ಹಾಲಿನ ದರ ಲೀಟರ್‌ಗೆ 8 ರೂ. ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ: ಕೃಷ್ಣ ಬೈರೇಗೌಡ
ಸಾಂದರ್ಭಿಕ ಚಿತ್ರ | Photo credit : PTI
ಬೆಂಗಳೂರು: ರಾಜ್ಯದಲ್ಲಿ ಹಾಲಿನ ದರವನ್ನು ಲೀಟರ್‌ಗೆ 8 ರೂ. ಹೆಚ್ಚಳ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬರದಿಂದಾಗಿ ರೈತರು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಬೆಳೆ ಉತ್ಪಾದನೆ ಇಲ್ಲದ ಕಾರಣ ಬಿಕ್ಕಟ್ಟು ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲ ರೀತಿಯಲ್ಲೂ ರೈತರ ನೆರವಿಗೆ ಧಾವಿಸುವುದು ನಮ್ಮ ಧರ್ಮ ಮತ್ತು ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಹತ್ತಾರು ಲಕ್ಷ ರೈತ ಕುಟುಂಬಗಳು ಹೈನುಗಾರಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿವೆ. ಹೈನುಗಾರಿಕೆಯಿಂದ ಬರುವ ಆದಾಯವನ್ನೇ ಅವಲಂಬಿಸಿರುವ ಕುಟುಂಬಗಳು ವೈದ್ಯಕೀಯ ವೆಚ್ಚ ಸೇರಿದಂತೆ ದೈನಂದಿನ ಅಗತ್ಯಗಳನ್ನು ಪೂರೈಸುತ್ತಿವೆ. ಹಾಲು ಉತ್ಪಾದನೆಯಿಂದ ರೈತರಿಗೆ ಕನಿಷ್ಠ ಖಾತರಿ ಆದಾಯ ದೊರೆಯುತ್ತದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಹಾಲಿನ ದರ ಪರಿಷ್ಕರಿಸುವಂತೆ ರೈತರು ಹೋರಾಟ ನಡೆಸಿ ಒತ್ತಡ ತಂದಿದ್ದಾರೆ. ಪಕ್ಷಾತೀತವಾಗಿ ಎಲ್ಲರೂ ಹಾಲಿನ ದರ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದ್ದಾರೆ. ರೈತರ ಬೇಡಿಕೆಗೆ ಸ್ಪಂದಿಸಿ ಹಾಲಿನ ದರ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ ಎಂದರು.
ರಾಜ್ಯದಲ್ಲಿ ಹಾಲಿನ ದರ ಲೀಟರ್‌ಗೆ 46 ರೂ. ಇದ್ದರೆ, ಮಹಾರಾಷ್ಟ್ರದಲ್ಲಿ 59 ರೂ, ರಾಜಸ್ಥಾನ ಮತ್ತು ಕೇರಳದಲ್ಲಿ ತಲಾ 56 ರೂ ಇದೆ. ದೇಶಾದ್ಯಂತ ಹಾಲಿನ ದರ ಸರಾಸರಿ 56 ರೂ ರಷ್ಟಿದೆ. ಎಲ್ಲ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ರೈತರಿಗೂ ನೆರವು ನೀಡಬೇಕಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರತಿದಿನ ಹಾಲಿನ ಉತ್ಪಾದನೆ ಸುಮಾರು 10 ಲಕ್ಷ ಲೀಟರ್‌ನಷ್ಟು ಕಡಿಮೆಯಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಹಾಲಿನ ದರವನ್ನು ಲೀಟರ್‌ಗೆ ಒಟ್ಟು 8 ರೂ. ಹೆಚ್ಚಳ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.