ಪವರ್ ಟಿವಿ ರಾಕೇಶ್ ಶೆಟ್ಟಿಗೆ ಮೂರು ತಿಂಗಳ ಸಿವಿಲ್ ಜೈಲು ಶಿಕ್ಷೆ: ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಕ್ಕೆ ದಂಡನೆ
ರಾಕೇಶ್ ಶೆಟ್ಟಿ
ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯವು, ಪವರ್ ಟಿವಿ ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಂಜೀವ ಶೆಟ್ಟಿ ಅವರಿಗೆ ಮೂರು ತಿಂಗಳ ಕಾಲ ಸಿವಿಲ್ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನ್ಯಾಯಾಧೀಶರಾದ ಅಬ್ದುಲ್ ಸಲೀಂ ಅವರು ಈ ಆದೇಶವನ್ನು ಹೊರಡಿಸಿದ್ದು, ನ್ಯಾಯಾಲಯವು ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಿವಿಲ್ ಪ್ರಕ್ರಿಯಾ ಸಂಹಿತೆಯ (CPC) ಆರ್ಡರ್ 39 ರೂಲ್ 2A ಅಡಿಯಲ್ಲಿ ಈ ಶಿಕ್ಷೆಯನ್ನು ವಿಧಿಸಲಾಗಿದೆ.
ಈ ಪ್ರಕರಣದ ಹಿನ್ನೆಲೆಯೆಂದರೆ, ರವಿಕಾಂತೇಗೌಡ ಅವರು ತಮ್ಮ ವಿರುದ್ಧ ಯಾವುದೇ ಆಧಾರರಹಿತ, ಅವಹೇಳನಕಾರಿ ಅಥವಾ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ಕೋರಿ ಪವರ್ ಟಿವಿ ಸೇರಿದಂತೆ ಹಲವರ ವಿರುದ್ಧ 2023ರಲ್ಲಿ ದಾವೆ ಹೂಡಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯವು ಸೆಪ್ಟೆಂಬರ್ 8, 2023 ರಂದು ಮಧ್ಯಂತರ ತಡೆಯಾಜ್ಞೆ ನೀಡಿ, ಅರ್ಜಿದಾರರ ಬಗ್ಗೆ ಯಾವುದೇ ನಕಾರಾತ್ಮಕ ಚಿತ್ರಣ ನೀಡುವಂತಹ ವಿಷಯಗಳನ್ನು ಪ್ರಸಾರ ಮಾಡಬಾರದು ಎಂದು ಸ್ಪಷ್ಟವಾಗಿ ಆದೇಶಿಸಿತ್ತು.
ಆದರೆ, ನ್ಯಾಯಾಲಯದ ಈ ಆದೇಶ ಜಾರಿಯಲ್ಲಿದ್ದರೂ ಸಹ, ಪವರ್ ಟಿವಿ ವಾಹಿನಿಯು ಸೆಪ್ಟೆಂಬರ್ 22 ಮತ್ತು 23, 2023 ರಂದು ರವಿಕಾಂತೇಗೌಡರ ವಿರುದ್ಧ ಸರಣಿ ಸುದ್ದಿಗಳನ್ನು ಪ್ರಸಾರ ಮಾಡಿತ್ತು. ಈ ಕಾರ್ಯಕ್ರಮಗಳಲ್ಲಿ ರವಿಕಾಂತೇಗೌಡರನ್ನು "ದುಷ್ಟ ಐಪಿಎಸ್ ಅಧಿಕಾರಿ" ಎಂದು ಕರೆಯಲಾಗಿತ್ತು ಮತ್ತು ಅವರು ಕೋಟ್ಯಂತರ ರೂಪಾಯಿ ಹಣಕ್ಕಾಗಿ ಉದ್ಯಮಿಯೊಬ್ಬರಿಗೆ ಕಿರುಕುಳ ನೀಡುತ್ತಿದ್ದಾರೆ ಹಾಗೂ ಸೆಟ್ಲ್‌ಮೆಂಟ್ ಮಾಡಿಕೊಳ್ಳಲು ತಮ್ಮದೇ ಆದ ಒಂದು "ಗ್ಯಾಂಗ್" ಹೊಂದಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಮಾಡಲಾಗಿತ್ತು. ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ರವಿಕಾಂತೇಗೌಡರ ಫೋಟೋಗಳನ್ನು ಬಳಸಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿತ್ತು.
ವಿಚಾರಣೆ ವೇಳೆ ಅರ್ಜಿದಾರರು ಸಲ್ಲಿಸಿದ ಫೋಟೋಗಳು ಮತ್ತು ಸುದ್ದಿ ಪ್ರಸಾರದ ಧ್ವನಿಮುದ್ರಿಕೆ ಹೊಂದಿದ್ದ ಪೆನ್-ಡ್ರೈವ್ ಸಾಕ್ಷ್ಯಗಳನ್ನು ನ್ಯಾಯಾಲಯವು ಕೂಲಂಕಷವಾಗಿ ಪರಿಶೀಲಿಸಿದೆ. "ನ್ಯಾಯಾಲಯದ ಆದೇಶವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದೇಶದ ಬಗ್ಗೆ ಅರಿವಿದ್ದರೂ ಅದನ್ನು ಉಲ್ಲಂಘಿಸಿರುವುದು ಅಕ್ಷಮ್ಯ" ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು, ರಾಕೇಶ್ ಶೆಟ್ಟಿ ಅವರಿಗೆ ಮೂರು ತಿಂಗಳ ಸಿವಿಲ್ ಜೈಲು ಶಿಕ್ಷೆ ವಿಧಿಸಿದರು. ನಿಯಮದಂತೆ, ಜೈಲಿನಲ್ಲಿ ಇರುವ ಅವಧಿಯಲ್ಲಿ ರಾಕೇಶ್ ಶೆಟ್ಟಿ ಅವರಿಗೆ ತಗಲುವ ದಿನಚರಿ ಭತ್ಯೆಯನ್ನು ಅರ್ಜಿದಾರರಾದ ರವಿಕಾಂತೇಗೌಡ ಅವರೇ ಭರಿಸಬೇಕು ಎಂದು ನ್ಯಾಯಾಲಯವು ಸೂಚಿಸಿದೆ.
ನ್ಯಾಯಾಲಯವು ಈ ಆದೇಶದ ಮುಂದುವರಿದ ಭಾಗವಾಗಿ, ರಾಕೇಶ್ ಶೆಟ್ಟಿ ಅವರನ್ನು ಸಿವಿಲ್ ಜೈಲಿನಲ್ಲಿ ಇರಿಸಲು ತಗಲುವ ದಿನಚರಿ ಭತ್ಯೆಯನ್ನು (Subsistence Allowance) ಠೇವಣಿ ಇಡಲು ಜನವರಿ 31, 2026 ರಂದು ಮುಂದಿನ ದಿನಾಂಕವನ್ನು ನಿಗದಿಪಡಿಸಿದೆ. ಕಾನೂನಿನ ನಿಯಮದಂತೆ, ಒಬ್ಬ ವ್ಯಕ್ತಿಯನ್ನು ಸಿವಿಲ್ ಜೈಲು ಶಿಕ್ಷೆಗೆ ಒಳಪಡಿಸಿದಾಗ, ಆತನ ಜೈಲುವಾಸದ ಖರ್ಚು ವೆಚ್ಚಗಳನ್ನು ಭರಿಸಲು ಸರ್ಕಾರವು ನಿಗದಿಪಡಿಸಿದ ಹಣವನ್ನು ದೂರುದಾರರೇ (ಈ ಪ್ರಕರಣದಲ್ಲಿ ರವಿಕಾಂತೇಗೌಡ ಅವರು) ಪಾವತಿಸಬೇಕಾಗುತ್ತದೆ. ಈ ಭತ್ಯೆಯನ್ನು ಪಾವತಿಸಿದ ನಂತರವಷ್ಟೇ ಶಿಕ್ಷೆಯ ಅನುಷ್ಠಾನದ ಪ್ರಕ್ರಿಯೆಗಳು ಮುಂದುವರಿಯಲಿವೆ.