‘ಗೌರವಯುತವಾಗಿ ಕೊಡುವುದು ಧರ್ಮ’ ಎಂದ ಶಿವಲಿಂಗೇಗೌಡರ ಹೇಳಿಕೆಗೆ ಸಾರ್ವಜನಿಕರ ಆಕ್ಷೇಪ: ‘ನಾನು ಹೇಳಿದ್ದು ಗೌರವ ಕೊಡಲು, ಹಣವಲ್ಲ’ ಎಂದು ಸ್ಪಷ್ಟನೆ ನೀಡಿದ ಸಚಿವರು
ಸಕಲೇಶಪುರ : ತಾಲ್ಲೂಕಿನಲ್ಲಿ ಆಯೋಜಿಸಲಾಗಿದ್ದ ʼಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರʼ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ಆಡಿದ ಮಾತುಗಳು ಸಾರ್ವಜನಿಕರ ವಲಯದಲ್ಲಿ ಕ್ಷಣಕಾಲ ಗೊಂದಲ ಮತ್ತು ತೀವ್ರ ಚರ್ಚೆಗೆ ಗ್ರಾಸವಾದ ಘಟನೆ ನಡೆದಿದೆ.
ವೇದಿಕೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಸುತ್ತಾ ಮಾತನಾಡಿದ ಸಚಿವರು, ಅಕ್ರಮ-ಸಕ್ರಮ ಅಥವಾ ಇತರೆ ಕೆಲಸಗಳಿಗೆ ಸಂಬಂಧಿಸಿದಂತೆ ಯಾರ್ಯಾರು ಸಂತ್ರಸ್ತರಿದ್ದೀರೋ ಎಲ್ಲರೂ ಬಂದು ಹೇಳಿ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ದೊರಕಿಸಿಕೊಡಲಾಗುವುದು. ಯಾರಾದರೂ ಎರಡು ಲಕ್ಷ ರೂ. ಕೊಟ್ಟಿದ್ದರೆ, ಜಿಲ್ಲಾಧಿಕಾರಿಗಳ ಬಳಿ ಧೈರ್ಯವಾಗಿ ಹೇಳಿ, ವಸೂಲಿ ಮಾಡಿಕೊಡುತ್ತಾರೆ, ಯಾರೂ ಹೆದರಬೇಕಿಲ್ಲ ಎಂದರು.
ಮುಂದುವರಿದು ಮಾತನಾಡುತ್ತಾ, ʼಏನು ಕೊಡಬೇಕೋ, ಗೌರವಯುತವಾಗಿ ಅದು ಧರ್ಮ, ನಿಮ್ಮ ಧರ್ಮ. ಆದರೆ ಬಲಾತ್ಕಾರವಾಗಿ ದುಡ್ಡು ಕಸಿದುಕೊಳ್ಳುವುದು ಸರಿಯಲ್ಲʼ ಎಂದು ಹೇಳಿಕೆ ನೀಡಿದರು.
ಸಚಿವರ ಈ ಮಾತಿಗೆ ಸಭೆಯಲ್ಲಿದ್ದ ಸಾರ್ವಜನಿಕರಿಂದ ತಕ್ಷಣವೇ ತೀವ್ರ ಆಕ್ಷೇಪ ವ್ಯಕ್ತವಾಯಿತು. ಸಭಿಕರಲ್ಲಿದ್ದ ವ್ಯಕ್ತಿಯೊಬ್ಬರು ಎದ್ದುನಿಂತು, ಗೌರವಯುತವಾಗಿ ನಾವೇಕೆ ಕೊಡಬೇಕು ಸರ್? ಯಾರಿಗೂ ನಾವೇಕೆ ದುಡ್ಡು ಕೊಡಬೇಕು? ಎಂದು ನೇರವಾಗಿಯೇ ಪ್ರಶ್ನಿಸಿದರು.
ಸಚಿವರ ಸ್ಪಷ್ಟನೆ:
ಸಾರ್ವಜನಿಕರ ಆಕ್ಷೇಪದಿಂದ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆಯೇ ಎಚ್ಚೆತ್ತ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು, ತಕ್ಷಣವೇ ತಮ್ಮ ಮಾತನ್ನು ಸ್ಪಷ್ಟಪಡಿಸಿದರು. ʼರೀ ಒಂದು ನಿಮಿಷ ಇರಯ್ಯ, ಗೌರವಯುತವಾಗಿ ಎಂದರೆ ನಾನು ಹೇಳಿದ್ದು ಗೌರವ (ಮರ್ಯಾದೆ) ಕೊಡಲು, ಹಣ ಕೊಡಲು ಅಲ್ಲʼ ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು.
ಸಚಿವರ ಈ ಹೇಳಿಕೆ ಮತ್ತು ನಂತರದ ಸ್ಪಷ್ಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.