ಜೇವರ್ಗಿಗೆ 2.5 ಟಿಎಂಸಿ, ರಾಯಚೂರಿಗೆ 3 ಟಿಎಂಸಿ ನೀರು ಕಾಯ್ದಿರಿಸಲು ಸಚಿವ ಅಜಯ್ ಧರ್ಮಸಿಂಗ್ ಒತ್ತಾಯ
ಕೊನೆಯಂಚಿನ ರೈತರಿಗೆ ನೀರು ತಲುಪಿಸಲು ಆದ್ಯತೆ ನೀಡಿ; ಹಳೆಯ ಕಾಲುವೆಗಳ ನವೀಕರಣಕ್ಕೆ ಆಗ್ರಹ
ಬೆಂಗಳೂರು : ಕೃಷ್ಣಾ ಮೇಲ್ದಂಡೆ ಯೋಜನೆಯ 2026–27ನೇ ಸಾಲಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜೇವರ್ಗಿ ವಿಧಾನಸಭಾ ಕ್ಷೇತ್ರದ ಕುಡಿಯುವ ನೀರಿನ ಅಗತ್ಯತೆ ಹಾಗೂ ರಾಯಚೂರು ಜಿಲ್ಲೆಯ ಕೊನೆಯಂಚಿನ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸುವುದಕ್ಕೆ ವಿಶೇಷ ಆದ್ಯತೆ ನೀಡಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಧರ್ಮಸಿಂಗ್ ಒತ್ತಾಯಿಸಿದರು.
ವಿಕಾಸಸೌಧದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ನೀರಿನ ಲಭ್ಯತೆ, ಮುಂಗಾರು ಅವಧಿಯ ಬಾಕಿ ನೀರು ಬಿಡುಗಡೆ, ಹಿಂಗಾರು ಹಂಗಾಮು ಹಾಗೂ ಬೇಸಿಗೆಯ ಕುಡಿಯುವ ನೀರಿನ ಅಗತ್ಯತೆ ಕುರಿತು ಚರ್ಚಿಸಲಾಯಿತು.
ಜೇವರ್ಗಿ ವಿಧಾನಸಭಾ ಕ್ಷೇತ್ರದ ಜೆಬಿಸಿ, ಐಬಿಸಿ ಹಾಗೂ ಎಂಬಿಸಿ ಕಾಲುವೆಗಳ ಕೊನೆಯಂಚಿನ ಹಲವು ಗ್ರಾಮಗಳಿಗೆ ಸಮರ್ಪಕವಾಗಿ ನೀರು ತಲುಪದ ಕಾರಣ ಜನರು ಮತ್ತು ಜಾನುವಾರುಗಳು ತೊಂದರೆ ಅನುಭವಿಸುತ್ತಿವೆ ಎಂದು ಸಚಿವರು ಸಭೆಯ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಮುಂಬರುವ ಬೇಸಿಗೆಯವರೆಗೆ ಜೇವರ್ಗಿ ಕ್ಷೇತ್ರದ ಕುಡಿಯುವ ನೀರು ಹಾಗೂ ಇತರ ಅಗತ್ಯ ಬಳಕೆಗಳಿಗಾಗಿ 2.5 ಟಿಎಂಸಿ ನೀರನ್ನು ಕಾಯ್ದಿರಿಸಬೇಕು ಎಂದು ಆಗ್ರಹಿಸಿದರು.
ಜೇವರ್ಗಿ ಶಾಖಾ ಕಾಲುವೆಯ 40ರಿಂದ 86.36 ಕಿ.ಮೀ. ವ್ಯಾಪ್ತಿಯಲ್ಲಿ 50,425 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದ್ದು, ವಿನ್ಯಾಸದ ಪ್ರಕಾರ ಈ ಭಾಗಕ್ಕೆ 1,033 ಕ್ಯೂಸೆಕ್ ನೀರಿನ ಹರಿವು ಅಗತ್ಯವಿದೆ. ಆದರೆ, ಪ್ರಸ್ತುತ ಸುಮಾರು 500 ಕ್ಯೂಸೆಕ್ ನೀರು ಮಾತ್ರ ಹರಿಯುತ್ತಿದ್ದು, ಸುಮಾರು 533 ಕ್ಯೂಸೆಕ್ ಕೊರತೆಯಿದೆ ಎಂದು ಅವರು ಪ್ರಸ್ತಾಪಿಸಿದರು.
ಜೇವರ್ಗಿ ಮತ್ತು ಮುದಬಾಳ ಶಾಖಾ ಕಾಲುವೆಗಳು 25ರಿಂದ 30 ವರ್ಷಗಳಷ್ಟು ಹಳೆಯದಾಗಿದ್ದು, ಸೋರಿಕೆ ಹಾಗೂ ನೀರಿನ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಬಾಕಿ ಇರುವ ಕಾಲುವೆ ನವೀಕರಣ (ಇಆರ್ಎಂ) ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು. ಕೆಂಬಾವಿ ಹೆಡ್ ರೆಗುಲೇಟರ್ ಬಳಿಯ ತಡೆಗೋಡೆಯಿಂದ ನೀರಿನ ಹರಿವಿನ ಮೇಲಾಗುತ್ತಿರುವ ಪರಿಣಾಮವನ್ನೂ ತಾಂತ್ರಿಕವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ರಾಯಚೂರು ನಗರಕ್ಕೆ 3 ಟಿಎಂಸಿ ನೀರು ಕಾಯ್ದಿರಿಸಲು ಒತ್ತಾಯ :
ಮುಂಬರುವ ಬೇಸಿಗೆಯಲ್ಲಿ ರಾಯಚೂರು ನಗರದ ಕುಡಿಯುವ ನೀರಿನ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸಲು 3 ಟಿಎಂಸಿ ನೀರನ್ನು ಮುಂಚಿತವಾಗಿಯೇ ಕಾಯ್ದಿರಿಸಬೇಕು ಎಂದು ಸಚಿವ ಡಾ. ಅಜಯ್ ಧರ್ಮಸಿಂಗ್ ಸಭೆಯಲ್ಲಿ ಒತ್ತಾಯಿಸಿದರು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಬಳಿಕ ಕ್ರಮ ಕೈಗೊಳ್ಳುವ ಬದಲು, ಮುಂಚಿತವಾಗಿಯೇ ನೀರಿನ ಲಭ್ಯತೆ ಮತ್ತು ಸಂಗ್ರಹಣೆಯ ಬಗ್ಗೆ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.
ಇದರ ಜತೆಗೆ, ರಾಯಚೂರು ಜಿಲ್ಲೆಯ ದೇವದುರ್ಗ ಭಾಗದ ನಾರಾಯಣಪುರ ಬಲದಂಡೆ ಕಾಲುವೆಯ ಕೊನೆಯಂಚಿನ ರೈತರಿಗೆ ಸಮರ್ಪಕವಾಗಿ ನೀರು ತಲುಪುವಂತೆ ಗೇಟ್ಗಳ ಕಾರ್ಯಾಚರಣೆ ಹಾಗೂ ಗೇಜ್ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ವಿತರಣಾ ಕಾಲುವೆ 1ರಿಂದ 14ರವರೆಗೆ ನಡೆಯುತ್ತಿರುವ ಮೊದಲ ಹಂತದ ಎಸ್ಸಿಎಡಿಎ (SCADA) ಗೇಟ್ ಅಳವಡಿಕೆ ಕಾಮಗಾರಿಯ ಜತೆಗೆ, 15ರಿಂದ 18ರವರೆಗಿನ ಎರಡನೇ ಹಂತದ ಕಾಮಗಾರಿಯನ್ನೂ ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು. ಇದರಿಂದ ನೀರಿನ ವೈಜ್ಞಾನಿಕ ಹಂಚಿಕೆ, ಉಳಿತಾಯ ಹಾಗೂ ಕೊನೆಯಂಚಿನ ರೈತರಿಗೆ ಸಮರ್ಪಕ ನೀರು ಪೂರೈಕೆ ಸಾಧ್ಯವಾಗಲಿದೆ ಎಂದರು.
ಅ.25ರವರೆಗೆ ನೀರು ಬಿಡುಗಡೆ ವಿಸ್ತರಣೆ ?:
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಒಟ್ಟು 85.61 ಟಿಎಂಸಿ ನೀರು ಲಭ್ಯವಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ನಡೆಯುತ್ತಿರುವ ನೀರು ಬಿಡುಗಡೆಯನ್ನು ಅಕ್ಟೋಬರ್ 25ರವರೆಗೆ ವಿಸ್ತರಿಸಲು ಸಭೆ ನಿರ್ಧರಿಸಿತು. ಅಕ್ಟೋಬರ್ 26ರಿಂದ ನವೆಂಬರ್ 2ರವರೆಗೆ ಕಾಲುವೆಗಳನ್ನು ಬಂದ್ ಮಾಡಿ, ನವೆಂಬರ್ 3ರಿಂದ 12ರವರೆಗೆ ಮತ್ತೆ 10 ದಿನಗಳ ಕಾಲ ನೀರು ಹರಿಸಲು ತೀರ್ಮಾನಿಸಲಾಯಿತು.
ಹಿಂಗಾರು ಹಂಗಾಮಿಗೆ ಅಗತ್ಯವಿರುವಷ್ಟು ನೀರು ಲಭ್ಯವಿಲ್ಲದ ಕಾರಣ ಹಿಂಗಾರು ನೀರಾವರಿ ಪೂರೈಕೆ ಸಾಧ್ಯವಿಲ್ಲ ಎಂದು ಸಭೆ ನಿರ್ಧರಿಸಿತು. ಲಭ್ಯವಿರುವ ನೀರನ್ನು ಕುಡಿಯುವ ನೀರು, ಕೆರೆ ತುಂಬಿಸುವಿಕೆ ಹಾಗೂ ಇತರ ಅಗತ್ಯ ಬಳಕೆಗಳಿಗಾಗಿ ಕಾಯ್ದಿರಿಸಲು ತೀರ್ಮಾನಿಸಲಾಯಿತು. ಕೊನೆಯಂಚಿನ ರೈತರಿಗೆ ನೀರು ತಲುಪಿಸಲು ಅನಧಿಕೃತವಾಗಿ ನೀರು ಎತ್ತುವುದನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ನಿಗಾ ವಹಿಸಬೇಕು ಎಂದು ಸೂಚಿಸಲಾಯಿತು.
ಲಭ್ಯವಿರುವ ನೀರಿನ ಪ್ರತಿಯೊಂದು ಹನಿಯನ್ನೂ ಸಮರ್ಪಕವಾಗಿ ಬಳಸಬೇಕು. ಜೇವರ್ಗಿ ಮತ್ತು ರಾಯಚೂರು ಭಾಗದ ಜನರು, ಜಾನುವಾರುಗಳು ಹಾಗೂ ಕೊನೆಯಂಚಿನ ರೈತರಿಗೆ ಅಗತ್ಯ ನೀರು ತಲುಪಿಸುವುದು ನಮ್ಮ ಆದ್ಯತೆ. ಹಳೆಯ ಕಾಲುವೆಗಳ ಆಧುನೀಕರಣ ಹಾಗೂ ತಂತ್ರಜ್ಞಾನ ಆಧಾರಿತ ನೀರು ನಿರ್ವಹಣೆಯ ಮೂಲಕ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸಬೇಕು ಎಂದು ಡಾ.ಅಜಯ್ ಧರ್ಮಸಿಂಗ್ ಹೇಳಿದರು.
ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಡಾ.ಶರಣಪ್ರಕಾಶ್ ಪಾಟೀಲ್, ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಸಂಸದ ಕುಮಾರ್ ನಾಯಕ್, ಶಾಸಕರಾದ ಉಮೇಶ್ ಮೇಟಿ, ಜೆ.ಟಿ. ಪಾಟೀಲ್, ಜಗದೀಶ್ ಗುಡಗುಂಟಿ ಸೇರಿದಂತೆ ಇತರ ಜನಪ್ರತಿನಿಧಿಗಳು ಹಾಗೂ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.