ಸ್ಟಿಂಗ್ ಆಪರೇಶನ್ | ಖಾಸಗಿ ಸುದ್ದಿವಾಹಿನಿ ಮಾಲಕನ ಎರಡು ಬಾರಿ ವಿಚಾರಣೆ: ಧ್ವನಿ ಸ್ಯಾಂಪಲ್ ತೆಗೆದುಕೊಳ್ಳದ ಪೊಲೀಸರು
AI ಚಿತ್ರ (Gemini AI)
ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ಉದ್ದೇಶಪೂರಿತ ವೀಡಿಯೋ ಬಿಡುಗಡೆಗೆ ಸಂಬಂದಿಸಿ ಖಾಸಗಿ ಸುದ್ದಿವಾಹಿನಿಯ ಮಾಲಕರೊಬ್ಬರನ್ನು ಎರಡು ಬಾರಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಆತನ ಧ್ವನಿ ಸ್ಯಾಂಪಲ್ ನ್ನು ಪೊಲೀಸರು ತೆಗೆದುಕೊಂಡಿಲ್ಲ ಎಂದು ಪೊಲೀಸ್ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಈಗಾಗಲೇ ಖಾಸಗಿ ಚಾನೆಲ್ ಮಾಲಕರನ್ನು ಎರಡು ಬಾರಿ ವಿಚಾರಣೆ ಮಾಡಲಾಗಿದ್ದು, ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಬರಬೇಕು ಎಂದು ಸೂಚನೆ ನೀಡಲಾಗಿದೆಯಂತೆ. ಸಿದ್ದರಾಮಯ್ಯರ ವಿರುದ್ಧ ಅಪಪ್ರಚಾರ ಮಾಡಲು ಬಳಸಿದ್ದ ವೀಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ ಖಾಸಗಿ ಚಾನೆಲ್ ಮುಖ್ಯಸ್ಥ ಎಂಬ ಅನುಮಾನ ಇದೆ. ಆದರೆ ಪೊಲೀಸರು ಈ ಸಂಬಂಧ ಆತನನ್ನು ವಿಚಾರಣೆಗೆ ಮಾತ್ರ ಒಳಪಡಿಸಿದ್ದಾರೆ, ಆತನ ವೀಡಿಯೋ ಸಂಗ್ರಹಿಸಿಲ್ಲ ಎಂದು ತಿಳಿದುಬಂದಿದೆ.
ಅಂತಹ ಕ್ರಮಕ್ಕೆ ನ್ಯಾಯಾಲಯದ ಅನುಮತಿ ಬೇಕಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.
ಅಪಾದಿತ ವೀಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ ಯಾರು ಎಂಬುದು ಪತ್ತೆಯಾಗಬೇಕಿದ್ದರೆ ಧ್ವನಿಮಾದರಿ ಸಂಗ್ರಹ ಅತ್ಯವಶ್ಯವಾಗಿದೆ. ಆದರೆ ಇದುವರೆಗೂ ಪೊಲೀಸರು ಆ ಪ್ರಕ್ರಿಯೆಗೆ ಮುಂದಾಗಿಲ್ಲ ಎಂದು ತಿಳಿದುಬಂದಿದೆ.