Tumakuru | ಮಧುಗಿರಿ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದ ದಲಿತ ಬಾಲಕನ ಕೊಲೆ
ಜಾತಿ ನಿಂದನೆ ಮಾಡಿ ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆ: ಆರೋಪ
ಸಿಂಹಾದ್ರಿ
ಮಧುಗಿರಿ, ಸೆ.21: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದಿದ್ದಕ್ಕೆ ಆಕ್ಷೇಪಿಸಿ ದಲಿತ ಸಮುದಾಯದ 17 ವರ್ಷದ ಬಾಲಕನೋರ್ವನನ್ನು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆಗೈದ ದಾರುಣ ಘಟನೆ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಕಸಾಪುರ ಗ್ರಾಮದಲ್ಲಿ ರವಿವಾರ ಅಪರಾಹ್ನ ನಡೆದಿರುವುದು ವರದಿಯಾಗಿದೆ.
ಪರಿಶಿಷ್ಟ ಜಾತಿಗೆ ಸೇರಿದ ಸಿಂಹಾದ್ರಿ(17) ಕೊಲೆಯಾದ ಬಾಲಕ. ಈ ಸಂಬಂಧ ಕಸಾಪುರ ಗ್ರಾಮದ ಮಾರುತೇಶ (ಬಂಡೆ ಗುಂಡ) ಎಂಬಾತನ ವಿರುದ್ಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ದೂರಿನಲ್ಲಿ ಏನಿದೆ?
ಕೊಲೆಗ ಸಂಬಂಧಿಸಿ ಸಿಂಹಾದ್ರಿಯ ತಾಯಿ ಅನ್ನಪೂರ್ಣಾ ಪೊಲೀಸ್ ದೂರು ನೀಡಿದ್ದಾರೆ.
"ಗ್ರಾಮದ ಊರ ಮಾರಮ್ಮ ದೇವಾಲಯದ ಮುಂಭಾಗದ ರಸ್ತೆಯಲ್ಲಿ ನಾಯಕ ಮತ್ತು ಒಕ್ಕಲಿಗ ಸಮುದಾಯದ ವತಿಯಿಂದ ರವಿವಾರ ಅಪರಾಹ್ನ 2:30ರ ಸುಮಾರಿಗೆ ಗಣೇಶ ವಿಸರ್ಜನೆ ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಕುಣಿಯಲು ಹೋಗಿದ್ದ ನನ್ನ ಮಗ ಸಿಂಹಾದ್ರಿಗೆ ಆರೋಪಿ ಮಾರುತೇಶ, "ನೀನು ಕೀಳು ಜಾತಿಯವನು, ನಮ್ಮ ಗಣೇಶನ ಹತ್ತಿರ ಏಕೆ ಬಂದಿದ್ದೀಯಾ?'' ಎಂದು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ "ಗಣೇಶನನ್ನು ನೋಡಲು ಬಂದಿದ್ದೇನೆ'' ಎಂದು ಸಿಂಹಾದ್ರಿ ಹೇಳಿದಾಗ ಆರೋಪಿ ಮಾರುತೇಶ ಏರುಧ್ವನಿಯಲ್ಲಿ ಬೈದು ಕಪಾಳಕ್ಕೆ ಹೊಡೆದಿದ್ದಾನೆ. ಬಳಿಕ ರಸ್ತೆ ಬದಿಯಲ್ಲಿದ್ದ ಕಲ್ಲಿನಿಂದ ಸಿಂಹಾದ್ರಿಯ ಎದೆಯ ಭಾಗಕ್ಕೆ ತೀವ್ರವಾಗಿ ಗುದ್ದಿದ್ದಾನೆ. ತೀವ್ರ ಗಾಯಗೊಂಡ ಸಿಂಹಾದ್ರಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸ್ಥಳೀಯರು ಹಾಗೂ ಸ್ನೇಹಿತರು ತಕ್ಷಣವೇ ಸಿಂಹಾದ್ರಿಯನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕೀಳು ಜಾತಿಯವನು ಎಂಬ ಕಾರಣಕ್ಕೆ ನನ್ನ ಮಗನನ್ನು ಕೊಲೆ ಮಾಡಲಾಗಿದೆ. ಆದ್ದರಿಂದ ಮಾರುತೇಶ ಹಾಗೂ ಆತನಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ದೂರಿನಲ್ಲಿ ಅನ್ನಪೂರ್ಣಾ ಒತ್ತಾಯಿಸಿದ್ದಾರೆ.
ದೂರಿನನ್ವಯ ಮಿಡಿಗೇಶಿ ಪೊಲೀಸರು THE BHARATIYA NYAYA SANHITA (BNS), 2023, (U/S 103(1),351(2),352) ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.
ಹತ್ಯೆ ಖಂಡಿಸಿ ಪ್ರತಿಭಟನೆ
ಸಿಂಹಾದ್ರಿ ಹತ್ಯೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ದಲಿತ ಮುಖಂಡರು ರವಿವಾರ ರಾತ್ರಿ ಮಿಡಿಗೇಶಿ ಪೊಲೀಸ್ ಠಾಣೆಯೆದುರು ಧರಣಿ ನಡೆಸಿದ್ದಾರೆ.
ಹಾಗೂ ಮಾದಿಗ ಸಮುದಾಯದ ಮೇಲಿನ ದೌರ್ಜನ್ಯ ತಡೆಯಲು ವಿಶೇಷ ಕಾನೂನು ಜಾರಿಗೆ ಆಗ್ರಹಿಸಿ ಇಂದು(ಸೆ.21) ಮಧುಗಿರಿ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸುವುದಾಗಿ ಘೋಷಿಸಿವೆ.