ಸರಕಾರ ನಡೆಸುವ ನಾವೇ ಯಾಕೆ ಪ್ರತಿಭಟನೆ ನಡೆಸುವುದಕ್ಕೆ ಹೋಗುತ್ತೇವೆ?: ಡಿಸಿಎಂ ಪರಮೇಶ್ವರ್
''ಚುನಾವಣಾ ಆಯೋಗಕ್ಕೆ ಮೆಮೊರಾಂಡಂ ಸಲ್ಲಿಸಲು ತೆರಳಿದ್ದೆವು''
ಬೆಂಗಳೂರು, ಅ.3: ನಾವು ಪ್ರತಿಭಟನೆ ಮಾಡಲು ಹೋಗಿರಲಿಲ್ಲ. ಚುನಾವಣಾ ಆಯೋಗಕ್ಕೆ ಮೆಮೊರಾಂಡಂ ಸಲ್ಲಿಸಲು ಹೋಗಿದ್ದೆವು. ಅವರು ನಮಗೆ ಸರಿಯಾಗಿ ಉತ್ತರ ನೀಡದ ಹಿನ್ನೆಲೆಯಲ್ಲಿ ಉತ್ತರ ನೀಡುವವರೆಗೂ ಅಲ್ಲಿಯೇ ಕುಳಿತುಕೊಂಡಿದ್ದೆವು. ಸರಕಾರ ನಡೆಸುವವರು ನಾವು. ನಾವು ಯಾಕೆ ಪ್ರತಿಭಟನೆ ನಡೆಸುವುದಕ್ಕೆ ಹೋಗುತ್ತೇವೆ?. ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ ಯಾರೂ ಪ್ರತಿಭಟನೆ ಮಾಡಲು ಹೋಗಿರಲಿಲ್ಲ. ಈ ಕನಿಷ್ಠ ಪ್ರಜ್ಞೆ ನಮಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಫಾರಂ–7 ಮೂಲಕ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದರು.
ಫಾರಂ–7 ಅರ್ಜಿಗಳ ವಿಚಾರವಾಗಿ ಈಗಾಗಲೇ ಹಲವು ಕಡೆ ಎಫ್ಐಆರ್ ಗಳು ದಾಖಲಾಗಿವೆ. ಫಾರಂ–7 ಅರ್ಜಿಗಳನ್ನು ಒಟ್ಟಾಗಿ ಸಂಗ್ರಹಿಸಿ, ಸಹಿ ಮಾಡಿ ಬಂಡಲ್ ಗಳ ರೂಪದಲ್ಲಿ ಸಲ್ಲಿಸಿರುವವರ ವಿರುದ್ಧ ಕೆಲವು ಕಡೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ಚುನಾವಣಾ ಆಯೋಗವನ್ನು ಕೋರಿದ್ದೇವೆ. ಏಳು ದಿನಗಳ ಕಾಲ ನೋಟಿಸ್ ನೀಡಿ ಕಾಯ್ದು, ನಂತರ ಎಫ್ಐಆರ್ ದಾಖಲಿಸುವುದಾಗಿ ಚುನಾವಣಾ ಆಯೋಗವು ಪತ್ರದ ಮೂಲಕ ತಿಳಿಸಿದೆ. ಅದರಂತೆ ಮುಂದಿನ ಕ್ರಮ ಕೈಗೊಳ್ಳಬೇಕಿದೆ. ಎಫ್ಐಆರ್ ದಾಖಲಾದ ನಂತರ ಪ್ರಕರಣದಲ್ಲಿ ಬೇರೆ ರೀತಿಯ ಬೆಳವಣಿಗೆಗಳು ನಡೆಯಲಿವೆ ಎಂದು ಹೇಳಿದರು.
ಇದು ದೊಡ್ಡ ರೀತಿಯ ಹಗರಣ. ಫಾರಂ –7 ಅರ್ಜಿಗಳು ಎಲ್ಲಿ ಮುದ್ರಣವಾಗಿವೆ? ಎಲ್ಲೋ ಒಂದು ಕಡೆ ಕೇಂದ್ರೀಕೃತವಾಗಿ ಮುದ್ರಣ ಮಾಡಿ, ಸಂಪೂರ್ಣ ಮಾಹಿತಿಯನ್ನು ಪ್ರಿಂಟ್ ಮಾಡಲಾಗಿದೆ. ನಂತರ ಅರ್ಜಿ ಸಲ್ಲಿಸುವವರ ಹೆಸರು ಮತ್ತು ಎಪಿಕ್ (EPIC) ಸಂಖ್ಯೆಯನ್ನು ಮಾತ್ರ ನಮೂದಿಸಿ ಸಹಿ ಮಾಡಲಾಗಿದೆ. ಒಂದೊಂದು ಬಂಡಲ್ ನಲ್ಲಿ ಒಂದೇ ಸಮುದಾಯದ 50ರಿಂದ 60 ಜನರ ಅರ್ಜಿಗಳನ್ನು ಒಟ್ಟಾಗಿ ಸಲ್ಲಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಇವರಿಗೆ ಈ ಎಲ್ಲ ಮಾಹಿತಿ ಹೇಗೆ ತಿಳಿಯಿತು? ಅರ್ಜಿಗಳನ್ನು ಮುದ್ರಿಸಿದವರು ಯಾರು? ಎಲ್ಲಿ ಮುದ್ರಿಸಲಾಗಿದೆ? ಇದರ ಹಿಂದೆ ಹಲವು ಸಂಗತಿಗಳು ನಡೆಯುತ್ತಿವೆ ಎಂಬ ಅನುಮಾನವಿದೆ ಎಂದರು.
ಅಗತ್ಯವಿರುವ ಪುರಾವೆಗಳನ್ನು ಸಂಬಂಧಪಟ್ಟ ತನಿಖಾ ಸಂಸ್ಥೆಗಳ ಮುಂದೆ ಸೂಕ್ತ ಸಮಯದಲ್ಲಿ ಸಲ್ಲಿಸಲಾಗುವುದು. ಈಗ ಆರೋಪದ ಬಗ್ಗೆ ಪ್ರಸ್ತಾಪಿಸಿದ್ದೇವೆ. ಅಗತ್ಯವಿರುವ ದಾಖಲೆಗಳನ್ನು ಸಂಬಂಧಪಟ್ಟ ಏಜೆನ್ಸಿಗಳ ಮುಂದೆ ನೀಡುತ್ತೇವೆ ಎಂದು ತಿಳಿಸಿದರು.
ಆರೋಪಗಳ ಕುರಿತು ತನಿಖೆ ನಡೆಯಲಿ :
ಯಾರು ಬೇಕಾದರೂ ಏನು ಬೇಕಾದರೂ ವ್ಯಾಖ್ಯಾನ ಮಾಡಬಹುದು. ಆದರೆ ತಪ್ಪು ನಡೆದಿದ್ದರೆ ಅದನ್ನು ತಪ್ಪು ಎಂದು ಹೇಳಲೇಬೇಕು. ಈ ವಿಚಾರವನ್ನು ಮುಚ್ಚಿಹಾಕಲು ವಿರೋಧ ಪಕ್ಷದವರು ಬೇರೆ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾವು ಯಾವುದೇ ಪಕ್ಷದವರನ್ನು ಗುರಿಯಾಗಿಸಿಕೊಂಡು ಆರೋಪ ಮಾಡಿಲ್ಲ. ಬೆಳಗಾವಿಯಲ್ಲಿ ಕೆಲವರು ತಪ್ಪಾಗಿದೆ ಎಂದು ಒಪ್ಪಿಕೊಂಡು, ಲಿಖಿತವಾಗಿ ಹಿಂಪಡೆದಿರುವ ಉದಾಹರಣೆಯೂ ಇದೆ ಎಂದು ತಿಳಿಸಿದರು.
ಅರ್ಜಿಗಳನ್ನು ಸಲ್ಲಿಸಿದವರು ಬೆದರಿಕೆಗೆ ಒಳಗಾಗಿ ಹಿಂಪಡೆದಿದ್ದಾರೆ ಎಂಬ ಮಾಧ್ಯಮದವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಅರ್ಜಿ ಹಿಂಪಡೆದವರು ಚಿಕ್ಕ ಮಕ್ಕಳಲ್ಲ. ಅರ್ಜಿ ಸಲ್ಲಿಸುವಾಗ ಅವರಿಗೆ ಪ್ರಜ್ಞೆ ಇತ್ತು ಅಲ್ವಾ?. ಈಗ ವಿರೋಧ ಪಕ್ಷದವರು ತಮ್ಮನ್ನು ರಕ್ಷಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು. ತನಿಖೆ ನಡೆಸುವುದಕ್ಕೆ ನಮ್ಮ ಯಾವುದೇ ತಕರಾರಿಲ್ಲ. ತನಿಖೆ ನಡೆಸಿ, ಯಾವುದೇ ತಪ್ಪು ನಡೆದಿಲ್ಲ ಮತ್ತು ಎಲ್ಲವೂ ಸರಿಯಾಗಿದೆ ಎಂದು ಸಾಬೀತಾದರೆ ಅದನ್ನು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ಆದರೆ ತಪ್ಪಾಗಿದೆ ಎಂಬುದು ನಮ್ಮ ಆರೋಪವಾಗಿದ್ದು, ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಒದಗಿಸುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಲಿ. ತನಿಖೆಯ ನಂತರ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.