್ಕು, ಜನರ ಆಕ್ರೋಶವನ್ನು ಅರಿತಿದ್ದೇನೆ. ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಆ ಭಾಗದ ಸಂಸದರು, ಶಾಸಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ರೈತ ಪ್ರತಿನಿಧಿಗಳೊಂದಿಗೂ ಈ ವಿಚಾರವಾಗಿ ಮಾತನಾಡಿದ್ದೇನೆ. ಸಾವಿರಾರು ಜನ ಅರ್ಜಿಗಳನ್ನೂ ಕೊಟ್ಟಿದ್ದಾರೆ’ ಎಂದು ಹೇಳಿದರು.
ಈ ಸಮಸ್ಯೆ ಪರಿಹಾರಕ್ಕೆ ಅನೇಕ ಸಲಹೆಗಳು ಬಂದಿವೆ. ಎಲ್ಲವನ್ನೂ ಗಮನಿಸಿ, ಚರ್ಚಿಸಿ ಏನಾದರು ಮಾಡಿ ಪಶ್ಚಿಮ ಘಟ್ಟದ ಬಡವರಿಗೆ, ರೈತರಿಗೆ ಹಾಗೂ ಒಟ್ಟಾರೆ ಕರ್ನಾಟಕದ ಜನತೆಗೆ ಒಂದು ಪರಿಹಾರ ಕಂಡುಕೊಳ್ಳುವ ಸದುದ್ದೇಶದಿಂದ ಈ ಅಧಿವೇಶನದಲ್ಲಿ ನಾವೆಲ್ಲಾ ಸೇರಿದ್ದೇವೆ’ ಎಂದ ಅವರು, ‘ಕೇಂದ್ರ ಜಾರಿ ಮಾಡಲು ಹೊರಟಿರುವ ಕಸ್ತೂರಿ ರಂಗನ್ ವರದಿ ನಮ್ಮ ರಾಜ್ಯದ ಹತ್ತು ಜಿಲ್ಲೆಗಳ ಜನರ ಬದುಕಿಗೆ ಮಾರಕ. ಪಶ್ಚಿಮಘಟ್ಟದಲ್ಲಿ 6ಕ್ಕೂ ಹೆಚ್ಚು ನದಿಗಳು ಹುಟ್ಟಿಹರಿಯುತ್ತಿವೆ. ಅವೈಜ್ಞಾನಿಕ ಕ್ರಮಗಳು ಜನರ ಮುಂದೆ ಬಂದಿರುವುದರಿಂದ ಎಲ್ಲರಿಗೂ ಬದುಕಿನ ಬಗ್ಗೆ ಆತಂಕ ಉಂಟಾಗಿದೆ’ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿಯ ಉಲ್ಲೇಖದಂತೆ, ರಾಜ್ಯದ ಪಶ್ಚಿಮಘಟ್ಟದ 19,252ಚ.ಕಿಮೀ ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. 961 ಕಿ.ಮೀ ಹೆಚ್ಚವರಿಯಾಗಿ ಸೇರ್ಪಡೆಗೊಳಿಸಲಾಗಿದೆ. 3,138 ಎಕರೆ ಖಾಸಗಿ ರೈತರು ಜಮೀನು ಸೇರಿದೆ. ಬೇರೆ ಬೇರೆ ರಾಜ್ಯಗಳು ಮುಖ್ಯವಾಗಿ ಕೇರಳ ರಾಜ್ಯದವರು ಈ ವಿಚಾರವಾಗಿ ತಮ್ಮದೇ ಆದ ಲೆಕ್ಕಾಚಾರ ಮಾಡಿದ್ದಾರೆ’ ಎಂದರು.
ಸಲಹೆಗಳ ಮಹಾಪೂರ: ‘ನಾನು ಪಶ್ಚಿಮಘಟ್ಟದ ಪ್ರದೇಶಗಳಲ್ಲಿ ವಾಸಿಸುವ ರೈತರನ್ನು, ಜನ ಪ್ರತಿನಿಧಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಹಲವರು ಹಲವು ರೀತಿ ಸಲಹೆಗಳನ್ನು ನೀಡಿದ್ದಾರೆ. ರೈತರು ವರದಿಯನ್ನೆ ತಿರಸ್ಕಾರ ಮಾಡಿ, ಅಧ್ಯಯನಕ್ಕೆ ಸಮಿತಿ ರಚಿಸಿ, ಕೇರಳ ಮಾದರಿ ಅನುಸರಿಸಿ, ಪರಿಸರ ಸೂಕ್ಷ್ಮ ವಲಯ ಎನ್ನುವುದನ್ನೇ ತೆಗೆದುಹಾಕಿ’ ಎಂದು ಹೇಳಿದ್ದಾರೆ ಎಂದರು.
ಜೊತೆಗೆ ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಕೇಂದ್ರಕ್ಕೆ ಮನವಿ ಸಲ್ಲಿಸಲು ಅಧಿವೇಶನದಲ್ಲಿ ನಿರ್ಣಯಗಳನ್ನು ಕೈಗೊಳ್ಳುವ ಸಲಹೆಯೂ ಬಂದಿದೆ. ಕೆಲವರು ಆರ್ಟಿಕಲ್ 371ಕ್ಕೆ ಸೇರಿಸಿ ವಿಶೇಷ ಸ್ಥಾನಮಾನ ನೀಡಿ ಎಂದು ಗಮನ ಸೆಳೆದಿದ್ದಾರೆ. ಈ ವರದಿಯಿಂದ ತೊಂದರೆ ಅನುಭವಿಸುತ್ತಿರುವ ಪ್ರತಿಯೊಬ್ಬ ರೈತನ ನೋವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇದರ ಬಗ್ಗೆ ನಾವು ಏನು ಮಾಡಬೇಕೆಂದು ಪ್ರತಿಪಕ್ಷಗಳ ಸದಸ್ಯರು ಸಲಹೆ ನೀಡಲಿ. ನಾವು ಅವರಿಗೆ ಕೊಟ್ಟಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಸೂಚಿಸಿದರು.
ಸೆ.27ರೊಳಗೆ ನಮ್ಮ ತೀರ್ಮಾನ ಆಗಬೇಕು: ಜನರ ಭಾವನೆ ತಿಳಿಯಲು ಅನೇಕ ಭಾಗಗಳಿಗೆ ಭೇಟಿ ನೀಡಿದ್ದೇನೆ. ಈ ಮಧ್ಯೆ ಕಸ್ತೂರಿ ರಂಗನ್ ವರದಿ ವಿಚಾರವಾಗಿ ಕೇಂದ್ರದ ಸೂಚನೆ ಬಂದಿದ್ದು, ಸೆ.27ರ ಒಳಗಾಗಿ ನಮ್ಮ ತೀರ್ಮಾನವನ್ನು ಕೇಂದ್ರಕ್ಕೆ ಕಳುಹಿಸಬೇಕಾಗಿದೆ. ಹೀಗಾಗಿ ರಾಜ್ಯದ ಹಿತ ಕಾಪಾಡಬೇಕು ಎಂಬ ಆಶಯದಿಂದ ಈ ವಿಶೇಷ ಅಧಿವೇಶನ ಕರೆಯುವ ತೀರ್ಮಾನ ಮಾಡಲಾಗಿದೆ ಎಂದು ಅವರು ತಿಳಿಸಿದರು.