ಸಿದ್ದರಾಮಯ್ಯ 

ಬೆಂಗಳೂರು : ಸಿದ್ದರಾಮಯ್ಯ ವಿರುದ್ಧ ʼಸ್ಟಿಂಗ್ʼ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಅಧಿಕೃತ ಪ್ರಕಟನೆ ಹೊರಡಿಸಿದ್ದು, ʼಸ್ಟಿಂಗ್ʼ ವೀಡಿಯೋ ಎಂಬುದು ಕಟ್ಟುಕತೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ವೀಡಿಯೋದಲ್ಲಿನ ವ್ಯಕ್ತಿಗಳನ್ನು ಪತ್ತೆ ಮಾಡಿ ಹೇಳಿಕೆ ದಾಖಲು ಮಾಡಲಾಗಿದ್ದು, ವೀಡಿಯೋದಲ್ಲಿ ಉಲ್ಲೇಖ ಮಾಡಿದ ಯಾವುದೇ ಘಟನೆ ನಡೆದಿಲ್ಲ ಎಂಬುದು ಸಿಸಿಬಿ ತನಿಖೆಯಿಂದ ಗೊತ್ತಾಗಿದೆ.

ಏನಿದೆ ಸಿಸಿಬಿ ಪ್ರಕಟಣೆಯಲ್ಲಿ...?

ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಎಲ್ಲಾ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಅವರ ವಿಚಾರಣೆಯನ್ನು ಸಮಗ್ರವಾಗಿ ನಡೆಸಲಾಗಿದೆ. ಕೆಲವರನ್ನು ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆಗೊಳಪಡಿಸಲಾಗಿದೆ. ಅವರ ಹೇಳಿಕೆಗಳು ಹಾಗೂ ಈವರೆಗೆ ಸಂಗ್ರಹಿಸಲಾದ ಸಾಕ್ಷಾಧಾರಗಳ ಆಧಾರದ ಮೇರೆಗೆ, ವೀಡಿಯೋದಲ್ಲಿ ಉಲ್ಲೇಖಿಸಲಾದ ಅಥವಾ ಸೂಚ್ಯವಾಗಿ ಆರೋಪಿಸಲಾದ ವ್ಯಕ್ತಿಗಳ ವಿರುದ್ಧದ ಆರೋಪಗಳು ಸುಳ್ಳು ಹಾಗೂ ಕಟ್ಟುಕಥೆಯಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಎಲ್ಲ ಅಂಶಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ವೀಡಿಯೋವನ್ನು ಚಿತ್ರೀಕರಿಸಲು ಬಳಸಲಾಗಿದೆ ಎನ್ನಲಾದ ಮೂಲ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿ, ಜಪ್ತಿ ಮಾಡಲಾಗಿದೆ. ವೀಡಿಯೋದ ನೈಜತೆ, ಸಮಗ್ರತೆ ಹಾಗೂ ಚಿತ್ರೀಕರಣಕ್ಕೆ ಸಂಬಂಧಿಸಿದ ಇತರೆ ತಾಂತ್ರಿಕ ಅಂಶಗಳನ್ನು ದೃಢಪಡಿಸುವ ಉದ್ದೇಶದಿಂದ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಾಗಿದೆ.

ಗಮನಾರ್ಹ ಸಂಗತಿಯೆಂದರೆ, 2011ರಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಈ ವೀಡಿಯೋವನ್ನು ಸುಮಾರು 12 ವರ್ಷಗಳ ನಂತರ, ಅಂದರೆ 2023ರಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ತಪ್ಪುದಾರಿಗೆಳೆಯುವಂತಹ ನಿರೂಪಣೆಯನ್ನು ಸೃಷ್ಟಿಸುವ ಹಾಗೂ ದುರುದ್ದೇಶಗಳನ್ನು ಈಡೇರಿಸುವ ಉದ್ದೇಶದಿಂದ ವಿಡಿಯೋವನ್ನು ಪೂರ್ವಯೋಜಕವಾಗಿ ಚಿತ್ರೀಕರಿಸಲಾಗಿದೆಯೇ, ಕೃತಕವಾಗಿ ಸೃಷ್ಟಿಸಲಾಗಿದೆಯೇ? ತಿರುಚಲಾಗಿದೆಯೇ? ಎಂಬುದನ್ನು ಪತ್ತೆಹಚ್ಚುವುದು ತನಿಖೆಯ ಪ್ರಮುಖ ಅಂಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವೀಡಿಯೋ ಚಿತ್ರೀಕರಣಗೊಂಡ ನಂತರ ಯಾರ ವಶದಲ್ಲಿತ್ತು.? ಯಾರಿಂದ ಯಾರಿಗೆ ವರ್ಗಾಯಿಸಲಾಯಿತು? ಹಾಗೂ ಅಂತಿಮವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ವ್ಯಕ್ತಿಗಳ ಕೈಗೆ ಹೇಗೆ ತಲುಪಿತು? ಎಂಬ ಅಂಶಗಳ ಕುರಿತು ತನಿಖೆ ನಡೆಸಲಾಗುತ್ತಿದೆ. 2023ರಲ್ಲಿ ವೀಡಿಯೋ ಚಿತ್ರೀಕರಣಗೊಂಡ ಸಮಯದಿಂದ 2026ರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಅಂತರ್‌ಜಾಲದಲ್ಲಿ ಪ್ರಸಾರವಾಗುವವರೆಗಿನ ವೀಡಿಯೋದ ಸಂಪೂರ್ಣ ಹಸ್ತಾಂತರದ ಲಿಂಕ್‌ಗಳನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.

ವೀಡಿಯೋ ಅಪ್‌ಲೋಡ್ ಮಾಡಲು ಅನಾಮಧೇಯ ಖಾತೆಗಳನ್ನು ಬಳಸಲಾಗಿದ್ದು, ತಮ್ಮ ಗುರುತು ಮತ್ತು ಸ್ಥಳವನ್ನು ಮರೆಮಾಚಲು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್‌ಗಳು (VPN), ಮರೆಮಾಚಲಾದ ಐಪಿ ವಿಳಾಸಗಳು, ವರ್ಚುವಲ್ ಹಾಗೂ ನಕಲಿ ಗುರುತು ಪ್ರದರ್ಶಿಸುವ ಮೊಬೈಲ್ ಸಂಖ್ಯೆಗಳು ಮತ್ತು ಇತರ ಸುಧಾರಿತ ಅನಾಮಧೇಯ ಡಿಜಿಟಲ್ ತಂತ್ರಗಳನ್ನು ಬಳಸಿರುವುದು ಕಂಡುಬಂದಿರುತ್ತದೆ. ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ಆರೋಪಿಯು ಸ್ವತಂತ್ರ ಸಾಮಾಜಿಕ ಜಾಲತಾಣ ವಿಷಯ ಸೃಷ್ಟಿಕರ್ತನಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿರುವುದಲ್ಲದೇ, ನವದೆಹಲಿಯಲ್ಲಿ ನೆಲೆಸಿರುವ ಪ್ರಭಾವಿ ರಾಜಕೀಯ ಸಂಪರ್ಕಗಳನ್ನು ಹೊಂದಿರುವ ಕೆಲವು ವ್ಯಕ್ತಿಗಳೊಂದಿಗೆ ಸಂಬಂಧಗಳಿರುವ ಸಾಧ್ಯತೆಯೂ ಕಂಡುಬಂದಿದೆ.

ಮುಖ್ಯವಾಗಿ, ರಾಜ್ಯದಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿರುವ ವ್ಯಕ್ತಿಗಳ ತೇಜೋವಧೆ ಮಾಡುವ, ಅವರ ಘನತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತರುವ, ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸುವ ಹಾಗೂ ರಾಜಕೀಯ ವಿವಾದ ಮತ್ತು ಸಾರ್ವಜನಿಕರಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವ ಉದ್ದೇಶದಿಂದ ಈ ವೀಡಿಯೋವನ್ನು ಯೋಜಿತವಾಗಿ ಪ್ರಸಾರ ಮಾಡಿರುವ ಸಾಧ್ಯತೆಯನ್ನು ಸೂಚಿಸುವ ಮಹತ್ವದ ಸುಳಿವುಗಳು ತನಿಖೆಯಲ್ಲಿ ಲಭ್ಯವಾಗಿವೆ ಎಂದು ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor