×
Ad

ನಿರೀಕ್ಷೆಗಳು ಮತ್ತು ಭ್ರಮನಿರಸನಗಳು

ಕಾಂಗ್ರೆಸ್ ಸರಕಾರಕ್ಕೆ ಮೂರು ವರ್ಷಗಳು-ಒಂದು ಜನವಿಮರ್ಶೆ

Update: 2026-05-20 10:52 IST

ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹಾಗೂ ಬಜೆಟ್ ಭಾಷಣಗಳಲ್ಲಿ ಬಿಜೆಪಿಗೆ ನಿಜವಾದ ಪರ್ಯಾಯ ಸರಕಾರ ಕೊಡುವುದಾಗಿ ಭರವಸೆ ನೀಡಿತ್ತು. ಅದರಲ್ಲೂ ವಿಶೇಷವಾಗಿ ಕೋಮು ಸೌಹಾರ್ದ, ವಿಭಜಕ ಶಕ್ತಿಗಳಿಗೆ ಶಿಕ್ಷೆ, ಸಾಮಾಜಿಕ ನ್ಯಾಯ, ಕಲ್ಯಾಣ, ಗ್ಯಾರಂಟಿ ಮತ್ತು ಜನಪರ ಅಭಿವೃದ್ಧಿಗಳ ಭರವಸೆಗಳನ್ನು ನೀಡಿತ್ತು.

ಅವುಗಳ ಬಗ್ಗೆ ರಾಜಕೀಯ ಅಕ್ಷರಸ್ಥರಿಗೆ ಹಾಗೂ ಬಹುಪಾಲು ಜನಸಮುದಾಯಗಳಿಗೆ ವಿಶೇಷ ನಿರೀಕ್ಷೆಗಳೇನೂ ಇರಲಿಲ್ಲವಾದರೂ, ಕಳೆದ ಮೂರು ವರ್ಷಗಳಲ್ಲಿ ಸಿದ್ದು ಸರಕಾರ ಮಾಡಿರುವ ಭ್ರಮನಿರಸನಗಳೂ ಹಾಗೂ ವಚನಭಂಗಗಳು ಮಾತ್ರ ನಿರೀಕ್ಷೆಗೂ ಮೀರಿದೆ.

ಇಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಭರ್ತಿ ಮೂರು ವರ್ಷಗಳು ತುಂಬುತ್ತವೆ. ಅದೇ ಕಾರಣಕ್ಕೆ ನಿನ್ನೆ ತುಮಕೂರಿನಲ್ಲಿ ಕಾಂಗ್ರೆಸ್ ಸರಕಾರವು ‘ಸಾಧನೆಗಳ ಸಮರ್ಪಣೆ ಮತ್ತು ಸಂಕಲ್ಪ ಸಮಾವೇಶ’ವನ್ನು ಭರ್ಜರಿಯಾಗಿ ಮಾಡಿದೆ.

ಆದರೆ ಇದು ಕಾಂಗ್ರೆಸ್ ಸರಕಾರದ ಸಿದ್ದು ಮತ್ತು ಡಿಕೆಶಿ ಎಂಬ ಎರಡು ಪ್ರತಿಸ್ಪರ್ಧಿ ಅಧಿಕಾರ ಕೇಂದ್ರಗಳ ನಡುವಿನ ಪ್ರದರ್ಶನವೋ? ಅಥವಾ ಹೊಸ ಅಧಿಕಾರ ಕೇಂದ್ರದ ಉದಯದ ಮುನ್ಸೂಚನೆಯೋ ಎಂಬ ಊಹಾಪೋಹಗಳಿಗೆ ಕಾಲವೇ ಉತ್ತರ ನೀಡಬೇಕು.

ಹಾಗೆಯೇ ವಿರೋಧಿ ಬಿಜೆಪಿಯು ಕಾಂಗ್ರೆಸ್‌ನ ಮೂರು ವರ್ಷಗಳ ಬಗ್ಗೆ ಮಾಡುವ ಟೀಕೆಗಳನ್ನು ರವಷ್ಟೂ ಜನಾಸಕ್ತಿಯಾಗಲೀ, ಪ್ರಾಮಾಣಿಕತೆಯಾಗಲೀ ಇರುವುದಿಲ್ಲ. ಅವೆಲ್ಲವೂ ಆಳುವವರ ವಲಯದಲ್ಲಿ ತಮ್ಮ ತಮ್ಮ ಅಧಿಕಾರದ ಹಿತಾಸಕ್ತಿಗೆ ನಡೆಯುವ ಚರ್ಚೆಗಳು ಮತ್ತು ವಿಮರ್ಶೆಗಳು. ಅವರು ತಮ್ಮ ವರ್ಗಾಸಕ್ತಿಯನ್ನೇ ಜನಾಸಕ್ತಿ ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ.

ಹೀಗಾಗಿ ಈ ಪ್ರಧಾನ ಧಾರೆ ಚರ್ಚೆಗಳು ಜನಾಸಕ್ತಿಯ ಅಸಲೀ ಪ್ರಶ್ನೆಗಳನ್ನು ಅಂದರೆ ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಜನತೆಯ ಬದುಕಿನಲ್ಲಿ ಕಾಂಗ್ರೆಸ್ ಸರಕಾರ ಬದಲಾವಣೆಯ ಗಾಳಿಯನ್ನು ತಂದಿತೇ ಎಂಬ ಮೂಲಭೂತ ಪ್ರಶ್ನೆಯನ್ನು, ಮರೆಸಬಾರದಲ್ಲವೇ?

ಬೊಮ್ಮಾಯಿ ನೇತೃತ್ವದ ಸಂಘಿ ಬಿಜೆಪಿ ಸರಕಾರ ಸತತವಾಗಿ ಈ ನಾಡಿನ ಮುಸ್ಲಿಮರು, ದಲಿತರು ಮತ್ತು ಬಡವರ ಮೇಲೆ ನಿರಂತರವಾಗಿ ನಡೆಸಿದ ದಾಳಿಗಳಿಂದ ಕಂಗಾಲಾಗಿದ್ದ ಕರ್ನಾಟಕದ ಜನತೆ 2023ರಲ್ಲಿ ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದರು. ಬಿಜೆಪಿಗಿಂತ ಕಾಂಗ್ರೆಸ್‌ಗೆ ಶೇ. 7 (ಶೇ. 43)ರಷ್ಟು ಹೆಚ್ಚಿನ ವೋಟುಗಳನ್ನು ಮತ್ತು ಬಿಜೆಪಿಗಿಂತ 70 (136)ಸೀಟುಗಳನ್ನು ಹೆಚ್ಚುವರಿಯಾಗಿ ನೀಡಿದ್ದರು.

ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹಾಗೂ ಬಜೆಟ್ ಭಾಷಣಗಳಲ್ಲಿ ಬಿಜೆಪಿಗೆ ನಿಜವಾದ ಪರ್ಯಾಯ ಸರಕಾರ ಕೊಡುವುದಾಗಿ ಭರವಸೆ ನೀಡಿತ್ತು. ಅದರಲ್ಲೂ ವಿಶೇಷವಾಗಿ ಕೋಮು ಸೌಹಾರ್ದ, ವಿಭಜಕ ಶಕ್ತಿಗಳಿಗೆ ಶಿಕ್ಷೆ, ಸಾಮಾಜಿಕ ನ್ಯಾಯ, ಕಲ್ಯಾಣ, ಗ್ಯಾರಂಟಿ ಮತ್ತು ಜನಪರ ಅಭಿವೃದ್ಧಿಗಳ ಭರವಸೆಗಳನ್ನು ನೀಡಿತ್ತು.

ಅವುಗಳ ಬಗ್ಗೆ ರಾಜಕೀಯ ಅಕ್ಷರಸ್ಥರಿಗೆ ಹಾಗೂ ಬಹುಪಾಲು ಜನಸಮುದಾಯಗಳಿಗೆ ವಿಶೇಷ ನಿರೀಕ್ಷೆಗಳೇನೂ ಇರಲಿಲ್ಲವಾದರೂ, ಕಳೆದ ಮೂರು ವರ್ಷಗಳಲ್ಲಿ ಸಿದ್ದು ಸರಕಾರ ಮಾಡಿರುವ ಭ್ರಮನಿರಸನಗಳೂ ಹಾಗೂ ವಚನಭಂಗಗಳು ಮಾತ್ರ ನಿರೀಕ್ಷೆಗೂ ಮೀರಿದೆ.

ಹಾಗೆ ನೋಡಿದರೆ ಸಿದ್ದು ಸರಕಾರಕ್ಕೆ 2.5 ವರ್ಷ ತುಂಬಿದಾಗ ಬೆಂಗಳೂರಿನ ಸಿವಿಕ್ ಸಂಸ್ಥೆಯ ನೇತೃತ್ವದಲ್ಲಿ ಹಲವು ವಿದ್ವಾಂಸರು ಸಿದ್ದು ಸರಕಾರದ ಬಜೆಟ್ ಭರವಸೆಗಳು ಮತ್ತು ಆದ ಅನುಷ್ಠಾನಗಳ ಬಗ್ಗೆ ಕೂಲಂಕಶ ಅಧ್ಯಯನ ನಡೆಸಿ ಒಂದು ಸಮಗ್ರ ವರದಿಯನ್ನು ನೀಡಿತ್ತು. ಅದರ ಪ್ರಕಾರ ಸಿದ್ದು ಸರಕಾರದ ಆಡಳಿತದ ಅರ್ಧ ಅವಧಿ ಮುಗಿದಿದ್ದರೂ ಶೇ. 6ರಷ್ಟು ಬಜೆಟ್ ಭರವಸೆಗಳನ್ನು ಮಾತ್ರ ಪೂರೈಸಲಾಗಿತ್ತು. ಉಳಿದ ಶೇ. 94ರಷ್ಟು ಭರವಸೆಗಳನ್ನು ಇನ್ನೂ ಪ್ರಾರಂಭವಾಗಿಯೇ ಇರದ, ಪ್ರಾರಂಭಿಸಿ ಕುಂಟುತ್ತಿರುವ ಹಾಗೂ ಇನ್ನೂ ಪೂರ್ತಿ ಜಾರಿಯಾಗದ ಭರವಸೆಗಳು ಎಂದು ವರ್ಗೀಕರಿಸಲಾಗಿತ್ತು. ಇವೆಲ್ಲಕ್ಕೂ ಪ್ರಧಾನವಾಗಿ ಸಂಪನ್ಮೂಲ ಕೊರತೆ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯಗಳನ್ನು ಕಾರಣವೆಂದು ಗುರುತಿಸಲಾಗಿತ್ತು.

ಮೊನ್ನೆ, ಕರ್ನಾಟಕದ ಮುಸ್ಲಿಮ್ ಒಕ್ಕೂಟ ಸಂಘಟನೆಯು ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಮುಸ್ಲಿಮ್ ಸಮುದಾಯಕ್ಕೆ ಕೊಟ್ಟ ಭರವಸೆಗಳು ಮತ್ತು ಅದರ ಅನುಷ್ಠಾನದ ರೀತಿಯ ಆಳವಾದ ಅಧ್ಯಯನ ನಡೆಸಿ ಅದರ ವರದಿಯನ್ನು ಬೃಹತ್ ಸಮಾವೇಶದ ಮೂಲಕ ಬಿಡುಗಡೆ ಮಾಡಿತು. ಅದರಲ್ಲಿ ಪ್ರಧಾನವಾಗಿ ಮೂರು ವರ್ಷ ಕಳೆದರೂ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುತ್ತಿರುವ ಹಿಂದುತ್ವವಾದಿ ಪೀಡಕ ಶಕ್ತಿಗಳನ್ನು ಮಟ್ಟ ಹಾಕುವಲ್ಲಿ ಮತ್ತು ಬಿಜೆಪಿ ಸರಕಾರ ಮುಸ್ಲಿಮರನ್ನು ಪೀಡಿಸಲೆಂದೇ ಜಾರಿಗೆ ತಂದಿದ್ದ ಕಾನೂನುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವುದರಲ್ಲಿ, ಮುಸ್ಲಿಮ್ ಸಮುದಾಯಕ್ಕೆ ಪಕ್ಷದಲ್ಲಿ ಮತ್ತು ಸರಕಾರದಲ್ಲಿ ಸರಿಯಾದ ಪ್ರಾತಿನಿಧ್ಯ ನೀಡುವಲ್ಲಿ ಹಾಗೂ ಇದೀಗ ಮುಸ್ಲಿಮರನ್ನು ಹೊರದಬ್ಬಲೆಂದೇ ಮೋದಿ ಸರಕಾರ ಜಾರಿ ಮಾಡುತ್ತಿರುವ ಎಸ್‌ಐಆರ್‌ನಿಂದ ನಾಡನ್ನು ರಕ್ಷಿಸುವಲ್ಲಿ ತೋರುತ್ತಿರುವ ಅಸೀಮ ರಾಜಕೀಯ ಬೇಜವಾಬ್ದಾರಿಗಳನ್ನು ಬಯಲು ಮಾಡಿದ್ದಾರೆ. ಮತ್ತು ಇವೆಲ್ಲಕ್ಕೂ ಕಾಲಬದ್ಧ ಪರಿಹಾರಗಳನ್ನು ನೀಡದಿದ್ದಲ್ಲಿ ಬೃಹತ್ ಪ್ರತಿರೋಧದ ಎಚ್ಚರಿಕೆಯನ್ನು ನೀಡಿದ್ದಾರೆ.

ಇದರ ಜೊತೆಗೆ ಕಾಂಗ್ರೆಸ್ ಸರಕಾರ ಕಳೆದ ಮೂರು ವರ್ಷಗಳಲ್ಲಿ ಜಾರಿಗೆ ತಂದ ಹಲವು ನೀತಿಗಳ ಬಗ್ಗೆ ವಿವಿಧ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ-ಯುವಜನ, ಮಹಿಳಾ, ಟ್ರಾನ್ಸ್‌ಜೆಂಡರ್, ಸ್ಲಂ ವಾಸಿಗಳು, ಅಲ್ಪಸಂಖ್ಯಾತ ಸಂಘಟನೆಗಳು ಬಿಡಿಬಿಡಿಯಾಗಿ ಮತ್ತು ಒಟ್ಟಾಗಿ ತಮ್ಮ ಹೋರಾಟಗಳ ಮೂಲಕ ವಿಮರ್ಶೆಯನ್ನು ದಾಖಲಿಸಿವೆ. ಇವೆಲ್ಲವೂ ಒಟ್ಟು ಸೇರಿ ಕಾಂಗ್ರೆಸ್ ಸರಕಾರದ ಮೂರು ವರ್ಷಗಳ ಬಗ್ಗೆ ಜನವಿಮರ್ಶೆಯಾಗುತ್ತದೆ.

ಕಾಂಗ್ರೆಸ್ ಸರಕಾರ ಆತ್ಮವಂಚನೆ ಮತ್ತು ಆತ್ಮಲೋಲುಪತೆಗಳಿಂದ ಆಚರಿಸುತ್ತಿರುವ ಮೂರನೇ ವರ್ಷದ ಸಂಭ್ರಮದ ಹೊತ್ತಿನಲ್ಲಿ ಈ ಜನವಿಮರ್ಶೆಯ ಮೂಲಕ ಕಾಂಗ್ರೆಸ್ ಸರಕಾರ ಭರವಸೆಗಳನ್ನು ಪರಿಶೀಲಿಸಬೇಕಿದೆ. ಅದರಲ್ಲೂ ಕೋಮು ಸೌಹಾರ್ದ, ಸಾಮಾಜಿಕ ನ್ಯಾಯ, ಬಡವರ ಕಲ್ಯಾಣ ಮತ್ತು ಅಭಿವೃದ್ಧಿ ವಿಷಯಗಳಲ್ಲಿ ನಾಡಿನ ಜನತೆಗಾಗಿರುವ ಮೂರು ವರ್ಷಗಳ ಭ್ರಮ ನಿರಸನಗಳನ್ನು ನೆನಪಿಸುವ ಅಗತ್ಯವಿದೆ.

ಕೋಮು ಸೌಹಾರ್ದವಲ್ಲ- ಮೃದು ಹಿಂದುತ್ವ

ಕಾಂಗ್ರೆಸ್ ಅಧಿಕಾರಕ್ಕೆ ಬಂದಕೂಡಲೇ ಬಜರಂಗದಳವನ್ನು ನಿಷೇಧಿಸುವುದನ್ನು ಪರಿಶೀಲಿಸುವುದಾಗಿ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದಕೂಡಲೇ ಮಾನ್ಯ ಗೃಹಮಂತ್ರಿಗಳು ಬಜರಂಗದಳದ ಮಹಾಗುರುಗಳಾದ ಪೇಜಾವರ ಸ್ವಾಮೀಜಿಗಳಿಗೆ ಸ್ವಗೃಹದಲ್ಲಿ ಪಾದಪೂಜೆ ಮಾಡಿ ಬಜರಂಗದಳವನ್ನು ನಿಷೇಧಿಸುವ ಯಾವ ಪ್ರಸ್ತಾವವೂ ಇಲ್ಲವೆಂದು ಘೋಷಿಸಿದರು. ಅಧ್ಯಯನಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಇಂತಹ ಸಂಘಟನೆಗಳು 270 ಕೋಮು ಗಲಭೆಗಳಿಗೆ ಕಾರಣವಾಗಿವೆ. ಜನರ ಒತ್ತಡ ಹೆಚ್ಚಿದಾಗ ಎಫ್‌ಐಆರ್ ಮಾಡಿ ಕೈತೊಳೆದುಕೊಂಡಿದ್ದಾರೆ.

ಮತ್ತೊಂದು ಕಡೆ ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆಗೆ ಮೂಲ ಕಾರಣವಾದ ಬಾಬಾಬುಡಾನ್ ದರ್ಗಾದ ಕೇಸರೀಕರಣಕ್ಕೆ ಪೂರಕವಾಗಿ ಕಾಂಗ್ರೆಸ್ ಸರಕಾರವೂ ದರ್ಗಾದಲ್ಲಿ ವೈದಿಕ ಅರ್ಚಕರನ್ನು ನೇಮಕ ಮಾಡಲು ಒಪ್ಪಿಗೆ ಕೊಟ್ಟಿತು. ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಗೋಹತ್ಯಾ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆಯನ್ನು ಇಂದಿನವರೆಗೂ ಹಿಂದೆಗೆದುಕೊಂಡಿಲ್ಲ. ದಾವಣಗೆರೆಯ ಉಪಚುನಾವಣೆಯಲ್ಲಿ ಪೆಟ್ಟು ತಿಂದು, ಏನೇ ಒತ್ತಡ ಹಾಕಿದರೂ ಮುಸ್ಲಿಮರು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡುವ ಸಮಾವೇಶ ಮಾಡುತ್ತಾರೆ ಎಂದು ಖಚಿತವಾದ ಮೇಲೆ ಅರೆ ಮನಸ್ಸಿನಿಂದ ಹಿಜಾಬ್ ಆದೇಶವನ್ನು ಹಿಂದೆಗೆದುಕೊಂಡಿದೆಯಷ್ಟೆ.

ಇನ್ನು ಪ. ಬಂಗಾಳ ಚುನಾವಣೆ ಸ್ಪಷ್ಟಪಡಿಸಿರುವಂತೆ ಮೋದಿ ಆದೇಶದಂತೆ ಚುನಾವಣಾ ಆಯೋಗ ಎಸ್‌ಐಆರ್ ಜಾರಿ ಮಾಡುತ್ತಿರುವುದೇ ಪ್ರಧಾನವಾಗಿ ಮುಸ್ಲಿಮರ ನಾಗರಿಕತ್ವವನ್ನು ನಿರಾಕರಿಸಲು. ಕರ್ನಾಟಕದಲ್ಲಿ ಜೂನ್‌ನಿಂದ ಎಸ್‌ಐಆರ್ ಶುರುವಾಗಲಿದೆ. ಆದರೆ ಅದರ ಬಗ್ಗೆಯೂ ಕಾಂಗ್ರೆಸ್ ಸರಕಾರದ್ದು ಬಿಜೆಪಿಗೆ ಪೂರಕ ನಿಲುವುಗಳೇ.

ಇದೆಲ್ಲದರ ಹಿಂದೆ ಇರುವುದು ಕೋಮು ಸೌಹಾರ್ದದ ಆಶಯವಲ್ಲ. ಬದಲಿಗೆ ಸತ್ಯ ಮತ್ತು ನ್ಯಾಯದ ಪರವಾದ ನಿಲುವು ತೆಗೆದುಕೊಂಡರೆ ಹಿಂದೂ ವಿರೋಧಿ ಎಂಬ ಪ್ರಚಾರ ಹೆಚ್ಚಾಗಿ ಹಿಂದೂ ವೋಟುಗಳನ್ನು ಕಳೆದುಕೊಳ್ಳಬಹುದು ಎಂಬ ಮೃದು ಹಿಂದುತ್ವ.

ಹೀಗಾಗಿ ಕಾಂಗ್ರೆಸ್ ಸರಕಾರ ಬಿಜೆಪಿಯನ್ನು ಸೋಲಿಸುತ್ತಿಲ್ಲ ಬದಲಿಗೆ ಅದರ ನೀತಿಗಳನ್ನೇ ಮುಂದುವರಿಸುತ್ತಾ ಬಿಜೆಪಿಯನ್ನು ಗೆಲ್ಲಿಸುತ್ತಿದೆ. ನಾಡಿನ ಜನ ಗೆಲ್ಲಿಸಿದ್ದು ಕಾಂಗ್ರೆಸನ್ನೋ ಅಥವಾ ಬಿಜೆಪಿಯನ್ನೋ ಎಂಬ ಅನುಮಾನವೂ ಬರದ ರೀತಿ ಬಿಜೆಪಿ ನೀತಿಗಳನ್ನು ಜಾರಿ ಮಾಡುತ್ತಿದೆ.

ಸಾಮಾಜಿಕ ನ್ಯಾಯವಲ್ಲ- ಸಾಮಾಜಿಕ ಅನ್ಯಾಯ

ಒಳಮೀಸಲಾತಿ ನೀತಿಯನ್ನು ಜಾರಿ ಮಾಡುವಲ್ಲಿ ಮಾಡಿದ ಯೋಜಿತ ವಿಳಂಬ ಮತ್ತು ಅದನ್ನು ಅತ್ಯಂತ ದಮನಿತರಿಗೆ ಅನ್ಯಾಯವಾಗುವ ರೀತಿ ಮಾಡಿದ ಅನುಷ್ಠಾನಗಳೆರಡೂ ಕೊಡ ಹೇಗೆ ಸಿದ್ದು ಸರಕಾರ ಬಿಜೆಪಿಯ ರೀತಿಯಲ್ಲೇ ಸಾಮಾಜಿಕ ಅನ್ಯಾಯವನ್ನು ಮುಂದುವರಿಸುತ್ತಿದೆ ಎಂಬುದಕ್ಕೆ ಪುರಾವೆಗಳೊದಗಿಸುತ್ತವೆ.

ಅದರಲ್ಲೂ ವಿಶೇಷವಾಗಿ ಗ್ರೂಪ್ ಸಿಯಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಜಾತಿಗಳನ್ನು ಪರಿಶಿಷ್ಟರಲ್ಲಿ ಮುಂದುವರಿದ ಸ್ಪಶ್ಯ ಜಾತಿಗಳೊಡನೆ ಸೇರಿಸಿ ಶೇ. 4.5 ಮೀಸಲಾತಿ ನಿಗದಿ ಮಾಡಿ ಅಪಾರ ಅನ್ಯಾಯವನ್ನು ಮಾಡಿಬಿಟ್ಟಿತು. ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಯೂ ಒಪ್ಪಿಕೊಂಡು ಅನುಮೋದಿಸಲಾದ ಕಾಯ್ದೆಯಲ್ಲಿ ಗ್ರೂಪ್ ಸಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿ ಐದನೆಯದನ್ನು ಅಲೆಮಾರಿ ಜಾತಿಗಳಿಗೆ ನೀಡಬೇಕೆಂದು ಗ್ರೂಪ್ ಸಿ ಒಳಗೆ ಮತ್ತೊಂದು ಒಳಮೀಸಲಾತಿ ರೂಪಿಸಿದ್ದರೂ ಒಂದು ವೇಳೆ ಅಲೆಮಾರಿ ಜಾತಿಗಳಲ್ಲಿ ಅರ್ಹ ಅಭ್ಯರ್ಥಿಗಳು ಇರದಿದ್ದರೆ ಅದನ್ನು ಸ್ಪಶ್ಯ ಪರಿಶಿಷ್ಟ ಜಾತಿಗಳಿಂದ ತುಂಬಿಕೊಳ್ಳಬೇಕೆಂದು ಅವಕಾಶ ಕಲ್ಪಿಸಿ ಮತ್ತೊಂದು ಅನ್ಯಾಯ ಮಾಡಿದೆ. ಜೊತೆಗೆ ಕೋರ್ಟ್‌ಗೆ ನೀಡಬೇಕಾಗಿರುವ ಪ್ರತ್ಯುತ್ತರದಲ್ಲಿ ಅಲೆಮಾರಿಗಳು ಲಂಬಾಣಿ-ಭೋವಿಗಳಷ್ಟೆ ಮುಂದುವರಿದಿರುವುದರಿಂದ ಅವರನ್ನು ಗ್ರೂಪ್ ಸಿಗೆ ಸೇರಿಸಲಾಗಿದೆ ಎಂಬ ಮಹಾ ಅನ್ಯಾಯದ ವಾದವನ್ನು ತಯಾರಿಸಿದೆ.

ಇದಲ್ಲದೆ ಎಸ್‌ಟಿ ಸಮುದಾಯದೊಳಗೂ ಬೇಕಿರುವ ಒಳಮೀಸಲಾತಿಯನ್ನು ಜಾರಿ ಮಾಡುವ ಬಗ್ಗೆ ಹಾಗೂ ದಲಿತ ಸಮುದಾಯಕ್ಕೆ ನೀಡಬೇಕಾದ ಈಗಿರುವ ಶೇ. 17 ಮೀಸಲಾತಿಯನ್ನು ಶೇ. 24ಕ್ಕೆ ಏರಿಸಿ ಅದಕ್ಕೆ ಸಂವಿಧಾನಾತ್ಮಕ ರಕ್ಷಣೆ ಒದಗಿಸುವ ವಿಷಯಗಳ ಬಗ್ಗೆಯೂ ಮುಂದುವರಿದ ಜಾತಿಗಳ ಒತ್ತಡಕ್ಕೆ ಮಣಿದು ಅಸೀಮ ನಿರ್ಲಕ್ಷ್ಯ ತೋರುತ್ತಿದೆ.

ಗ್ಯಾರಂಟಿಗಳಿಗೆ ಬೇಕಾದ ಸಂಪನ್ಮೂಲಗಳನ್ನು ಅಭಿವೃದ್ಧಿ, ಆಡಳಿತದಲ್ಲಿ ದಕ್ಷತೆಯನ್ನು ಕಾಪಾಡಿಕೊಳ್ಳುವ ಮೂಲಕ ಕ್ರೋಡೀಕರಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರೂ ಅದ್ಯಾವುದನ್ನು ಮಾಡದೆ, ಉಳಿದ ಸಮಾಜಕ್ಕೂ ಮತ್ತು ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಗಳ ನಡುವೆ ಇರುವ ಅಭಿವೃದ್ಧಿ ಮತ್ತು ಕಲ್ಯಾಣ ಅಂತರವನ್ನು ಕಡಿಮೆ ಮಾಡಲು ವಿನಿಯೋಗವಾಗಬೇಕಿದ್ದ SCSP-TSP ಖಾತೆಯಿಂದ ಪ್ರತಿವರ್ಷ 12,000-14,000 ಕೋಟಿ ಹಣವನ್ನು ತೆಗೆದು ಸಾಮಾಜಿಕ ಅನ್ಯಾಯವನ್ನು ಮುಂದುವರಿಸಲಾಗುತ್ತಿದೆ.

ಸಾಮಾಜಿಕ ನ್ಯಾಯವನ್ನು ಖಾತರಿ ಮಾಡಲೆಂದೇ ರೂಪಿತವಾದ ಕಾಂತರಾಜು ಆಯೋಗದ ವರದಿಯನ್ನು ಸಾಮಾಜಿಕವಾಗಿ ಬಲಿಷ್ಠರಾದವರ ಒತ್ತಡಕ್ಕೆ ಮಣಿದು ಹಿಂದೆಗೆದುಕೊಂಡಿದೆ ಮತ್ತು ಹೊಸದಾಗಿ ರಚಿತವಾದ ನಾಯಕ್ ವರದಿ ಪ್ರಕಟವೂ ಅಗದಂತೆ ನೋಡಿಕೊಳ್ಳಲಾಗಿದೆ.

ಇವೆಲ್ಲವೂ ಕಾಂಗ್ರೆಸ್ ಸರಕಾರ ಸಹ ಸಾಮಾಜಿಕ ನ್ಯಾಯದ ವಿಷಯದಲ್ಲಿ ವಂಚಕ ನೀತಿಯನ್ನೇ ಮುಂದುವರಿಸುತ್ತಿದೆ ಎಂಬುದನ್ನು ಸಾಬೀತು ಪಡಿಸುತ್ತದೆ.

ಕಾಂಗ್ರೆಸ್ ಸರಕಾರ- ಬಿಜೆಪಿ ಬುಲ್ಡೋಜರ್?

ಕೋಗಿಲು ಮತ್ತು ಥಣಿಸಂದ್ರದ ಬಡವರ ಗುಡಿಸಲುಗಳನ್ನು ನೆಲಸಮ ಮಾಡಿದ್ದು ಕಾಂಗ್ರೆಸ್‌ನ ಬುಲ್ಡೋಜರೇ. ದೇಶಾದ್ಯಂತ ಅಂತಹ ಲಕ್ಷಾಂತರ ಬಡಜನರನ್ನು ಬೀದಿಪಾಲು ಮಾಡುತ್ತಿರುವುದು ಬಿಜೆಪಿಯ ಬುಲ್ಡೋಜರೇ ಆದರೆ ರಾಜ್ಯದಲ್ಲಿ ಆ ಗುತ್ತಿಗೆಯನ್ನು ಕಾಂಗ್ರೆಸ್ ವಹಿಸಿಕೊಂಡಿದೆ. ಅದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವ್ಯತ್ಯಾಸವೇ ಇಲ್ಲವೇಕೆ?

ಬುಲ್ಡೋಜರ್ ಎಂಬುದು ಈ ದೇಶ ಅನುಸರಿಸುತ್ತಿರುವ ದಮನಕಾರಿ ಮತ್ತು ಬಡವರ ವಿರೋಧಿ ಅಭಿವೃದ್ಧಿ ಮಾದರಿಯ ಸಂಕೇತವಾಗಿದೆ. ಬಿಜೆಪಿ ಸರಕಾರಗಳು ಅವರನ್ನು ನಾಗರಿಕರೇ ಅಲ್ಲವೆಂದು ಬುಲ್ಡೋಜರ್ ಚಲಾಯಿಸುತ್ತದೆ. ಬೀದಿಗೆ ಬಿದ್ದವರಲ್ಲಿ ಹಿಂದೂ-ಮುಸ್ಲಿಮ್ ಎಂದು ವರ್ಗೀಕರಿಸಿ ಕೋಮುವಾದಿ ರಾಜಕಾರಣ ಮಾಡುತ್ತದೆ. ಅದು ಸಾಮಾಜಿಕ ಅನ್ಯಾಯ. ಅನಾಗರಿಕ. ಅಮಾನವೀಯ.

ಆದರೆ ತಾನು ಸಾಮಾಜಿಕ ನ್ಯಾಯಕ್ಕೆ ಬದ್ಧ ಎನ್ನುವ ಸಿದ್ದು ಸರಕಾರ ಕೂಡ ರಾತ್ರೋರಾತ್ರಿ ಬುಲ್ಡೋಜರ್ ಹರಿಸಿ ಬಡ ಗುಡಿಸಲುವಾಸಿಗಳನ್ನು ಬೀದಿ ಪಾಲು ಮಾಡುತ್ತದೆ. ಐಶಾರಾಮಿ ಮಾಲ್‌ಗಳಿಗಾಗಿ ಬೀದಿವ್ಯಾಪಾರಿಗಳನ್ನು ಎತ್ತಂಗಡಿ ಮಾಡುತ್ತದೆ. ಸ್ಲಂಗಳಲ್ಲಿ ಕುಡಿಯುವ ನೀರು ಕೊಡದಿದ್ದರೂ ಕಾರು ಚಾಲಕರಿಗೆ 24 ಸಾವಿರ ಕೋಟಿ ರೂ. ವೆಚ್ಚದಲ್ಲಿ ಟನಲ್ ರೋಡ್ ನಿರ್ಮಿಸುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಮಾಡಿ ಉಳ್ಳವರ ಬೆಂಗಳೂರನ್ನು ಕಟ್ಟುತ್ತಿದೆ. ಅದಕ್ಕಾಗಿ ದೇವನಹಳ್ಳಿ, ಅನೇಕಲ್ ಮತ್ತು ಬಿಡದಿಗಳಲ್ಲೂ ರೈತರ ಸಾವಿರಾರು ಎಕರೆ ಜಮೀನುಗಳನ್ನು ಬಲವಂತದಿಂದ ವಶಪಡಿಸಿಕೊಳ್ಳುತ್ತಿದೆ. ದೇವನಹಳ್ಳಿಯಲ್ಲಿ ರೈತರಿಂದ ವಶಪಡಿಸಿಕೊಂಡ ಜಮೀನುಗಳನ್ನು ಹೋರಾಟಕ್ಕೆ ಮಣಿದು ವಾಪಸ್ ಕೊಟ್ಟಂತೆ ಮಾಡಿದರೂ, ರೈತರು ತಮ್ಮ ಜಮೀನಿನ ಮೇಲೆ ಸಂಪೂರ್ಣ ಒಡೆಯರಾಗದಂತೆ ವಂಚಕ ಹಾಗೂ ಕಾರ್ಪೊರೇಟ್ ಷರತ್ತುಗಳನ್ನು ವಿಧಿಸಿದೆ.

ಬೆಂಗಳೂರಿನಲ್ಲಿ 25 ಸಾವಿರ ಎಕರೆಗೂ ಹೆಚ್ಚು ಜಮೀನನ್ನು ವಶಪಡಿಸಿಕೊಂಡಿರುವ ಬಿಲ್ಡರ್‌ಗಳ ಒತ್ತುವರಿ ಸಕ್ರಮ ಮಾಡುವ, ಶೆಡ್ ಗುಡಿಸಲು ಹಾಕಿಕೊಂಡಿರುವ ಬಡವರ ಬದುಕನ್ನು ಅಕ್ರಮಗೊಳಿಸುವ ಮೋದಿಯ ಕಾರ್ಪೊರೇಟ್ ವಿಕಸಿತ ಭಾರತಕ್ಕೂ, ಸಿದ್ದು ಸರಕಾರದ ಬಿಲ್ಡರ್‌ಗಳ ಗ್ರೇಟರ್ ಬೆಂಗಳೂರಿಗೂ ವ್ಯತ್ಯಾಸವಿದೆಯೇ? ಸಾಮಾಜಿಕ ನ್ಯಾಯವೆಂಬ ಮಂತ್ರಪಠಣ ಹೊರತುಪಡಿಸಿ?

ಹಾಗೆಯೇ ಬಡಮಕ್ಕಳ ಸರಕಾರಿ ಶಾಲೆಗಳನ್ನು ನೆಲಸಮ ಮಾಡಲು ಕೇಂದ್ರದ ಬಿಜೆಪಿ ಸರಕಾರ NEP ಬುಲ್ಡೋಜರನ್ನು ಚಲಾಯಿಸಿದಂತೆ, ಕರ್ನಾಟಕದ ಕಾಂಗ್ರೆಸ್ ಸರಕಾರ ಕೆಪಿಎಸ್ ಬುಲ್ಡೋಜರ್ ಅನ್ನು ಚಲಾಯಿಸುತ್ತಿದೆ.

ಕುಗ್ರಾಮಗಳ ಮಕ್ಕಳನ್ನು ಕನಿಷ್ಠ ಅಕ್ಷರ ಜ್ಞಾನದಿಂದಲೂ ವಂಚಿಸುವುದನ್ನು ಬಿಜೆಪಿಯ ಓಇP ಮಾಡಿದರೆ ಮಾತ್ರ ಅನ್ಯಾಯವೇ? ಅದೇ ಅನ್ಯಾಯವನ್ನು ಕೆಪಿಎಸ್ ಹೆಸರಲ್ಲಿ ಕಾಂಗ್ರೆಸ್ ಸರಕಾರ ಮಾಡಿದರೆ ನ್ಯಾಯವೇ?

ಭೂಮಿ-ವಸತಿ ನಿರಾಕರಿಸುವ ಸಮಾಜವಾದಿ ಸರಕಾರ!

ಒಂದೆಡೆ ಕಾರ್ಪೊರೇಟ್‌ಗಳಿಗಾಗಿ ರೈತರ ಫಲವತ್ತಾದ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವ ಬಿಜೆಪಿ ಚಾಳಿಯನ್ನೇ ಮುಂದುವರಿಸಿರುವ ಕಾಂಗ್ರೆಸ್ ಸರಕಾರ ಈ ನಾಡಿನಲ್ಲಿ ಭೂಮಿ-ವಸತಿ ಇಲ್ಲದ ಜನರ ಬೇಡಿಕೆಗಳಿಗೆ ಬಿಜೆಪಿಯಂತೆಯೇ ಒಂದು ದಶಕದಿಂದ ಕಿವುಡಾಗಿದೆ.

ನಿನ್ನೆ ತುಮಕೂರಿನಲ್ಲಿ ನಾಡಿನ ರೈತರಿಗೆ ಇ-ಪೌತಿ ಮತ್ತು ದರಖಾಸ್ತು ಪೋಡಿ ದಾಖಲೆಗಳನ್ನು ಮಾಡಿಕೊಟ್ಟಿರುವ ಬಗ್ಗೆ ಮಂತ್ರಿಗಳು ಕೊಚ್ಚಿಕೊಂಡರು. ಅಲ್ಪಸ್ವಲ್ಪ ದಾಖಲೆಗಳು ಇದ್ದವರಿಗೆ ಈ ಯೋಜನೆಯಿಂದ ಅನುಕೂಲವಾಗುವುದು ನಿಜವೇ. ಆದರೆ ಸ್ವಾತಂತ್ರ್ಯ ಬಂದಾಗಿನಿಂದಲೂ ಜೀತ, ಗೇಣಿ ಮಾಡಿಕೊಂಡು ಬದುಕಿರುವ ಲಕ್ಷಾಂತರ ರೈತಾಪಿ ಜನ ಉಳುಮೆಯ ಭೂಮಿಗೆ ಮತ್ತು ಮನೆ ಕಟ್ಟಿಕೊಳ್ಳಲು ಹಾಕಿರುವ 34 ಲಕ್ಷ ಅರ್ಜಿಗಳನ್ನು ಸಿದ್ದು ಸರಕಾರ ಕಾನೂನು ಮಾನ್ಯ ಮಾಡುವುದಿಲ್ಲವೆಂದು ತಿರಸ್ಕರಿಸಿದೆ. ಅಲ್ಲದೆ ಸರಕಾರದ ಬಳಿ 1.11 ಕೋಟಿ ಎಕರೆ ಜಮೀನಿದ್ದರೂ ರೈತರಿಗೆ ಜಮೀನು ಕೊಡಬಲ್ಲಂತಹ ಕಾನೂನು ಮಾಡಬೇಕೆಂಬ ಆಗ್ರಹವನ್ನು ತಿರಸ್ಕರಿಸಿದೆ. ಇದರ ಜೊತೆಗೆ ಬಿಜೆಪಿ ಸರಕಾರ ತಂದಿದ್ದ ಕಾರ್ಪೊರೇಟ್ ಪರ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನೂ ಸಹ ಈವರೆಗೆ ಹಿಂದೆಗೆದುಕೊಂಡಿಲ್ಲ.

ಇವೆಲ್ಲವೂ ಉಳುವವನಿಗೆ ಭೂಮಿಯ ಬದಲು ಉಳ್ಳವನಿಗೆ ಭೂಮಿಯೆಂಬ ಬಿಜೆಪಿಯ ನಿಲುವಿಗಿಂತ ಹೇಗೆ ಭಿನ್ನ ?

ವಿರೋಧ ಮುಕ್ತ ಕರ್ನಾಟಕ?

ಕೇಂದ್ರದ ಮೋದಿ ಸರಕಾರ ಪ್ರತಿರೋಧವನ್ನು ಹತ್ತಿಕ್ಕಿ ಕಾಂಗ್ರೆಸ್ ಮುಕ್ತ ಸರಕಾರ ಮಾತ್ರವಲ್ಲ ಪ್ರತಿರೋಧ ಮುಕ್ತ ಭಾರತ ಮಾಡಲು ಪ್ರಯತ್ನಿಸುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಕೇಂದ್ರದಲ್ಲಿ ಈಗ ಬಿಜೆಪಿ ಸರಕಾರವಿದ್ದರೂ ಯುಪಿಎ ಸರಕಾರ ತಂದಿದ್ದ UಂPಂ ನೀತಿಗಳನ್ನೇ ಬಳಸಿಕೊಂಡು ಮೋದಿ ಸರಕಾರ ವಿರೋಧಿಗಳನ್ನು ಜೈಲಿಗೆ ತಳ್ಳುತ್ತಿದೆ ಅಥವಾ ಕೊಂದು ಹಾಕುತ್ತಿದೆ.

ಆದರೆ ರಾಜ್ಯದ ಸಿದ್ದು ನೇತೃತ್ವದ ಕಾಂಗ್ರೆಸ್ ಸರಕಾರ ಹೇಗೆ ಭಿನ್ನವಾಗಿದೆ?

ಸಂಘಪರಿವಾರಕ್ಕೆ ದ್ವೇಷ ಭಾಷಣ ಮತ್ತು ಕವಾಯತು ಮಾಡಲು ಬೆಂಗಳೂರಿನ ಎಲ್ಲಾ ಬಡಾವಣೆಗಳಲ್ಲೂ, ಗಲ್ಲಿ ಮತ್ತು ಬೀದಿಗಳಲ್ಲೂ ಅನುಮತಿ ನೀಡುವ ಕಾಂಗ್ರೆಸ್ ಸರಕಾರ ದೇವನಹಳ್ಳಿ ಬೆಂಗಳೂರಿನ ಕಮಿಶನರೇಟ್ ವ್ಯಾಪ್ತಿಗೆ ಬರುವುದರಿಂದ ದೇವನಹಳ್ಳಿ ರೈತರೂ ದೇವನಹಳ್ಳಿಯಲ್ಲೂ ಪ್ರತಿಭಟಿಸಬಾರದೆಂದೂ, ಅಲ್ಲಿಂದ 40 ಕಿ.ಮೀ. ದೂರವಿರುವ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟಿಸಬೇಕೆಂದು ತಾಕೀತು ಮಾಡುತ್ತದೆ. ಕಾಂಗ್ರೆಸ್ ಪಕ್ಷವೇ ಫೆಲೆಸ್ತೀನ್ ಮೇಲೆ ಇಸ್ರೇಲ್ ದಾಳಿಯ ವಿರುದ್ಧ ನಿಲುವು ತೆಗೆದುಕೊಂಡರೂ, ಯುದ್ಧ ಬೇಡ ಶಾಂತಿ ಬೇಕು ಎನ್ನುವ ನಿರುಪದ್ರವಿ ಪ್ರತಿಭಟನೆಗೂ ಅನುಮತಿ ನಿರಾಕರಿಸುತ್ತದೆ.

ನಕ್ಸಲ್ ಶರಣಾಗತಿಯ ಸಂದರ್ಭದಲ್ಲಿ ಶರಣಾಗತರಾದವರಿಗೆ ಕೂಡಲೇ ಜಾಮೀನು ಮತ್ತು ಜೀವನೋಪಾಯ ಕಲ್ಪಿಸಲು ತಮ್ಮ ಸರಕಾರ ಬದ್ಧ, ಏಕೆಂದರೆ ತಮ್ಮ ಸರಕಾರ ಬಿಜೆಪಿಗಿಂತ ಭಿನ್ನ ಎಂದು ನಕ್ಸಲರಿಗೆ ಮತ್ತು ಆ ಬಗ್ಗೆ ಮಧ್ಯಸ್ಥಿಕೆ ವಹಿಸಿದ್ದ ನಾಗರಿಕ ಸಂಘಟನೆಗಳಿಗೆ ಸುಳ್ಳು ಭರವಸೆ ಕೊಟ್ಟಿತ್ತು. ಆದರೆ ಶರಣಾಗತರಾಗಿ ಒಂದೂವರೆ ವರ್ಷ ಕಳೆದರೂ, ಜಾಮೀನಿನ ಮಾತಿರಲಿ, ಒಂದೂ ಪ್ರಕರಣದ ವಿಚಾರಣೆಯೂ ಶುರುವಾಗದೆ ಅವರೆಲ್ಲರೂ ಜೈಲಿನಲ್ಲೇ ಕೊಳೆಯುತ್ತಿದ್ದಾರೆ. ಮತ್ತೊಂದು ಕಡೆ ಛತ್ತಿಸ್‌ಗಡ ಮತ್ತು ಮಹಾರಾಷ್ಟ್ರದಲ್ಲಿ ಶರಣಾಗತರಾದ ನಕ್ಸಲರ ಮೇಲೆ ಅಲ್ಲಿನ ಬಿಜೆಪಿ ಸರಕಾರ ಕೇಸುಗಳನ್ನೇ ಮುಂದುವರಿಸುತ್ತಿಲ್ಲ. ಅಲ್ಲಿ ಶರಣಾಗತರಾದ ಬಹುಪಾಲು ನಕ್ಸಲರು ಒಂದೋ ಕೇಸಿಲ್ಲದೆ ಅಥವಾ ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಅದೇ ಮತ್ತೊಂದು ಕಡೆ ನಿರಾಯುಧನಾದ ನಕ್ಸಲ್ ನಾಯಕ ವಿಕ್ರಂ ಗೌಡರ ಅಮಾನುಷ ಹತ್ಯೆಯ ಬಗ್ಗೆ ನಡೆಸಲೇಬೇಕಾದ ವಿಚಾರಣೆಯನ್ನು ಕೂಡ ಕಾಂಗ್ರೆಸ್ ನಡೆಸಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಲಿಲ್ಲ.

ಇದೆಲ್ಲದರ ತಾತ್ಪರ್ಯ ಕಾಂಗ್ರೆಸ್‌ಗಿಂತ ಬಿಜೆಪಿ ಉತ್ತಮ ಎಂದಲ್ಲ. ಖಂಡಿತ ಅಲ್ಲ.

ಬಿಜೆಪಿ ಭಾರತದ ಅಪಾಯ. ಕಾಂಗ್ರೆಸ್ ಭಾರತೀಯರ ನಿರಾಶೆ.

ಬಿಜೆಪಿ ಸಮಸ್ಯೆ. ಕಾಂಗ್ರೆಸ್ ಸಮಸ್ಯೆಯ ಮುಂದುವರಿಕೆ.

ಸಿದ್ದು ಮುಖ್ಯಮಂತ್ರಿಯಾಗಿದ್ದರೂ....

ಬಿಜೆಪಿಯ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿ ನೀತಿಗಳನ್ನು ಕಾಂಗ್ರೆಸ್ ಸರಕಾರ ಮೃದುವಾಗಿ ಮುಂದುವರಿಸುತ್ತದೆ.

ಬಿಜೆಪಿ ಅದೇ ನೀತಿಗಳನ್ನು ಉಗ್ರವಾಗಿ ಜಾರಿ ಮಾಡುತ್ತದೆ.

ಹೀಗಾಗಿ ಸಾರಾಂಶ: ಕಾಂಗ್ರೆಸ್-ಬಿಜೆಪಿ ಒಂದೇ ಅಲ್ಲ.

ಆದರೆ... ಅವೆರಡರ ನಡುವೆ ವ್ಯತ್ಯಾಸ ಹೆಚ್ಚೇನಿಲ್ಲ.

ಆದ್ದರಿಂದ ಕೇವಲ ಪಕ್ಷಗಳು ಬದಲಾದರೆ ಬದುಕು ಹಸನಾಗುವುದಿಲ್ಲ.

ಕಾಂಗ್ರೆಸ್‌ನ ಮೂಲಕ ಫ್ಯಾಶಿಸಂ ಸೋಲಿಸುವ ಭ್ರಮೆ ಫಲಿಸುವುದಿಲ್ಲ.

ಕನಿಷ್ಠ ಸಿದ್ದು ಸರಕಾರದ ಕಳೆದ ಮೂರು ವರ್ಷದ ಆಳ್ವಿಕೆ ಆ ಭ್ರಾಂತಿಯನ್ನು ಕಳಚಬೇಕು.

ಸಂವಿಧಾನ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವದ ಸಾಕಾರಕ್ಕೆ ಮತ್ತೊಂದು ಸ್ವಾತಂತ್ರ್ಯ ಹೋರಾಟ ಕಟ್ಟದೆ ದೇಶಕ್ಕೆ ಉಳಿಗಾಲವಿಲ್ಲ.

ಫ್ಯಾಶಿಸಂನಿಂದ ಮುಕ್ತಿ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಸುಂದರ್

contributor

Similar News