×
Ad

ಆಡಳಿತಾತ್ಮಕ ವಿಳಂಬ, ಮಾರ್ಗಸೂಚಿಗಳ ನೆಪದಲ್ಲಿ ಗ್ರಾಮೀಣ ಗ್ರಂಥಾಲಯ ಯೋಜನೆ ಸ್ಥಗಿತ ಅಕ್ಷಮ್ಯ: ಬಿ.ವೈ. ವಿಜಯೇಂದ್ರ

Update: 2026-05-15 12:30 IST

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಜ್ಞಾನದ ಬೆಳಕಾಗಬೇಕಿದ್ದ ಸುಮಾರು 6,500 ಗ್ರಂಥಾಲಯಗಳು ಕಳೆದ ಆರು ತಿಂಗಳಿನಿಂದ ಮುಚ್ಚಿರುವುದು ಅತ್ಯಂತ ನೋವಿನ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ ವೈ ವಿಜಯೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 260 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷಿ ಯೋಜನೆ ಆಡಳಿತಾತ್ಮಕ ವಿಳಂಬ ಮತ್ತು ಮಾರ್ಗಸೂಚಿಗಳ ನೆಪದಲ್ಲಿ ಸ್ಥಗಿತಗೊಂಡಿರುವುದು ಅಕ್ಷಮ್ಯ ಎಂದಿದ್ದಾರೆ.

ಲಕ್ಷಾಂತರ ಪುಸ್ತಕಗಳು ಓದುಗರಿಲ್ಲದೆ ಧೂಳು ಹಿಡಿಯುತ್ತಿದ್ದರೆ, ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ಅಧ್ಯಯನಕ್ಕೆ ಸೂಕ್ತ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದಾರೆ. ಇದು ಕೇವಲ ಯೋಜನೆಯ ವಿಳಂಬವಲ್ಲ; ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಗ್ರಾಮೀಣ ಯುವಜನರ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ ಎಂದು ಆರೋಪಿಸಿದ್ದಾರೆ.

ಶಿಕ್ಷಣ ಮತ್ತು ಜ್ಞಾನ ಪ್ರತಿಯೊಬ್ಬರ ಮೂಲಭೂತ ಹಕ್ಕು. ತಾಂತ್ರಿಕ ನೆಪಗಳನ್ನು ಬದಿಗಿಟ್ಟು ತಕ್ಷಣವೇ ಈ ಜ್ಞಾನ ದೇಗುಲಗಳ ಬಾಗಿಲು ತೆರೆಯಬೇಕು. ಹಳ್ಳಿಯ ಮಕ್ಕಳು ನಗರದ ವಿದ್ಯಾರ್ಥಿಗಳಂತೆ ಸಮಾನವಾಗಿ ಸ್ಪರ್ಧಿಸಲು ಗ್ರಂಥಾಲಯಗಳು ಅತ್ಯಗತ್ಯವಾಗಿದ್ದು, ರಾಜಕೀಯ ಅಥವಾ ಆಡಳಿತಾತ್ಮಕ ಗೊಂದಲಗಳಿಗೆ ಮಕ್ಕಳ ಭವಿಷ್ಯ ಬಲಿಯಾಗಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು ಯೋಜನೆಯನ್ನು ಮರುಜಾರಿಗೊಳಿಸಿ ಗ್ರಾಮೀಣ ಪ್ರತಿಭೆಗಳಿಗೆ ನೆರವಾಗಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News