‘ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ’ ನ.1ರಿಂದ ಕರವೇ ಅಭಿಯಾನ : ಟಿ.ಎ.ನಾರಾಯಣಗೌಡ
ಬೆಂಗಳೂರು : ರಾಜ್ಯದ ಐಟಿ-ಬಿಟಿ ಕಂಪೆನಿಗಳಿಗೆ ಭೇಟಿ, ಉದ್ಯೋಗಾವಕಾಶಗಳ ಕುರಿತು ಮಾಹಿತಿ ಸಂಗ್ರಹ, ಕನ್ನಡಿಗರಿಗೆ ಉದ್ಯೋಗ ಖಾತರಿಪಡಿಸಲು ಆಗ್ರಹಿಸಿ ನ.1ರಿಂದ ‘ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಅಭಿಯಾನ’ ನಡೆಸಲಾಗುತ್ತಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.
ಗುರುವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಐಟಿ-ಬಿಟಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಸಮರ್ಪಕ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ. ಕನ್ನಡಿಗ ಐಟಿ ಉದ್ಯೋಗಿಗಳು ತಮ್ಮ ಉದ್ಯೋಗದ ಸಂಕಷ್ಟ, ನೇಮಕಾತಿಯಲ್ಲಿನ ತಾರತಮ್ಯ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಬಹಿರಂಗವಾಗಿ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅನಿಯಂತ್ರಿತ ವಲಸೆಯ ಪರಿಣಾಮವಾಗಿ ಕನ್ನಡಿಗರೇ ಈಗ ಅತಂತ್ರರಾಗುವ ಸನ್ನಿವೇಶ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡಿಗರ ಉದ್ಯೋಗದ ಹಕ್ಕುಗಳ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳುತ್ತಿದೆ. ನ.1ರ ಕನ್ನಡ ರಾಜ್ಯೋತ್ಸವದ ದಿನದಿಂದ ಒಂದು ತಿಂಗಳ ಕಾಲ ರಾಜ್ಯದ ಐಟಿ-ಬಿಟಿ ಕಂಪೆನಿಗಳಿಗೆ ಭೇಟಿ ನೀಡಿ, ಕನ್ನಡಿಗರ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಸಂಗ್ರಹಿಸುವ ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ನ್ಯಾಯಯುತ ಅವಕಾಶ ಖಾತರಿಪಡಿಸುವಂತೆ ಆಗ್ರಹಿಸುವ ವಿಶೇಷ ಅಭಿಯಾನವನ್ನು ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಈ ಅಭಿಯಾನಕ್ಕಾಗಿ ಕರವೇ ಹಲವಾರು ತಂಡಗಳನ್ನು ರಚಿಸಲಾಗುತ್ತದೆ. ಪ್ರತಿ ತಂಡದಲ್ಲಿ ಹತ್ತು ಮಂದಿ ಕರವೇ ಮುಖಂಡರು ಮತ್ತು ಕಾರ್ಯಕರ್ತರು ಇರಲಿದ್ದಾರೆ. ಈ ತಂಡಗಳು ಐಟಿ-ಬಿಟಿ ಕಂಪೆನಿಗಳ ಮುಖ್ಯಸ್ಥರು, ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಜವಾಬ್ದಾರಿಯುತ ವ್ಯಕ್ತಿಗಳನ್ನು ಭೇಟಿ ಮಾಡಿ, ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಂಬಂಧ ತಮ್ಮ ಆಗ್ರಹ ಪತ್ರವನ್ನು ಸಲ್ಲಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕದ ನೆಲ, ನೀರು, ವಿದ್ಯುತ್, ರಸ್ತೆ, ಇಲ್ಲಿನ ಮೂಲಸೌಕರ್ಯ, ಸಾರ್ವಜನಿಕ ಸಂಪನ್ಮೂಲಗಳು ಮತ್ತು ಸರ್ಕಾರದ ಉದಾರ ನೀತಿಗಳ ಪ್ರಯೋಜನ ಪಡೆದು ಕಾರ್ಯನಿರ್ವಹಿಸುವ ಕಂಪೆನಿಗಳು ಈ ನಾಡಿನ ಜನರ ಉದ್ಯೋಗದ ಆಶೋತ್ತರಗಳಿಗೂ ಸ್ಪಂದಿಸಬೇಕು. ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ನಡೆಯುವ ಯಾವುದೇ ಅನ್ಯಾಯವನ್ನೂ ನಾವು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಕನ್ನಡಿಗ ಉದ್ಯೋಗಾಕಾಂಕ್ಷಿಗಳು ಪ್ರತಿಭಾವಂತ ವೃತ್ತಿಪರರು ಮತ್ತು ಐಟಿ-ಬಿಟಿ ಕ್ಷೇತ್ರದಲ್ಲಿ ದುಡಿಯುವ ಸಾಮಥ್ರ್ಯ ಹೊಂದಿರುವವರು. ಅವರ ಪ್ರತಿಭೆಗೆ ತಕ್ಕ ಉದ್ಯೋಗಾವಕಾಶ ದೊರೆಯಬೇಕು. ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕು. ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
‘ಕನ್ನಡಿಗರ ಭಾಷೆ, ನೆಲ, ಜಲ ಮತ್ತು ಉದ್ಯೋಗದ ಹಕ್ಕುಗಳ ರಕ್ಷಣೆ ಕರವೇ ಬದ್ಧತೆಯಾಗಿದೆ. ರಾಜ್ಯದ ಐಟಿ-ಬಿಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಲೇಬೇಕು. ಯಾವುದೇ ರೀತಿಯ ಸಬೂಬುಗಳನ್ನು ನಾವು ಒಪ್ಪುವುದಿಲ್ಲ. ಕನ್ನಡಿಗರ ಉದ್ಯೋಗದ ಹಕ್ಕಿನ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕನ್ನಡಿಗರಿಗೆ ಉದ್ಯೋಗಾವಕಾಶ ದೊರೆಯುವವರೆಗೆ, ಉದ್ಯೋಗದಲ್ಲಿ ತಾರತಮ್ಯವಾಗುತ್ತಿದೆ ಎಂಬ ದೂರುಗಳು ನಿಲ್ಲುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ’
-ಟಿ.ಎ.ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷ