×
Ad

ಸಂಸತ್ ಸದಸ್ಯರ ಅಮಾನತು ಪ್ರಜಾಪ್ರಭುತ್ವದ ಹತ್ಯೆ: ಅಬ್ದುಲ್ ಮಜೀದ್

Update: 2023-12-20 22:35 IST

ಬೆಂಗಳೂರು: ‘ಸಂಸತ್ತು ಪ್ರಜಾಪ್ರಭುತ್ವದ ಆತ್ಮ. ಅಲ್ಲಿ ಅಧಿಕಾರ ಪಕ್ಷದ ಪ್ರಾಮುಖ್ಯತೆ ಎಷ್ಟಿರುತ್ತದೋ ವಿಪಕ್ಷದ ಅವಶ್ಯಕತೆಯೂ ಅಷ್ಟೇ ಮುಖ್ಯ. ಮೋದಿ ಸರಕಾರ 141 ಸಂಸತ್ ಸದಸ್ಯರನ್ನು ಅಮಾನತು ಮಾಡಿದ ಕ್ರಮ ನಿರಂಕುಶ ಪ್ರಭುತ್ವದ ಪರಮಾವಧಿ, ಪ್ರಜಾಪ್ರಭುತ್ವದ ಹತ್ಯೆ’ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದ್ದಾರೆ.

ಬುಧವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ‘ಸಂಸತ್ತಿನ ಒಳಗೆ ನಿರಾಯಾಸವಾಗಿ ಅಪರಿಚಿತರು ಪ್ರವೇಶ ಮಾಡಿ ಹೊಗೆ ಬಾಂಬ್ ಸ್ಪೋಟಿಸಿರುವುದು ಮೋದಿ ಸರಕಾರದ ವೈಫಲ್ಯ. ಆ ಕುರಿತು ಸಂಸತ್ತಿನಲ್ಲಿ ದೇಶದ ಗೃಹಮಂತ್ರಿ ಹೇಳಿಕೆ ನೀಡಬೇಕಾದದ್ದು ಅವರ ಪ್ರಾಥಮಿಕ ಕರ್ತವ್ಯ. ಆದರೆ ಸರ್ವಾಧಿಕಾರಿ ಧೋರಣೆಯ ಈ ಸರಕಾರ ಹೇಳಿಕೆ ನೀಡುವ ಬದಲು ಈ ವಿಚಾರದಲ್ಲಿ ಸಂಸತ್‍ನಲ್ಲಿ ಚರ್ಚೆಗೆ ಒತ್ತಾಯಿಸಿದ ವಿಪಕ್ಷದ ಸಂಸದರನ್ನು ಅಮಾನತು ಮಾಡುವ ಮೂಲಕ ವಿಪಕ್ಷದ ಬಾಯಿಯನ್ನು ಮಾತ್ರವಲ್ಲ, ಇಡೀ ದೇಶದ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ಇದು ದೇಶದಲ್ಲಿ ಅಘೋಷಿತ ತುರ್ತುಸ್ಥಿತಿಯ ವಾತಾರಣ ಇದೆ ಎಂದು ತೋರಿಸುತ್ತದೆ. ಮೋದಿ ಸರಕಾರದ ಪ್ರಜಾಪ್ರಭುತ್ವ ವಿರೋಧಿ ನಡೆ. ಸದನದಲ್ಲಿ ಬಹುತೇಕ ಎಲ್ಲ ವಿಪಕ್ಷ ಸದಸ್ಯರು ಅಮಾನತಾಗಿ ಹೊರಗುಳಿದಿರುವ ಸಂದರ್ಭದಲ್ಲಿ ಭಾರತದ ನ್ಯಾಯ ಸಂಹಿತೆಗಳನ್ನು ಮರು ವ್ಯಾಖ್ಯಾನ ಮಾಡುವಂತಹ ಬಹುಮುಖ್ಯ ಕಾಯಿದೆಯನ್ನು ಮಂಡಿಸಿ ಅದನ್ನು ಅಂಗೀಕರಿಸುವ ಸಂಚು ಮಾಡಲಾಗಿದೆ. ಈ ಅಮಾನತುಗಳ ಹಿಂದೆ ಈ ಮಸೂದೆಗೆ ಎದುರಾಗಬಹುದಾದ ಆಕ್ಷೇಪಣೆ ಮತ್ತು ವಿರೋಧವನ್ನು ಇಲ್ಲವಾಗಿಸುವುದೇ ಆಗಿದೆ ಎಂದು ಮಜೀದ್ ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News