ಬೆಂಗಳೂರು:  “ಸಾರ್ವಜನಿಕ ಕ್ಷೇತ್ರದಲ್ಲಿ ನಾಯಕರಿಗೆ ಮುಜುಗರ ಉಂಟುಮಾಡುವ ಕೆಲಸದಿಂದ ಮಾಧ್ಯಮಗಳಲ್ಲಿ ಅಹಿತಕರ ಸುದ್ದಿಗಳು ಬಂದಿದ್ದವು. ಈ ವಿಚಾರವಾಗಿ ಕಾರಣ ಕೇಳಿ ನೋಟೀಸ್ ನೀಡಿ ಉತ್ತರ ನೀಡಲು ಮೂರು ದಿನಗಳ ಕಾಲಾವಕಾಶ ನೀಡಲಾಗಿತ್ತು. ಅವರಿಂದ ಉತ್ತರ ಬಾರದ ಕಾರಣ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ” ಎಂದು  ಕೆಪಿಸಿಸಿ ಅಧ್ಯಕ್ಷ ಬಿ. ಕೆ ಹರಿಪ್ರಸಾದ್ ಅವರು ಕೃಪಾ ಆಳ್ವಾ ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನೋಟೀಸ್ ಅವರಿಗೆ ತಲುಪಿಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, “ಅವರಿಗೆ ಕಳುಹಿಸಿದ ನೋಟೀಸ್ ವಾಪಸ್ ಬಂದಿದೆ. ಹೀಗಾಗಿ ಬೇರೆ ವಿಧಿ ಇಲ್ಲದೆ ಈ ಕ್ರಮ ಕೈಗೊಳ್ಳಲಾಗಿದೆ” ಎಂದರು.

ಕೃಪಾ ಆಳ್ವಾ ಅವರು ವಿದೇಶಕ್ಕೆ ಹೋಗಿರುವ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಐಬಿ, ಸಿಬಿಐ ನೋಡಿಕೊಳ್ಳುತ್ತದೆ. ನಾನು ಅದರ ಬಗ್ಗೆ ನೋಡುವುದಿಲ್ಲ” ಎಂದರು.

ಇಷ್ಟು ತಡವಾಗಿ ಕ್ರಮ ಯಾಕೆ ಎಂಬ ಬಗ್ಗೆ ಕೇಳಿದಾಗ, “ನಾವು ದುಡುಕಿ ಹೆಜ್ಜೆ ಇಡುವ ಮುನ್ನ, ಅವರನ್ನು ಕೇಳಿ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಒಂದು ಅವಕಾಶ ನೀಡಬೇಕು. ಅವರು ಉತ್ತರ ನೀಡದೇ ಇದ್ದಾಗ ತೀರ್ಮಾನ ಕೈಗೊಂಡಿದ್ದೇವೆ” ಎಂದರು.

ಕೃಪ ಆಳ್ವಾ ಅವರ ಹಿಂದೆ ಬೇರೆ ಯಾರಾದರೂ ಇದ್ದಾರ ಎಂಬ ವಿಚಾರವಾಗಿ ಪಕ್ಷದಲ್ಲಿ ಆಂತರಿಕ ತನಿಖೆ ಮಾಡಿಸುತ್ತೀರಾ ಎಂದು ಕೇಳಿದಾಗ, “ ಕೃಪಾ ಆಳ್ವಾ ಅವರ ವಿರುದ್ಧ ನೇರ ಸಾಕ್ಷಿ ಇರುವ ಕಾರಣ ಉಚ್ಛಾಟಿಸಿದ್ದೇವೆ” ಎಂದರು.

ನಾಗ್ಪುರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಬಗ್ಗೆ ಕೇಳಿದಾಗ, “ನಾಗ್ಪುರ ಎಂದರೆ ಕನ್ನಡದಲ್ಲಿ ಹಾವಿನಪುರ. ದೇಶದಲ್ಲಿ ದ್ವೇಷದ ವಿಷ ಕಾರುವ ಸಂಘಟನೆ ಕತ್ತಿಗೆ ಕೈ ಹಾಕಿ ಹಿಡಿದಿದ್ದೇವೆ. ಅಲ್ಲಿ ಆರಂಭವಾಗಿದ್ದು, ದೇಶದಲ್ಲಿ ಅವರನ್ನು ಮಣಿಸುವ ಸಂದೇಶ ರವಾನಿಸುತ್ತೇವೆ” ಎಂದರು.

ಕಾಂಗ್ರೆಸ್ ಪಕ್ಷವನ್ನು ಮಣಿಸಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಕೇಳಿದಾಗ, “ಕಾಂಗ್ರೆಸ್ ಸೋಲಿಸಿದ್ದೇವೆ ಎಂದು ಹೇಳಿಕೊಂಡು ಹೋದರೆ ಆಗುವುದಿಲ್ಲ. ಮಹಾಮಾನವನ ಕ್ಷೇತ್ರ ವಾರಣಾಸಿಯಲ್ಲಿ ಬಹಳ ಕೆಟ್ಟದಾಗಿ ಸೋತಿದ್ದಾರೆ. ಬಿಜೆಪಿ ಅಧ್ಯಕ್ಷನ ಕ್ಷೇತ್ರ ಬಿಹಾರದಲ್ಲಿ, ನಿತೀನ್ ಗಡ್ಕರಿ ಅವರ ಕ್ಷೇತ್ರದಲ್ಲಿ, ಯೋಗಿ ಆದಿತ್ಯನಾಥ್ ಕ್ಷೇತ್ರದಲ್ಲಿ ಸೋತಿದ್ದಾರೆ” ಎಂದು ತಿಳಿಸಿದರು.

ದೇವೇಗೌಡರನ್ನು ಯಡಿಯೂರಪ್ಪ ಅವರು ಭೇಟಿ ಮಾಡಿದ ಬಳಿಕ ಈ ಸರ್ಕಾರದ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ ಎಂದು ಕೇಳಿದಾಗ, “ಆನೆ ನಡೆಯುವಾಗ ಏನಾದರೂ ಬೀಳಬಹುದು ಎಂದು ಅದರ ಹಿಂದೆ ತೋಳ ಮತ್ತು ನರಿ ನಡೆದುಕೊಂಡು ಹೋಗುತ್ತಿರುತ್ತದೆ. ಅದರಲ್ಲಿ ತಪ್ಪೇನಿಲ್ಲ” ಎಂದು ತಿರುಗೇಟು ನೀಡಿದರು.

ದೆಹಲಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಸಲು ಹೋರಾಟಕ್ಕೆ ಕರೆ ನೀಡಿದ್ದಾರೆ. ಕರ್ನಾಟಕದಿಂದ ಹೋಗಲು ರೈಲ್ವೇಗೆ ಅನುಮತಿ ನೀಡಿರಲಿಲ್ಲ. ಆ ಮೂಲಕ ನಾವು ಭಾಗವಹಿಸಲು ತೊಂದರೆ ನೀಡಿದ್ದಾರೆ. ನಮ್ಮ ಕಾರ್ಯಕರ್ತರು ಈಗಾಗಲೇ ಸಹಸ್ರಾರು ಸಂಖ್ಯೆಯಲ್ಲಿ ದೆಹಲಿ ತಲುಪಿದ್ದು, ರಾಮಲೀಲಾ ಮೈದಾನದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆಗಾಗಿ ದೊಡ್ಡ ಹೋರಾಟ ನಡೆಯಲಿದೆ” ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor