ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸಲಹೆ ಪರಿಗಣಿಸದೆ ಸರಕಾರ ಹಣ ವ್ಯರ್ಥ ಮಾಡುತ್ತಿದೆ: ಬಿ.ಆರ್. ಪಾಟೀಲ್
ಬೆಂಗಳೂರು: ಸರಕಾರವು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸಲಹೆಗಳನ್ನು ಪರಿಗಣಿಸದೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ. ಹೀಗಾಗಿ ಹಣ ವ್ಯರ್ಥವಾಗುತ್ತಿದ್ದು, ಜನರಿಗೂ ಉಪಯೋಗವಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ಇಲ್ಲಿನ ಗಾಂಧಿಭವನದಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಅಗತ್ಯ ಪುರಾವೆ ಮತ್ತು ಫಲಿತಾಂಶ ಆಧಾರಿತ ನೀತಿ ಮತ್ತು ಯೋಜನೆ’ ಎಂಬ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇಕಾಬಿಟ್ಟಿಯಾಗಿ ಯೋಜನೆಗಳನ್ನು ಹಾಕಿಕೊಳ್ಳುವುದರಿಂದ ಹಣ ವ್ಯರ್ಥವಾಗುತ್ತಿದೆ. ಅಲ್ಲದೆ ಜನರಿಗೂ ಉಪಯೋಗವಾಗುವುದಿಲ್ಲ. ಹೀಗಾಗಿ ಸರಕಾರದ ಅನೇಕ ಯೋಜನೆಗಳು ವಿಫಲವಾಗುತ್ತಿವೆ. ಯಾವುದೇ ಯೋಜನೆಗಳನ್ನು ತರುವಾಗ ಪ್ರತಿಯೊಂದು ವಿಷಯವನ್ನು ಕೂಲಂಕುಶವಾಗಿ ಅಧ್ಯಯನ ಮಾಡದಿದ್ದರೆ, ಅನವಶ್ಯಕವಾಗಿ ದುಂದು ವೆಚ್ಚವಾಗುತ್ತದೆ ಎಂದು ಅವರು ಹೇಳಿದರು.
ಈ ಬಾರಿ ನಾವು ಯೋಜನೆಗಳನ್ನು ರೂಪಿಸುವಲ್ಲಿ ಒಂದು ಹಂತಕ್ಕೆ ಮುಟ್ಟುವ ಪ್ರಯತ್ನ ಮಾಡಿದ್ದೇವೆ. ಆದರೂ ನೂರಕ್ಕೆ ನೂರು ಸಂಪೂರ್ಣವಾಗಿ ಯಶಸ್ಸು ಹೊಂದಲು ಸಾಧ್ಯವಾಗಿಲ್ಲ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಯೋಜನಾ ಆಯೋಗವನ್ನು ಮರೆತಿರುವುದೇ ಇದಕ್ಕೆ ಕಾರಣ ಎಂದು ಅವರು ಆರೋಪಿಸಿದರು.
ತಳಮಟ್ಟದಿಂದ ಬಂದಿರುವ ಬೇಡಿಕೆಗಳನ್ನು ಈಡೇರಿಸಬೇಕೆಂಬ ಉದ್ದೇಶದಿಂದ ಜ.25ರೊಳಗಾಗಿ ಎಲ್ಲಾ ಜಿಲ್ಲಾಮಟ್ಟದ ಸಭೆಗಳ ವರದಿಯನ್ನು ತರಸಿಕೊಳ್ಳಲೇಬೇಕು ಎಂದು ನಿರ್ಧರಿಸಿದ್ದೇವೆ. ಸಮಯದ ಅಭಾವ ಇರುವ ಕಾರಣ ಈ ಬಾರಿಯ ಬಜೆಟ್‍ನಲ್ಲಿ ಶಿಕ್ಷಣ ಮತ್ತು ಕೌಶಲ್ಯ, ಆರೋಗ್ಯ, ನೈರ್ಮಲ್ಯ, ನೀರು ಸರಬರಾಜು, ಪರಿಸರ, ಕೃಷಿ, ಮಹಿಳಾ ಮತ್ತು ಮಕ್ಕಳ, ಕಾರ್ಮಿಕ, ಸಮಾಜ ಕಲ್ಯಾಣ ಇಲಾಖೆಗಳಿಗೆ ಮಾತ್ರ ಆದ್ಯತೆ ಕೊಟ್ಟು ಯೋಜನೆಗಳನ್ನು ಸೇರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ನೀತಿ ಮತ್ತು ಯೋಜನಾ ಆಯೋಗದ ಪರಿಕಲ್ಪನೆಯು ಪಂಡಿತ್ ಜವಾಹರಲಾಲ್ ನೆಹರು ಅವರದಾಗಿತ್ತು. ಸುಭಾಷ್ ಚಂದ್ರ ಭೋಸ್ ಅವರು ಇದಕ್ಕೆ ರೂಪುರೇಷೆಯನ್ನು ನೀಡಿದರು. ಆಯೋಗವು ಬಹಳ ವ್ಯವಸ್ಥಿತವಾಗಿ, ನಿಯಮ ಬದ್ಧವಾಗಿ ಎಲ್ಲಾ ರಾಜ್ಯಗಳನ್ನು ಒಳಗೊಂಡು ಕೆಲಸ ಮಾಡುತ್ತಿತ್ತು. ಆದರೆ ಈಗ ಇರುವ ಕೇಂದ್ರ ಸರಕಾರದ ನಿಲುವಿನಿಂದ ನೆಹರು ಅವರ ಕಾಲಕ್ಕೆ ಇದ್ದ ಮಹತ್ವ ಇಂದು ಉಳಿದಿಲ್ಲ ಎಂದು ಅವರು ತಿಳಿಸಿದರು.
ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾತನಾಡಿ, ಆಯವ್ಯಯದಲ್ಲಿ ನಿಗದಿಪಡಿಸುವ ಹಣ ಪರಿಣಾಮಕಾರಿಯಾಗಿ ಯೋಜನೆಗಳಲ್ಲಿ ಅನುಷ್ಠಾನಗೊಳ್ಳಲು ಫಲಿತಾಂಶ ಆಧಾರಿತ ಯೋಜನೆಗಳನ್ನು ರೂಪಿಸುವುದು ಅತ್ಯಂತ ಅವಶ್ಯಕ ಎಂದರು.
ಯೋಜನೆ ಹಾಗೂ ಬಜೆಟ್ ರೂಪಿಸುವಾಗ ನಾವು ಸ್ಥಳೀಯ ಜನರ ಬೇಡಿಕೆ ಅನುಗುಣವಾಗಿ ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳನ್ನು ಕ್ರೋಢೀಕರಿಸಿ ಯೋಜನೆ ರೂಪಿಸುವುದಕ್ಕೆ ಆದ್ಯತೆ ನೀಡಬೇಕು. ಗ್ರಾಮ, ತಾಲೂಕು, ಜಿಲ್ಲೆಗಳಲ್ಲಿನ ಸ್ವತ್ತುಗಳು ಹಾಗೂ ಸ್ಥಳೀಯ ಸಾಮರ್ಥ್ಯದ ಮೇಲೆ ಆದ್ಯತಾ ವಲಯವನ್ನು ಗುರುತಿಸಿ ಹಣವನ್ನು ವಿನಿಯೋಗ ಮಾಡಿದಾಗ ರಾಜ್ಯವು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದುತ್ತದೆ ಎಂದು ಅವರು ತಿಳಿಸಿದರು.
ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ಮಾತನಾಡಿ, ಸಮಯದ ಅಭಾವ ಇರುವ ಕಾರಣ ಈ ಬಾರಿಯ ಬಜೆಟ್‍ನಲ್ಲಿ ಕೆಲವು ಇಲಾಖೆಗಳಿಗೆ ಮಾತ್ರ ಆದ್ಯತೆಯನ್ನು ನೀಡಲಾಗಿದೆ. 2027-28ನೇ ಯೋಜನೆಗಳಾದರೂ ಜನರ ಯೋಜನೆಗಳಾಗಿರಲಿ ಎಂದು ಆಶಿಸುತ್ತೇನೆ ಎಂದರು.
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರಕಾರದ ಕಾರ್ಯದರ್ಶಿಗಳಾದ ರಮಣ್ ದೀಪ್ ಚೌಧರಿ, ಮನೋಜ್ ಜೈನ್, ನಿರ್ದೇಶಕ ಬಸವರಾಜು, ಕರ್ನಾಟಕ ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ನಾರಾಯಣಸ್ವಾಮಿ, ಮಾಜಿ ರಾಜ್ಯಸಭಾ ಸದಸ್ಯ ಪ್ರೊ. ರಾಜೀವ್ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.