ಎಸೆಸೆಲ್ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ, ತೇರ್ಗಡೆಯ ಪ್ರಮಾಣ ಶೇ.55.19
625ಕ್ಕೆ 625 ಅಂಕಗಳನ್ನು ಗಳಿಸಿದ ಐದು ವಿದ್ಯಾರ್ಥಿಗಳು
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಎಸೆಸೆಲ್ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯನ್ನು ಬರೆದ 1,03,119 ವಿದ್ಯಾರ್ಥಿಗಳ ಪೈಕಿ 56,912 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಸೆಸೆಲ್ಸಿ ಪರೀಕ್ಷೆ-2ರಲ್ಲಿ ರೆಗ್ಯುಲರ್, ಖಾಸಗಿ ಸೇರಿ ಎಲ್ಲ ವಿದ್ಯಾರ್ಥಿಗಳ ತೇರ್ಗಡೆಯ ಪ್ರಮಾಣ ಶೇ.55.19ರಷ್ಟಿದೆ.
ರೆಗ್ಯುಲರ್ ಹೊಸದಾಗಿ 49,351 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 31,080 (ಶೇ.62) ಮಂದಿ ಉತ್ತೀರ್ಣರಾಗಿದ್ದಾರೆ. 18,471 ಮಂದಿ ಖಾಸಗಿಯಾಗಿ ಹೊಸದಾಗಿ ನೋಂದಣಿಯಾಗಿದ್ದು, 3,453 (ಶೇ.18) ಮಂದಿ ಉತ್ತೀರ್ಣರಾಗಿದ್ದಾರೆ. 32,740 ರೆಗ್ಯುಲರ್ ಪುನರಾವರ್ತಿತ ಅಭ್ಯರ್ಥಿಗಳು ನೋಂದಣಿಯಾಗಿದ್ದು, 21,671 (ಶೇ.66) ಮಂದಿ ಉತ್ತೀರ್ಣರಾಗಿದ್ದಾರೆ. 2,557 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ನೋಂದಣಿಯಾಗಿದ್ದು, 708 (ಶೇ.27) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ಬಾರಿ ಪ್ರಥಮ ಭಾಷೆಯಲ್ಲಿ 136, ದ್ವಿತೀಯ ಭಾಷೆಯಲ್ಲಿ 76, ತೃತೀಯ ಭಾಷೆಯಲ್ಲಿ 144, ಗಣಿತ ವಿಷಯದಲ್ಲಿ 52, ವಿಜ್ಞಾನ ವಿಷಯದಲ್ಲಿ 126 ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ 68 ವಿದ್ಯಾರ್ಥಿಗಳು ಶೇ.100ರಷ್ಟು ಅಂಕಗಳನ್ನು ಪಡೆದಿದ್ದಾರೆ. 2026ರ ಪರೀಕ್ಷೆ-1ರಲ್ಲಿ ಹಾಜರಾಗಲು ಸಾಧ್ಯವಾಗದ 7,649 ವಿದ್ಯಾರ್ಥಿಗಳು ಪರೀಕ್ಷೆ-2 ಖಾಸಗಿ ವಿದ್ಯಾರ್ಥಿಗಳಾಗಿ ಹಾಜರಾಗಿದ್ದು, 603 ಮಂದಿ ಉತ್ತೀರ್ಣರಾಗಿದ್ದಾರೆ.
ಎಸೆಸೆಲ್ಸಿ ಪರೀಕ್ಷೆ-2ರಲ್ಲಿ ಶೇ.62.35 ಬಾಲಕಿಯರು, ಶೇ.63.29 ಬಾಲಕರು ಉತ್ತೀರ್ಣರಾಗಿದ್ದಾರೆ. ಶೇ.61.82ರಷ್ಟು ಗ್ರಾಮೀಣ ಹಾಗೂ ಶೇ.64.21ರಷ್ಟು ನಗರ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸರಕಾರಿ ಶಾಲೆಗಳ ಫಲಿತಾಂಶ ಶೇ.64.66ರಷ್ಟು, ಅನುದಾನಿತ ಶಾಲೆಗಳ ಫಲಿತಾಂಶ ಶೇ.60.07ರಷ್ಟು, ಖಾಸಗಿ ಶಾಲೆಗಳ ಫಲಿತಾಂಶ ಶೇ.64.03ರಷ್ಟು ದಾಖಲಾಗಿದೆ.
ಎಸೆಸೆಲ್ಸಿಯ ಎರಡೂ ಪರೀಕ್ಷೆಯ ಒಟ್ಟು ಫಲಿತಾಂಶ ಶೇ.93.13: 2026ರ ಎಸೆಸೆಲ್ಸಿಯ ಎರಡೂ ಪರೀಕ್ಷೆಯ ಒಟ್ಟು ಫಲಿತಾಂಶ ಶೇ.93.13ರಷ್ಟು ದಾಖಲಾಗಿದೆ. ರೆಗ್ಯುಲರ್ ಹೊಸದಾಗಿ ನೋಂದಣಿಯಾದ ವಿದ್ಯಾರ್ಥಿಗಳ ಫಲಿತಾಂಶ ಶೇ.98.1, ಖಾಸಗಿಯಾಗಿ ಹೊಸದಾಗಿ ನೋಂದಣಿಯಾದ ವಿದ್ಯಾರ್ಥಿಗಳ ಫಲಿತಾಂಶ ಶೇ.18.2, ರೆಗ್ಯುಲರ್ ಪುನರಾವರ್ತಿತ ಅಭ್ಯರ್ಥಿಗಳ ಫಲಿತಾಂಶ ಶೇ.72.7, ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳ ಫಲಿತಾಂಶ ಶೇ.23.6ರಷ್ಟು ಫಲಿತಾಂಶ ದಾಖಲಾಗಿದೆ.
ಎಸೆಸೆಲ್ಸಿಯಲ್ಲಿ ಉಡುಪಿ ಜಿಲ್ಲೆ ಪ್ರಥಮ, ಕಲಬುರಗಿ ಕೊನೆಯ ಸ್ಥಾನ
2026ರ ಪರೀಕ್ಷೆ-1ರಲ್ಲಿ ಶೇ.98.40ರಷ್ಟು ಫಲಿತಾಂಶವನ್ನು ಪಡೆದ ದಕ್ಷಿಣ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನದಲ್ಲಿತ್ತು. ಆದರೆ ಒಟ್ಟಾರೆ 2026ರ ಎಸೆಸೆಲ್ಸಿಯ ಎರಡೂ ಪರೀಕ್ಷೆಯ ಫಲಿತಾಂಶವನ್ನು ಪರಿಗಣಿಸಿದರೆ, ಉಡುಪಿ (ಶೇ.99.58) ಪ್ರಥಮ ಸ್ಥಾನದಲ್ಲಿದ್ದು, ಮಂಡ್ಯ (ಶೇ.99.43) ದ್ವಿತೀಯ ಸ್ಥಾನ, ದಕ್ಷಿಣ ಕನ್ನಡ (ಶೇ.99.42) ತೃತೀಯ ಸ್ಥಾನ, ಬೆಂಗಳೂರು ಗ್ರಾಮಾಂತರ (ಶೇ.99.34) ನಾಲ್ಕನೇ ಸ್ಥಾನ ಮತ್ತು ಹಾಸನ (ಶೇ.99.22) ಐದನೇ ಸ್ಥಾನದಲ್ಲಿದೆ. ಕಲಬುರಗಿ (ಶೇ.95.50) ಕೊನೆಯ ಸ್ಥಾನದಲ್ಲಿದೆ.
ಪರೀಕ್ಷೆ-2ರಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿದ ಐದು ವಿದ್ಯಾರ್ಥಿಗಳು
2026ರ ಪರೀಕ್ಷೆ-1ರಲ್ಲಿ ಉತ್ತೀರ್ಣರಾಗಿ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಒಟ್ಟು 11,854 ಶಾಲಾ ವಿದ್ಯಾರ್ಥಿಗಳು ಹಾಗೂ 38 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ-2ಅನ್ನು ಬರೆದಿದ್ದು, 8,393 ವಿದ್ಯಾರ್ಥಿಗಳು ಫಲಿತಾಂಶವನ್ನು ಉತ್ತಮಪಡಿಸಿಕೊಂಡಿದ್ದಾರೆ. ಈ ಬಾರಿ ಒಬ್ಬ ಸರಕಾರಿ ಶಾಲೆಯ ವಿದ್ಯಾರ್ಥಿ ಹಾಗೂ ನಾಲ್ಕು ಖಾಸಗಿ ಶಾಲೆಯ ವಿದ್ಯಾರ್ಥಿಗಳು ಸೇರಿ ಒಟ್ಟು ಐದು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.