ರಾಜ್ಯೋತ್ಸವ ಪಟ್ಟಿ ತಿದ್ದುಪಡಿ: ಉಡುಪಿಯ ವೈದ್ಯ ಡಾ.ಚಂದ್ರಶೇಖರ್ ಹೆಸರು ಕೈಬಿಟ್ಟಿದಕ್ಕೆ ತೀವ್ರ ಅಸಮಾಧಾನ
ಅನ್ಯಾಯ ಸರಿಪಡಿಸಿ ಸೇವೆಗೆ ತಕ್ಕ ಗೌರವ ನೀಡುವಂತೆ ಆಗ್ರಹ
Dr. G.S.Chandrashekhar
ಉಡುಪಿ, ಅ.31: ಕರ್ನಾಟಕ ಸರಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಘೋಷಿಸಿದ ಕೆಲವೇ ಕ್ಷಣದಲ್ಲಿ ತಾಂತ್ರಿಕ ಕಾರಣ ನೀಡಿ, ಮೊದಲ ಪಟ್ಟಿಯಲ್ಲಿದ್ದ ಉಡುಪಿ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಅವರನ್ನು ಕೈಬಿಟ್ಟು ಉತ್ತರ ಕನ್ನಡ ಜಿಲ್ಲೆಯ ಜಿ.ಯು.ಭಟ್ ರಿಗೆ ಪ್ರಶಸ್ತಿ ಘೋಷಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಸರಕಾರದ ಈ ಕ್ರಮದ ಬಗ್ಗೆ ಚರ್ಚೆ ನಡೆಯುತ್ತಿದೆ.
ಪ್ರಶಸ್ತಿ ಪಟ್ಟಿಯಲ್ಲಿ ಸಮಾಜ ಕ್ಷೇತ್ರದಲ್ಲಿ ಆದರ್ಶ ಚಾರಿಟೇಬಲ್ ಟ್ರಸ್ಟ್ ನ ಡಾ.ಜಿ.ಎಸ್.ಚಂದ್ರಶೇಖರ್ ಹೆಸರು ಘೋಷಿಸಲಾಗಿತ್ತು. ಆದರೆ ಅದರ ಜಿಲ್ಲಾ ವಿಭಾಗದಲ್ಲಿ ಉಡುಪಿಯ ಬದಲು ಉತ್ತರ ಕನ್ನಡ ಎಂಬುದಿತ್ತು. ಈ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಸರಕಾರ ಮತ್ತೊಂದು ಆದೇಶ ಹೊರಡಿಸಿ ‘ಸಮಾಜ ಸೇವೆ ಕ್ಷೇತ್ರದಲ್ಲಿ ಡಾ.ಜಿ.ಎಸ್.ಚಂದ್ರಶೇಖರ್ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಆಯ್ಕೆ ಮಾಡಲಾಗಿತ್ತು. ತಾಂತ್ರಿಕ ಕಾರಣಗಳಿಂದಾಗಿ ತಪ್ಪಾದ ಕಾರಣ ಅವರ ಹೆಸರನ್ನು ಕೈಬಿಟ್ಟು ಉತ್ತರ ಕನ್ನಡ ಜಿಲ್ಲೆಯವರೇ ಆದ ಗಜಾನನ ಉಮಾಮಹೇಶ್ವರ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿತ್ತು.
‘ಜಿ.ಯು. ಭಟ್ ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸಮಾಜ ಸೇವೆಯಲ್ಲಿ ನಿರತರಾಗಿರುವ ಜಿ.ಯು.ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ದಯವಿಟ್ಟು ತಿದ್ದುಪಡಿ ಮಾಡಿಕೊಳ್ಳುವಂತೆ ಕೋರಿದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.
ಸಾರ್ವಜನಿಕ ಅವಮಾನ: ಡಾ.ಭಂಡಾರಿ
‘ಕಳೆದ ಮೂವತ್ತು ವರ್ಷಗಳಿಂದ ಸಾರ್ವಜನಿಕವಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ.ಜಿ.ಎಸ್.ಚಂದ್ರಶೇಖರ್ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ತಾಂತ್ರಿಕ ಕಾರಣ ನೀಡಿ ಕೈಬಿಡಲಾಗಿದೆ. ಪಟ್ಟಿಯಲ್ಲಿ ಜಿಲ್ಲೆಯ ಹೆಸರು ತಪ್ಪಾಗಿದ್ದರೆ, ಉತ್ತರ ಕನ್ನಡ ಬದಲು ಉಡುಪಿ ಎಂದು ಒಂದು ಸಾಲಿನ ತಿದ್ದುಪಡಿ ಆದೇಶ ಹೊರಡಿಸಿದರೆ ಸಾಕು. ಇಡೀ ರಾಜ್ಯಕ್ಕೆ ಘೋಷಿಸಿದ ಗೌರವವನ್ನೇ ಹಿಂಪಡೆಯುವುದು ತಿದ್ದುಪಡಿಯಲ್ಲ. ಯಾವ ತಪ್ಪನ್ನೂ ಮಾಡದ ವ್ಯಕ್ತಿಗೆ ಮಾಡುವ ಸಾರ್ವಜನಿಕ ಅವಮಾನ' ಎಂದು ಮನೋವೈದ್ಯ ಡಾ.ಪಿ.ವಿ.ಭಂಡಾರಿ ಟೀಕಿಸಿದ್ದಾರೆ.
ಡಾ.ಜಿ.ಎಸ್.ಚಂದ್ರಶೇಖರ್ ಅವರಿಗೆ ಘೋಷಿಸಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಹೆಸರಿನೊಂದಿಗೆ ಮರು ಘೋಷಿಸಬೇಕು ಎಂದು ಡಾ.ಪಿ.ವಿ.ಭಂಡಾರಿ ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಡಾ.ಜಿ.ಎಸ್.ಚಂದ್ರಶೇಖರ್ ಅವರಿಗೆ ಅನ್ಯಾಯವಾಗಿದ್ದು, ಇದು ಖಂಡನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಅಧ್ಯಕ್ಷ ರವಿರಾಜ್ ಎಚ್.ಪಿ. ಹೇಳಿದ್ದಾರೆ.
30ವರ್ಷಗಳಿಗೂ ಹೆಚ್ಚು ಕಾಲ ವೈದ್ಯಕೀಯ ಸೇವೆಯ ಜೊತೆಗೆ ನಿರಂತರ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ.ಚಂದ್ರಶೇಖರ್ ಸೇವೆ ಅನನ್ಯವಾದುದು. ತಾಂತ್ರಿಕ ದೋಷ ಎಂಬ ಕಾರಣ ನೀಡಿ ರಾಜ್ಯೋತ್ಸವ ಪಟ್ಟಿಯಿಂದ ಅವರ ಹೆಸರನ್ನು ತೆಗೆದಿರುವುದು ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ಇದು ಅವರನ್ನು ನಂಬಿ ಗೌರವಿಸುವ ಸಮಸ್ತ ಸಮಾಜಕ್ಕೂ ಮಾಡಿದ ಅವಮಾನ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಡಾ.ಚಂದ್ರಶೇಖರ್ ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಅವರ ಸೇವೆಗೆ ತಕ್ಕ ಗೌರವವನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.