"ಇದು AI ವಿಡಿಯೋ, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ": ರಾಸಲೀಲೆ ಆರೋಪ ಕುರಿತು ಡಿಜಿಪಿ ರಾಮಚಂದ್ರರಾವ್ ಪ್ರತಿಕ್ರಿಯೆ
ಗೃಹ ಇಲಾಖೆಗೆ ವರದಿ ಕೇಳಿದ ಸಿಎಂ!
ಬೆಂಗಳೂರು: ರಾಸಲೀಲೆ ಪ್ರಕರಣದ ಆರೋಪವನ್ನು ಡಿಜಿಪಿ ರಾಮಚಂದ್ರರಾವ್ ಅಲ್ಲಗಳೆದಿದ್ದು, ಈ ವಿಡಿಯೋ ನೋಡಿ ನನಗೆ ಶಾಕ್ ಆಗಿದೆ. ಇದರಲ್ಲಿರುವ ಮಹಿಳೆ ಯಾರೆಂಬುದು ನನಗೆ ಗೊತ್ತಿಲ್ಲ. ಇದು ತಿರುಚಿದ ಎಐ ವಿಡಿಯೋ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ.
ಸೋಮವಾರ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ. ನಾನು ಕೂಡ ಆ ವಿಡಿಯೋವನ್ನು ನೋಡಿದ್ದೇನೆ. ಅದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ(AI) ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ ವಿಡಿಯೋ ಆಗಿದೆ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಹಚ್ಚಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿಯ ಷಡ್ಯಂತ್ರ ರೂಪಿಸಿವೆ. ಇದರ ಬಗ್ಗೆ ವಕೀಲರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಗೃಹ ಇಲಾಖೆಗೆ ವರದಿ ಕೇಳಿದ ಸಿಎಂ..!
ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ರಾಮಚಂದ್ರರಾವ್ ತನ್ನ ಕಚೇರಿಯ ಒಳಗಡೆ ಸಮವಸ್ತ್ರದಲ್ಲಿರುವಾಗ ನಡೆದಿರುವ ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಸಿಎಂ ಸೂಚನೆ ನೀಡಿದ್ದು, ವರದಿ ಬಂದ ಕೂಡಲೇ ಡಿಜಿಪಿ ರಾಮಚಂದ್ರರಾವ್ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಭೇಟಿಗೆ ನಿರಾಕರಿಸಿದ ಡಾ.ಜಿ.ಪರಮೇಶ್ವರ್..!
ರಾಸಲೀಲೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಲು ಸೋಮವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ನಿವಾಸಕ್ಕೆ ಡಿಜಿಪಿ ರಾಮಚಂದ್ರರಾವ್ ಆಗಮಿಸಿದ್ದರು. ಈ ವೇಳೆ ಮನೆಯೊಳಗೆ ರಾಮಚಂದ್ರರಾವ್ ಪ್ರವೇಶಿಸುವ ಮುನ್ನವೇ ಜಿ.ಪರಮೇಶ್ವರ್ ಅವರು ಭೇಟಿಗೆ ನಿರಾಕರಿಸಿದರು. ತಮ್ಮ ಸಿಬ್ಬಂದಿ ಮೂಲಕ ಭೇಟಿ ಆಗುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದ್ದರು. ಹೀಗಾಗಿ, ಕೇವಲ ಐದು ನಿಮಿಷದಲ್ಲೇ ರಾಮಚಂದ್ರರಾವ್ ಹಿಂತಿರುಗಬೇಕಾದ ಪ್ರಸಂಗ ನಡೆಯಿತು.