ನಮ್ಮದು ಬೂಟಾಟಿಕೆಯ ಗೋರಕ್ಷಣೆಯಲ್ಲ, ನಿಜವಾದ ಗೋರಕ್ಷಣೆ : ಸಚಿವ ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಕಲಬುರಗಿ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಭಯಾನಕವಾಗಿ ಕಾಡುವ ಕಾಲುಬಾಯಿ ರೋಗದ ಲಸಿಕಾಕರಣದಲ್ಲಿ ಶೇ.96 ರಷ್ಟು ಪ್ರಗತಿ ಸಾಧಿಸಿರುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ "ಇದು ನಮ್ಮ ನೈಜ ಗೋರಕ್ಷಣೆ, ಬೂಟಾಟಿಕೆಯ ಗೋರಕ್ಷಣೆಯಲ್ಲ" ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರೈತಾಪಿ ವರ್ಗದ ಜೀವನಾಡಿಯಾಗಿರುವ ಜಾನುವಾರುಗಳನ್ನು ರಕ್ಷಿಸಿದರೆ ರೈತರನ್ನು ರಕ್ಷಿಸಿದಂತೆ, ಈ ಪ್ರಜ್ಞೆಯೊಂದಿಗೆ ನಮ್ಮ ಸರ್ಕಾರ ಕೆಲಸ ಮಾಡುತ್ತದೆಯೇ ಹೊರತು ರಾಜಕೀಯ ಹಿತರಕ್ಷಣೆಗಾಗಿ ಬೂಟಾಟಿಕೆಯ ಗೋರಕ್ಷಣೆ ನಮ್ಮದಲ್ಲ ಎಂದು ಬರೆದುಕೊಂಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕಾಕರಣದಲ್ಲಿ ಶೇ.96ರಷ್ಟು ಪ್ರಗತಿ ಸಾಧಿಸುವ ಮೂಲಕ ಜಾನುವಾರುಗಳ ರಕ್ಷಣೆಯಲ್ಲಿ ಮಹತ್ವದ ಹೆಜ್ಜೆಯನ್ನು ಇಡಲಾಗಿದೆ. ಜಿಲ್ಲೆಯಲ್ಲಿನ ಒಟ್ಟು 3,55, 653 ಜಾನುವಾರುಗಳ ಪೈಕಿ 3,41,136 ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕೆ ನೀಡಲಾಗಿದೆ. ಗರ್ಭ ಕಟ್ಟಿದ ಮತ್ತು ಇತರ ರೋಗಗಳಿರುವ ಜಾನುವಾರುಗಳಿಗೆ ಲಸಿಕೆ ಹಾಕುವಂತಿಲ್ಲ, ಈ ಕಾರಣಕ್ಕಾಗಿ 14,500 ಜಾನುವಾರುಗಳು ಲಸಿಕಾಕರಣದಿಂದ ಹೊರಗುಳಿದಿವೆ ಎಂದು ತಿಳಿಸಿದ್ದಾರೆ.
ಪಶುವೈದ್ಯಕೀಯ ಸಿಬ್ಬಂದಿ ಪ್ರತಿ ಹಳ್ಳಿಗಳಿಗೂ ತೆರಳಿ, ರೈತರಲ್ಲಿ ಜಾಗೃತಿ ಮೂಡಿಸಿದರ ಪರಿಣಾಮ ಈ ಪ್ರಮಾಣದ ಯಶಸ್ಸು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
2022ಕ್ಕೂ ಮೊದಲು ರಾಜ್ಯದಲ್ಲಿ ಕಾಲುಬಾಯಿ ರೋಗದ ಲಸಿಕೆಯ ತೀವ್ರ ಕೊರತೆ ದಾಖಲಾಗಿತ್ತು, ಕಾಲುಬಾಯಿ ರೋಗಕ್ಕೆ ರಾಜ್ಯದ ಜಾನುವಾರುಗಳ ಸಾವು ತೀವ್ರ ಏರಿಕೆ ಕಂಡಿತ್ತು ಎಂಬ ಸಂಗತಿ ಈಗ ಇತಿಹಾಸ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬರೆದುಕೊಂಡಿದ್ದಾರೆ.