ಬಿಜೆಪಿಯಲ್ಲಿಯೂ ಸಿಡಿ ಕಾರ್ಖಾನೆ ಜೀವಂತ : ಯತ್ನಾಳ್
ಬೆಂಗಳೂರು : ಬಿಜೆಪಿ ಪಕ್ಷದಲ್ಲೂ ಸಿಡಿ ಕಾರ್ಖಾನೆ ಜೀವಂತವಾಗಿದೆ. ಅಲ್ಲಿಯೂ ಕೆಲವು ‘ಸ್ಟಿಂಗ್ ಆಪರೇಷನ್’ಗಳು ನಡೆದಿವೆ. ಆ ಸಿಡಿಗಳು ಯಾವಾಗ ಹೊರಬರುತ್ತವೆ ಎಂಬುದನ್ನು ಕಾಯಬೇಕು ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶನಿವಾರ ಹೊಸದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿಡಿ ಮತ್ತು ಸ್ಟಿಂಗ್ ಆಪರೇಷನ್ಗಳನ್ನು ಬಳಸಿಕೊಂಡು ಬೆದರಿಕೆ, ಒತ್ತಡ ಹಾಕುವುದು ಒಂದು ವ್ಯವಹಾರವಾಗಿ ಬೆಳೆದಿದೆ. ರಾಜಕೀಯಕ್ಕೆ ಯಾವುದೋ ನೆಪದಲ್ಲಿ ಪ್ರವೇಶಿಸಿ, ವಿಡಿಯೊಗಳನ್ನು ಮಾಡಿಕೊಂಡು ಹಣಕ್ಕಾಗಿ ಶಾಸಕರನ್ನೆ ಬೆದರಿಕೆ ಮಾಡುವ ತಂಡಗಳು ಬೆಂಗಳೂರಿನಲ್ಲಿ ಸಾಕಷ್ಟಿವೆ ಎಂದು ಆರೋಪಿಸಿದರು.
ಸ್ಟಿಂಗ್ ಆಪರೇಷನ್ ಪ್ರಕರಣದ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಮಾತನಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ ಯತ್ನಾಳ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈ ವಿಚಾರವಾಗಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರನ್ನೂ ಈ ವಿಚಾರದಲ್ಲಿ ನೇರವಾಗಿ ಪ್ರಸ್ತಾಪಿಸಿದ್ದಾರೆ.ಆದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ದೇಶದಲ್ಲೇ ಇಂತಹ ರಾಜಕೀಯ ಬೆಳವಣಿಗೆ ಕೆಟ್ಟ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ಹತ್ತು ವರ್ಷಗಳಿಂದ ಇಬ್ಬರು ಉದಯೋನ್ಮುಖ ರಾಜಕಾರಣಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹಣಕಾಸಿನ ವ್ಯವಹಾರ ಕುದುರಿದರೆ ಇಂತಹ ಪ್ರಕರಣಗಳು ಅಲ್ಲಿಗೇ ನಿಲ್ಲುತ್ತವೆ. ಇಂತಹ ಕೃತ್ಯಗಳಿಂದ ಕರ್ನಾಟಕದ ರಾಜಕೀಯ ನಾಯಕರ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ ಮತ್ತು ರಾಜ್ಯದ ಹೆಸರು ಹಾಳಾಗುತ್ತಿದೆ. ಒಟ್ಟಿನಲ್ಲಿ ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಯತ್ನಾಳ್ ಆಗ್ರಹಿಸಿದರು.