×
Ad

ಸಿದ್ದು ಬಜೆಟ್: ನವಸಮಾಜವಾದಿ ಬಾಟಲಲ್ಲಿ ಬಂಡವಾಳಶಾಹಿ ಮದ್ಯ!

Update: 2026-03-11 11:27 IST

ವಿತ್ತೀಯ ಶಿಸ್ತಿನ ಸಾರ ಕಾರ್ಪೊರೇಟ್ ಬಂಡವಾಳಶಾಹಿ ಆಸಕ್ತಿಯ ಪರವಾಗಿ ರಾಜ್ಯದ ಸಂಪನ್ಮೂಲಗಳನ್ನು ನಿಯೋಜಿಸಿ ಜನಸಾಮಾನ್ಯರ ಆರ್ಥಿಕ ಆಸಕ್ತಿಗಳ ಮೇಲೆ ಅಂಕುಶ ಹೇರುವ ಕಾರ್ಪೊರೇಟ್ ಬಂಡವಾಳಶಾಹಿ ಶಿಸ್ತೇ ಆಗಿದೆ. ಯಾವ ಸರಕಾರ ತಾನು ವಿತ್ತೀಯ ಶಿಸ್ತನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತೇನೆಂದು ಹೇಳುತ್ತದೋ ಆ ಸರಕಾರ ಪರೋಕ್ಷವಾಗಿ ಘೋಷಿಸುತ್ತಿರುವುದು ತಾನೂ ಜನವಿರೋಧಿ ಮತ್ತು ಕಾರ್ಪೊರೇಟ್ ಪರ ಬಜೆಟನ್ನು ಯಶಸ್ವಿಯಾಗಿ ಮಂಡಿಸಿದ್ದೇನೆ ಎಂದೇ ಆಗಿದೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆಯ 17ನೇ ಬಾರಿ ಬಜೆಟನ್ನು ಮಂಡಿಸಿದ್ದಾರೆ. ಯಥಾಪ್ರಕಾರ ಆರಾಧಕರು ಅದನ್ನು ಅತ್ಯುತ್ತಮ ಬಜೆಟ್ ಎಂದೂ, ವಿರೋಧಿಗಳು ಜನವಿರೋಧಿ ಬಜೆಟ್ ಎಂದೂ ಯಾವುದೇ ಅರ್ಥಪೂರ್ಣ ವಿಶ್ಲೇಷಣೆ ಮತ್ತು ಅಂಕಿಅಂಶಗಳಿಲ್ಲದೆ ಸಾಂಪ್ರದಾಯಿಕ ‘ಪ್ರತಿಕ್ರಿಯೆ’ಗಳನ್ನು ನೀಡಿದ್ದಾರೆ. ಮಾಧ್ಯಮಗಳು ಕೂಡ ಡೆಡ್‌ಲೈನ್ ಒತ್ತಡದಲ್ಲೋ ಅಥವಾ ಮುಖ್ಯಮಂತ್ರಿಗಳು ಬಜೆಟ್ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಕಳೆಯುವ ‘ಆಪ್ತ ಸಮಯದ’ ಮುಲಾಜಿಗೋ ಬಿದ್ದು ಬಣ್ಣಬಣ್ಣದ ಸಕಾರಾತ್ಮಕ ಶೀರ್ಷಿಕೆಗಳನ್ನು ಕೊಟ್ಟು ಋಣ ತೀರಿಸಿವೆ.

ಈ ಬಾರಿ ಈ ರೂಢಿಗತ ರಿವಾಜುಗಳ ಜೊತೆಗೆ ಕೋಮುವಾದಿ ಬಿಜೆಪಿ ಮತ್ತು ಅದರ ಭಟ್ಟಂಗಿ ಮಾಧ್ಯಮಗಳು ಸಿದ್ದು ಬಜೆಟನ್ನು ಯಾವುದೇ ಪುರಾವೆಯಿಲ್ಲದೆ ‘ಸಾಬರ ಪರ’ ಬಜೆಟೆಂದು ಕೋಮುದ್ವೇಷ ಹೆಚ್ಚಿಸಲು ಪ್ರಯತ್ನಿಸಿದ್ದವು. ಆದರೆ ಬಜೆಟ್‌ನ ಅಂಕಿಅಂಶಗಳೇ ಈ ಬಾರಿ ಅಲ್ಪಸಂಖ್ಯಾತರಿಗೆ ಕಳೆದ ಬಜೆಟ್‌ಗಿಂತ ಕಡಿಮೆ ಅನುದಾನವನ್ನು ನೀಡಿದೆ. ರಾಜ್ಯದ ಶೇ.12ಕ್ಕಿಂತಲೂ ಹೆಚ್ಚಿರುವ ಮುಸ್ಲಿಮ್ ಸಮುದಾಯದ ವಿಶೇಷ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಮುಸ್ಲಿಮ್ ಸಮುದಾಯದ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯ ಈ ಬಜೆಟ್‌ನಲ್ಲೂ ಮುಂದುವರಿದಿರುವುದೇ ಸತ್ಯ. ಅದೇ ರೀತಿ ಗ್ಯಾರಂಟಿಗಳನ್ನು ಪೂರೈಸಲು ದಲಿತ ಸಮುದಾದ ಹಕ್ಕಿನ ಪಾಲಾದ SCSP/TSP ಮೊತ್ತದಲ್ಲಿ ಈ ಬಾರಿಯೂ 14,000 ಕೋಟಿ ರೂ.ಗಳನ್ನು ಕಿತ್ತುಕೊಳ್ಳಲಾಗಿದೆ.

ಹಾಗೆ ನೋಡಿದರೆ ಬಿಜೆಪಿ ಒಂದು ಜವಾಬ್ದಾರಿಯುತ ಜನಪರ ವಿರೋಧಪಕ್ಷವಾಗಿದ್ದರೆ ತಾತ್ವಿಕವಾಗಿ ವಿರೋಧಿಸಲು ಸಿದ್ದು ಬಜೆಟ್‌ನಲ್ಲಿ ಮೂಲಭೂತವಾದ ಹಲವಾರು ಜನವಿರೋಧಿ ನೀತಿ, ಯೋಜನೆ ಮತ್ತು ಕಾರ್ಯಕ್ರಮಗಳಿವೆ. ಆದರೆ ಬಿಜೆಪಿಯಾಗಲೀ, ಜೆಡಿಎಸ್ ಆಗಲೀ ಅಂಥ ಮೂಲಭೂತ ಜನವಿರೋಧಿ ನೀತಿಗಳ ಬಗ್ಗೆ ಚಕಾರವೆತ್ತುವುದಿಲ್ಲ. ಅವುಗಳ ವಿರೋಧ ಏನಿದ್ದರೂ ತಮ್ಮ ಆಸಕ್ತ ಕ್ಷೇತ್ರಗಳಿಗೆ ಇನ್ನೂ ಹೆಚ್ಚು ಹಣಕಾಸು ಒದಗಿಸಿಲ್ಲ ಎಂಬ ಮೇಲ್‌ಸ್ಥರದ ಅಥವಾ ಸಾಬರಿಗೆ ಹೆಚ್ಚುಕೊಡಲಾಗಿದೆ ಎಂಬ ಕೋಮುವಾದಿ ವಿರೋಧದ ಮಿತಿ ದಾಟುವುದಿಲ್ಲ.

ಹಾಗೆಯೇ ಕೇಂದ್ರದ ಬಿಜೆಪಿ ಬಜೆಟ್‌ನ ಬಗ್ಗೆ ಕಾಂಗ್ರೆಸ್‌ನ ವಿರೋಧವೂ ಸಹ ಮೋದಿ ಬಜೆಟ್‌ನ ಹಿಂದಿನ ಮೂಲಭೂತ ಜನವಿರೋಧಿ ನೀತಿಗಳನ್ನು ಮುಟ್ಟುವುದೇ ಇಲ್ಲ.

ಏಕೆಂದರೆ 1991ರಲ್ಲಿ ಕಾಂಗ್ರೆಸ್‌ನ ನೇತೃತ್ವದಲ್ಲಿ ಮತ್ತು ಬಿಜೆಪಿಯಾದಿಯಾಗಿ ಇತರ ಪಕ್ಷಗಳ ಉಗ್ರ ಬೆಂಬಲದೊಂದಿಗೆ ಸಂವಿಧಾನದ ಆಶಯವಾದ ಕಲ್ಯಾಣ ರಾಜ್ಯಕ್ಕೆ ತದ್ವಿರುದ್ಧವಾದ ಕಾರ್ಪೊರೇಟ್ ಬಂಡವಾಳಶಾಹಿ ಪರವಾದ ನವ ಉದಾರವಾದಿ ಆರ್ಥಿಕ ನೀತಿಗಳು ಜಾರಿಯಾಗಿವೆ.

ಸಂವಿಧಾನದ ಅಶಯವಾದ ಕಲ್ಯಾಣ ರಾಜ್ಯದ ಸಾರ ಸಂಪತ್ತಿನ ಸಮಾನ ಹಂಚಿಕೆ ಮತ್ತು ಉಳ್ಳವರಿಂದ ಇಲ್ಲದವರಿಗೆ ಸಂಪತ್ತಿನ ಹರಿವು. ಅದಕ್ಕೆ ತಕ್ಕ ಹಾಗೆ ಕೃಷಿ, ಕೈಗಾರಿಕಾ ಮತ್ತು ತೆರಿಗೆ ನೀತಿಗಳು. ಆದರೆ 1991ರ ನಂತರದ ನವ ಆರ್ಥಿಕ ನೀತಿಗಳೆಲ್ಲವೂ ಅದಕ್ಕೆ ತದ್ವಿರುದ್ಧವಾಗಿ ಕಾರ್ಪೊರೇಟ್ ಬಂಡವಾಳದ ಹಿತಾಸಕ್ತಿಯನ್ನು ಕೇಂದ್ರದಲ್ಲಿಟ್ಟುಕೊಂಡು ರೂಪಿತವಾಗುತ್ತವೆ. ತೆರಿಗೆ ನೀತಿಗಳೂ ಸಹ.

ತೆರಿಗೆ ನೀತಿಗಳೂ ಕಾರ್ಪೊರೇಟ್ ಪರವಾಗಿ ರೂಪಿತಗೊಳ್ಳಬೇಕೆಂಬುದು ಈಗ ಕಾನೂನಾಗಿದೆ. 2002ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಇದಕ್ಕಾಗಿಯೇ Fiscal Responsibility and Budget Management Act ಅನ್ನು (ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ)ಕೂಡ ಜಾರಿಗೆ ತಂದಿದೆ. ಅದನ್ನು ಬಿಜೆಪಿ, ಕಾಂಗ್ರೆಸ್ ಹಾಗೂ ಎಲ್ಲಾ ಪ್ರಾದೇಶಿಕ ಪಕ್ಷಗಳೂ ಚಾಚೂ ತಪ್ಪದೆ ಜಾರಿಗೆ ತರುತ್ತಿವೆ.

ವಿತ್ತೀಯ ಶಿಸ್ತಲ್ಲ-ಕಾರ್ಪೊರೇಟ್ ಆಸಕ್ತಿಯ ಸರ್ವಾಧಿಕಾರ

ಮೇಲ್ನೋಟಕ್ಕೆ ಈ ಕಾಯ್ದೆ ವಿತ್ತೀಯ ಶಿಸ್ತನ್ನು ಕಡ್ಡಾಯವಾಗಿ ಪಾಲಿಸಬೇಕೆಂಬ ಆಶಯವನ್ನು ಹೊಂದಿದೆ. ವಿತ್ತೀಯ ಶಿಸ್ತು ಸರಕಾರ ನಡೆಸಲು ಬೇಕೇ ಬೇಕು. ಆದರೆ ಆ ಶಿಸ್ತು ಹೇಗಿರಬೇಕು. 2002ರ ಈ ಕಾಯ್ದೆಯ ಪ್ರಕಾರ ಸರಕಾರಗಳು ತಮ್ಮ ವೆಚ್ಚವನ್ನು ಕಡಿಮೆ ಮಾಡಿಕೊಂಡು, ಆದಾಯವನ್ನು ಹೆಚ್ಚಿಸಿಕೊಂಡು ದೀರ್ಘಕಾಲೀನ ಅಭಿವೃದ್ಧಿಯ ಮೇಲಿನ ವೆಚ್ಚವನ್ನು ಹೆಚ್ಚು ಮಾಡುತ್ತಾ ವಿತ್ತೀಯ ಶಿಸ್ತು ಕಾಯ್ದುಕೊಳ್ಳಬೇಕು. ಅದಕ್ಕಾಗಿ ಸರಕಾರ ತನ್ನ ರೆವೆನ್ಯೂ ಕೊರತೆ ಅಂದರೆ ಸರಕಾರದ ಆಡಳಿತಾತ್ಮಕ ಮತ್ತು ಕಲ್ಯಾಣ ವೆಚ್ಚಗಳನ್ನು (ಸಂಬಳ, ಪಿಂಚಣಿ, ಜನರಿಗೆ ನೀಡುವ ಸಬ್ಸಿಡಿ, ಇನ್ನಿತರ ಬೆಂಬಲಗಳು) ತನ್ನ ತೆರಿಗೆ ಸಂಪನ್ಮೂಲ ಎಷ್ಟಿದೆಯೋ ಅಷ್ಟರೊಳಗೆ ಮಾಡಬೇಕು. ಆದಾಯ ಮೀರಿದ ವೆಚ್ಚವಿದ್ದರೆ ಸರಕಾರ ತನ್ನ ವೆಚ್ಚಗಳನ್ನು ಕಡಿತಗೊಳಿಸಿಕೊಳ್ಳಬೇಕು. ಎಂದರೆ ಸಿಬ್ಬಂದಿ ಕಡಿತ ಮಾಡಬೇಕು, ನೇಮಕಾತಿ ಕಡಿಮೆ ಮಾಡಿಕೊಳ್ಳಬೇಕು, ನೇಮಕಾತಿ ಮಾಡಿಕೊಂಡರೂ ಪಿಂಚಣಿ ಮತ್ತು ಸಂಬಳ ಏರಿಕೆಯ ಹೊರೆಯಿಲ್ಲದ ನೇಮಕಾತಿ ಮಾಡಿಕೊಳ್ಳಬೇಕು, ದುರ್ಬಲ ಜನಸಮುದಾಯಗಳಿಗೆ ಕೊಡುತ್ತಿದ್ದ ಉಚಿತ ಅಥವಾ ರಿಯಾಯಿತಿಗಳನ್ನು ನಿಲ್ಲಿಸಬೇಕು. ಇದು ವಿತ್ತೀಯ ಶಿಸ್ತು ಬೋಧಿಸುವ ರೆವೆನ್ಯೂ ಕೊರತೆ ಸೊನ್ನೆಯಾಗಬೇಕೆಂಬುದರ ಸಾರ.

ಇನ್ನು ವಿತ್ತೀಯ ಕೊರತೆ ಒಟ್ಟಾರೆ ರಾಜ್ಯ ಜಿಡಿಪಿಯ ಶೇ.3ನ್ನು ದಾಟಬಾರದು ಎಂಬುದು ಅದರ ಇನ್ನೊಂದು ಷರತ್ತು. ವಿತ್ತೀಯ ಕೊರತೆ ಎಂದರೆ ಸರಕಾರ ತನ್ನ ರೆವೆನ್ಯೂ ವೆಚ್ಚಗಳನ್ನು ದಾಟಿ ಇತರ ವೆಚ್ಚಗಳಿಗೆ ಆಯಾ ವರ್ಷ ಮಾಡುವ ಸಾಲದ ಮೊತ್ತ ಹಾಗೂ ರಾಜ್ಯದ ಒಟ್ಟಾರೆ ಸಾಲದ ಹೊರೆ ಒಟ್ಟಾರೆ ರಾಜ್ಯ ಜಿಡಿಪಿಯ ಶೇ. 25ನ್ನು ದಾಟಬಾರದು ಹಾಗೂ ಹೀಗೆ ಉಳಿತಾಯ ಮಾಡುವ ರಾಜ್ಯದ ಸಂಪನ್ಮೂಲವನ್ನು ಸರಕಾರವು ದೂರಗಾಮಿ ಅಭಿವೃದ್ಧಿ ವೆಚ್ಚಗಳಿಗೆ ಅರ್ಥಾತ್ ‘Capital Expenditure’ಗೆ ವ್ಯಯಿಸಬೇಕು. ಈ ವಿತ್ತೀಯ ಶಿಸ್ತಿನ ಕಾಯ್ದೆಯ ಪ್ರಕಾರ ರಾಜ್ಯಗಳ ಬಂಡವಾಳ ವೆಚ್ಚ ಹೆಚ್ಚಾದಷ್ಟು ರಾಜ್ಯ ಅಭಿವೃದ್ಧಿಯ ಪಥದಲ್ಲಿದೆ ಎಂದರ್ಥ.

ಆದರೆ ಈ ಅಭಿವೃದ್ಧಿಶೀಲ ಬಂಡವಾಳ ವೆಚ್ಚ ಎಂದರೇನು? ಇದನ್ನು ತೀರ್ಮಾನ ಮಾಡುವುದು ಆಯಾ ಸರಕಾರಗಳ ಅಭಿವೃದ್ಧಿ ವ್ಯಾಖ್ಯಾನ. ಈ ವಿಷಯದಲ್ಲಿ 1991ರ ನಂತರ ಯಾವುದೇ ಸರಕಾರಗಳ ಅಭಿವೃದ್ಧಿ ವ್ಯಾಖ್ಯಾನದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲವೂ ವಿದೇಶಿ ಮತ್ತು ಸ್ವದೇಶಿ ಕಾರ್ಪೊರೇಟ್‌ಗಳ ಬಂಡವಾಳ ಹೂಡಿಕೆಗೆ ಪೂರಕವಾದ ಮೂಲಭೂತ ಸೌಕರ್ಯಗಳ ಮೇಲಿನ ವೆಚ್ಚವನ್ನು ಮಾತ್ರ ಆದ್ಯತೆಯನ್ನೇ ಅಭಿವೃದ್ಧಿ ವೆಚ್ಚ ಅರ್ಥಾತ್ ‘Capital Expenditure’ ಎಂದು ಪರಿಗಣಿಸುತ್ತವೆ. ಸಣ್ಣ ರೈತರಿಗೆ ಬೇಕಾದ ಸರ್ವಋತು ಗ್ರಾಮೀಣ ರಸ್ತೆಯನ್ನಲ್ಲ ಅಥವಾ ಸಣ್ಣ ಉದ್ದಿಮೆಗಳಿಗೆ ಬೇಕಾದ ಸೌಕರ್ಯಗಳನ್ನಲ್ಲ.

ಹೀಗಾಗಿ ವಿತ್ತೀಯ ಶಿಸ್ತಿನ ಸಾರ ಕಾರ್ಪೊರೇಟ್ ಬಂಡವಾಳಶಾಹಿ ಆಸಕ್ತಿಯ ಪರವಾಗಿ ರಾಜ್ಯದ ಸಂಪನ್ಮೂಲಗಳನ್ನು ನಿಯೋಜಿಸಿ ಜನಸಾಮಾನ್ಯರ ಆರ್ಥಿಕ ಆಸಕ್ತಿಗಳ ಮೇಲೆ ಅಂಕುಶ ಹೇರುವ ಕಾರ್ಪೊರೇಟ್ ಬಂಡವಾಳಶಾಹಿ ಶಿಸ್ತೇ ಆಗಿದೆ. ಯಾವ ಸರಕಾರ ತಾನು ವಿತ್ತೀಯ ಶಿಸ್ತನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತೇನೆಂದು ಹೇಳುತ್ತದೋ ಆ ಸರಕಾರ ಪರೋಕ್ಷವಾಗಿ ಘೋಷಿಸುತ್ತಿರುವುದು ತಾನೂ ಜನವಿರೋಧಿ ಮತ್ತು ಕಾರ್ಪೊರೇಟ್ ಪರ ಬಜೆಟನ್ನು ಯಶಸ್ವಿಯಾಗಿ ಮಂಡಿಸಿದ್ದೇನೆ ಎಂದೇ ಆಗಿದೆ.

ಆದರೆ ಈ ದೇಶವು ಪ್ರಜಾತಂತ್ರ ದೇಶವಾಗಿರುವುದರಿಂದ ಬಹುಸಂಖ್ಯಾತ ಮತದಾರರು ಬಡ ಮಧ್ಯಮವರ್ಗದವರೇ ಆಗಿರುವುದರಿಂದ ಅವರ ಆಸಕ್ತಿಗಳನ್ನು ಗಣನೆಗೆ ತೆಗೆದುಕೊಂಡಿರುವ ಭ್ರಮೆ ಮೂಡಿಸಲು ಉಬ್ಬರದ ಅಂಕಿಸಂಖ್ಯೆಗಳನ್ನು, ಅನುದಾನವಿಲ್ಲದ ಭರವಸೆಗಳನ್ನು, ಒಂದು ಕೈಯಿಂದ ಕಿತ್ತು ಮತ್ತೊಂದು ಕೈಗೆ ಕೊಡುವ ಗ್ಯಾರಂಟಿಗಳನ್ನು ಮಾಡುವ ಕಸರತ್ತನ್ನಷ್ಟೇ ಪ್ರತೀ ಬಜೆಟ್‌ನಲ್ಲಿ ಮಾಡಲಾಗುತ್ತದೆ.

ಇದಲ್ಲದೆ 2002ರಿಂದ ಎಲ್ಲಾ ಸರಕಾರಗಳು ಜನರಿಂದ ಮುಚಿಟ್ಟಿರುವ ಮಹಾಸತ್ಯವೊಂದಿದೆ. ಪ್ರತೀ ಸರಕಾರವೂ ತನ್ನ ಬಜೆಟ್ ಮಂಡನೆಯೊಂದಿಗೆ ಈ Fiscal Responsibility and Budget Management Act (FRBM)ಗೆ ಬದ್ಧವಾಗಿದ್ದೇವೆ ಎಂದು ಘೋಷಿಸಬೇಕು ಮತ್ತು ಬಜೆಟ್ ದಾಖಲೆಗಳೊಂದಿಗೆ ಪ್ರತೀ ಬಜೆಟ್ ಮಂಡನೆಯ ಜೊತೆಗೆ ಈ ವೆಚ್ಚ ಕಡಿತ ಹಾಗೂ ಆದಾಯ ಹೆಚ್ಚಳ ಮತ್ತು ಕಾರ್ಪೊರೇಟ್ ಅಭಿವೃದ್ಧಿಯನ್ನು ಮುಂದಿನ ಐದು ವರ್ಷಗಳಲ್ಲಿ ಹೇಗೆ ಸಾಧಿಸಲಾಗುವುದು ಎಂಬ Medium Term Fiscal Plam (MTFP) ನೀಲನಕ್ಷೆಯನ್ನು ಮಂಡಿಸಬೇಕು.

ಈ MTFPಯೇ ಅಸಲಿ ಬಜೆಟ್. ಮುಖ್ಯಮಂತ್ರಿಗಳ ಹುಸಿ ಅಬ್ಬರಗಳು, ಉಬ್ಬರದ ಅಂಕಿಸಂಖ್ಯೆಗಳ ಉದ್ದುದ್ದ ಭಾಷಣವಲ್ಲ. ಇದನ್ನು ಅವರು ಸರಕಾರಕ್ಕೆ ಸಾಲ ಕೊಡುವ ಸಂಸ್ಥೆಗಳಿಗೆ, ಅಂತರ್‌ರಾಷ್ಟ್ರೀಯ ಕ್ರೆಡಿಟ್ ಏಜೆನ್ಸಿಗಳಿಗೆ, ಐಎಂಎಫ್ ಮತ್ತು ವಿಶ್ವಬ್ಯಾಂಕುಗಳಿಗೆ ಸಲ್ಲಿಸಬೇಕು. ಹೀಗಾಗಿ MTFPಯಲ್ಲಿ ಬೊಗಳೆಗಳು ಇರುವುದಿಲ್ಲ.

ಅಸಕ್ತರು ಈ ವರ್ಷದ MTFPಯು ಈ ವಿಳಾಸದಲ್ಲಿ ಓದಬಹುದು:

https://finance.karnataka.gov.in/uploads/MTFP2026-27_1772787123.pdf

ರಾಜ್ಯದ ಜನರ ನೈಜ ಕಲ್ಯಾಣದ ಬಗ್ಗೆ ಆಸಕ್ತಿ ಇರುವವರು ಸಿದ್ದು ಬಜೆಟ್ ಈ ಒಖಿಈPಯಲ್ಲಿ ಸರಕಾರದ ಆದಾಯ ಹೆಚ್ಚಳ, ವೆಚ್ಚ ಕಡಿತ ಮತ್ತು ಅಭಿವೃದ್ಧಿ ಮಾದರಿಯ ಬಗ್ಗೆ ಏನು ಹೇಳಿದೆ ಎಂಬುದನ್ನು ಗಮನಿಸಬೇಕೇ ಹೊರತು ಯಾವ್ಯಾವ ಕ್ಷೇತ್ರಕ್ಕೆ ದಕ್ಕಿದ್ದು ಹೆಚ್ಚೋ ಅಥವಾ ಕಡಿಮೆಯೋ ಎಂಬ ಹುಸಿ ಅಂಕಿಆಂಶಗಳನ್ನು ಮಾತ್ರವಲ್ಲ.

GST-ದರ ಇಳಿದರೂ ಸಂಗ್ರಹ ಏಕೆ ಹೆಚ್ಚಲಿಲ್ಲ?

ಸಿದ್ದು ಸರಕಾರ ತೆರಿಗೆ ಸಂಪನ್ಮೂಲ ಸಂಗ್ರಹಣೆಯ ವಿಷಯದಲ್ಲಿ ಮೋದಿ ಸರಕಾರ ಬಂದಮೇಲೆ ಜಿಎಸ್‌ಟಿಯಿಂದಾಗಿರುವ ತೆರಿಗೆ ಸಂಗ್ರಹ ಕೊರತೆಗೆ ಪರಿಹಾರ ಕೊಡುವುದರಲ್ಲಿ ಆಗುತ್ತಿರುವ ಅನ್ಯಾಯ, ಕೇಂದ್ರದ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಸಿಗಬೇಕಾದ ಪಾಲಿನಲ್ಲಿ ಆಗುತ್ತಿರುವ ತಾರತಮ್ಯಗಳಿಂದಾಗಿ ರಾಜ್ಯಕ್ಕೆ ಆಗುತ್ತಿರುವ ಹಣಕಾಸು ನಷ್ಟದ ಬಗ್ಗೆ ಹೇಳುತ್ತಿರುವುದು ಫೆಡರಲ್ ಸತ್ಯ. ಆದರೆ ಜನಪರ ಸತ್ಯವಲ್ಲ.

ಏಕೆಂದರೆ ಈ ಜಿಎಸ್‌ಟಿ ಎಂಬುದೇ ಪರೋಕ್ಷ ತೆರಿಗೆಯಾಗಿದ್ದು ಜನವಿರೋಧಿ ತೆರಿಗೆ ಪದ್ಧತಿಯಾಗಿದೆ. ಈವರೆಗೆ ರಾಜ್ಯ ಮತ್ತು ಕೇಂದ್ರಗಳು ಹಾಕುತ್ತಿದ್ದ ಬಹುಪಾಲು ಪರೋಕ್ಷ ತೆರಿಗೆಗಳನ್ನು ಒಂದೇ ಸಂಗ್ರಹ ಪದ್ಧತಿಯಡಿ ತಂದಿದ್ದರಿಂದ ರಾಜ್ಯ ಮತ್ತು ಕೇಂದ್ರಗಳ ಪರೋಕ್ಷ ಆದಾಯವು ಹೆಚ್ಚಾಯಿತು ಎಂಬುದನ್ನಷ್ಟೇ ಎರಡೂ ಸರಕಾರಗಳು ಹೇಳುತ್ತವೆ. ಆದರೆ ಈ ಜಿಎಸ್‌ಟಿಯನ್ನು ಕಟ್ಟಬೇಕಿರುವುದು ಜನಸಾಮಾನ್ಯರೇ ಅಲ್ಲವೇ? ಜಿಎಸ್‌ಟಿ ಸಂಗ್ರಹ ಹೆಚ್ಚಾಯಿತೆಂದರೆ ಜನಸಾಮಾನ್ಯರ ಪರೋಕ್ಷ ಸುಲಿಗೆಯೂ ಹೆಚ್ಚಾಯಿತು ಎಂದೇ ಅರ್ಥ. ಏಕೆಂದರೆ ಶೇ. 97ರಷ್ಟು ಜಿಎಸ್‌ಟಿ ಸಂಗ್ರಹವಾಗುವುದು ಶೇ. 99ರಷ್ಟು ಜನಸಾಮಾನ್ಯರು ಉಪ್ಪು, ಬೇಳೆ ಕೊಂಡರೂ ಕಟ್ಟುವ ಈ ಜಿಎಸ್‌ಟಿ ತೆರಿಗೆಗಳಿಂದ. ಆದ್ದರಿಂದಲೇ ಸಾಮಾನ್ಯವಾಗಿ ಹೆಚ್ಚು ಪ್ರಜಾತಂತ್ರ ಇರುವ ದೇಶಗಳಲ್ಲಿ ಆದಾಯ ಎಷ್ಟೆ ಇದ್ದರೂ ಒಂದೇ ಬಗೆಯ ತೆರಿಗೆ ಕಟ್ಟುವ ಪರೋಕ್ಷ ತೆರಿಗೆಗಿಂತ ಆದಾಯಕ್ಕೆ ತಕ್ಕಂತೆ ತೆರಿಗೆ ಕಟ್ಟುವ ಪ್ರತ್ಯಕ್ಷ ತೆರಿಗೆಯ ಪಾಲು ಹೆಚ್ಚು. ಜಿಎಸ್‌ಟಿ ಪದ್ಧತಿ ತೆರಿಗೆ ತಾರತಮ್ಯವನ್ನು ಮತ್ತು ಅಸಮಾನತೆಯನ್ನು ಹೆಚ್ಚಿಸುತ್ತದೆ ಮತ್ತು ಈ ಬಗೆಯ ಕಾರ್ಪೊರೇಟ್ ಪರ ತೆರಿಗೆ ಪದ್ಧತಿಯನ್ನು ಬಿಜೆಪಿ ಜಾರಿಗೆ ತಂದರೂ ಅದರ ಮೂಲ ಕಲ್ಪನೆ ಮತ್ತು ಆನಂತರ ಜಾರಿಗೆ ಸಮ್ಮತಿ ನೀಡಿದ್ದು ಕಾಂಗ್ರೆಸ್ ಪಕ್ಷವೇ.

ಈ ಬಜೆಟ್‌ನಲ್ಲಿ ಜಿಎಸ್‌ಟಿಯಿಂದ ನಿರೀಕ್ಷಿತ ಆದಾಯ ಬಂದಿಲ್ಲವಾದ್ದರಿಂದ ಒಟ್ಟಾರೆ ಬಜೆಟ್‌ನ ಪ್ರಮಾಣ ಕಳೆದ ವರ್ಷದ ಮುಂಗಡ ಅಂದಾಜಿಗಿಂತ 10,000 ಕೋಟಿ ರೂ. ಕಡಿಮೆಯಾಗಿದೆ ಎಂದು ಸಿದ್ದು ಸರಕಾರ ಹೇಳಿದೆ. ಇದಕ್ಕೆ ಪ್ರಧಾನ ಕಾರಣ ಹೋದವರ್ಷ ಸೆಪ್ಟಂಬರ್ ತಿಂಗಳಲ್ಲಿ ಮೋದಿ ಸರಕಾರ ಜಿಎಸ್‌ಟಿ ತೆರಿಗೆ ದರಗಳನ್ನು ಒಂದಷ್ಟು ಕಡಿಮೆ ಮಾಡಿತ್ತು. ಅದರ ಹಿಂದಿನ ಗ್ರಹಿಕೆ ದರ ಕಡಿಮೆಯಾದ್ದರಿಂದ ತಾತ್ಕಾಲಿಕವಾಗಿ ತೆರಿಗೆ ಸಂಗ್ರಹದ ಪ್ರಮಾಣ ಕಡಿಮೆಯಾದರೂ ತೆರಿಗೆ ದರ ಕಡಿಮೆಯಾಗುವುದರಿಂದ ಬೆಲೆಗಳು ಕಡಿಮೆಯಾಗಿ ಖರೀದಿಯ ಪ್ರಮಾಣ ಹೆಚ್ಚಾಗುವುದು. ಅದರಿಂದಾಗಿ ನಿಧಾನವಾಗಿ ಮೊದಲಿಗಿಂತ ಹೆಚ್ಚಿನ ತೆರಿಗೆ ಸಂಗ್ರಹವಾಗುವುದು ಎಂಬ ಭ್ರಮಾತ್ಮಕ ತರ್ಕವನ್ನು ಮೋದಿ ಸರಕಾರ ಮುಂದಿಟ್ಟಿತ್ತು. ಅದಕ್ಕೆ ಜಿಎಸ್‌ಟಿ ಮಂಡಲಿಯಲ್ಲಿ ಕರ್ನಾಟಕವನ್ನೂ ಒಳಗೊಂಡಂತೆ ಎಲ್ಲಾ ಪಕ್ಷಗಳ ಸರಕಾರಗಳು ಒಪ್ಪಿಕೊಂಡಿದ್ದವು.

ಆದರೆ ದರಗಳು ಕಡಿಮೆಯಾದರೂ ಖರೀದಿ ಹೆಚ್ಚಾಗಲಿಲ್ಲ. ಕಾರಣವೇನು? ಜನರಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಿಸುವಂತಹ ಆದಾಯವೇ ಇಲ್ಲದಿದ್ದಾಗ ಏರ್ ಕಂಡಿಶನರ್, ಕಾರು, ಚಿನ್ನ ಇವುಗಳ ಮೇಲೆ ತೆರಿಗೆ ಕಡಿಮೆ ಮಾಡಿದ ತಕ್ಷಣ ಜನರು ಖರೀದಿಸಲು ಸಾಧ್ಯವೇ?

ಹಾಗೆ ನೋಡಿದರೆ ಭಾರತದ ರಾಷ್ಟ್ರೀಯ ತಲಾವಾರು ಆದಾಯ ರೂ. 2.19 ಲಕ್ಷವಾದರೆ, ಕರ್ನಾಟಕದ ತಲಾವಾರು ಆದಾಯ ರೂ. 4.33 ಲಕ್ಷ. ಆದರೂ ಇತರ ಎಲ್ಲಾ ರಾಜ್ಯಗಳಂತೆ ಕರ್ನಾಟಕದಲ್ಲೂ ತೆರಿಗೆ ದರ ಇಳಿದ ತಕ್ಷಣ ಖರೀದಿಯೇನೂ ಹೆಚ್ಚಲಿಲ್ಲ. ಅದಕ್ಕೆ ಕಾರಣ ರಾಜ್ಯದ ಸರಾಸರಿ ಆದಾಯ 4.33 ಲಕ್ಷವಾಗಿದ್ದರೂ ಬೆಂಗಳೂರು ಜಿಲ್ಲೆಯ ಸರಾಸರಿ ರೂ. 8 ಲಕ್ಷವಾಗಿದ್ದರೆ ಗುಲ್ಬರ್ಗ ವಲಯದ ತಲಾವಾರು ಆದಾಯ ರೂ. 1.4 ಲಕ್ಷ, ರಾಷ್ಟ್ರೀಯ ಸರಾಸರಿಗಿಂತ ಶೇ. 50ರಷ್ಟು ಕಡಿಮೆ. ಬೆಂಗಳೂರಿನಲ್ಲೂ ಸ್ಲಂಗಳಲ್ಲಿ ವಾಸಿಸುವ ಶೇ. 40ಕ್ಕೂ ಹೆಚ್ಚಿನ ಜನರ ತಲಾವಾರು ಆದಾಯ ಗುಲ್ಬರ್ಗದಷ್ಟೆ.

ಹೀಗಾಗಿ ಈ ಅಸಮಾನತೆಯನ್ನು ನಿವಾರಿಸುವ, ಜನಸಾಮಾನ್ಯರ ಅದಾಯವನ್ನು ಹೆಚ್ಚಿಸುವ ಯೋಜನೆಗಳಿಲ್ಲದೆ ಜಿಎಸ್‌ಟಿ ಇಳಿಕೆಯಿಂದ ಅಭಿವೃದ್ಧಿ ಸಾಧ್ಯ ಎನ್ನುವ ಮೋದಿ ಸರಕಾರದ ಮತ್ತು ಅದಕ್ಕೆ ಸಮ್ಮತಿ ನೀಡಿದ್ದ ಕಾಂಗ್ರೆಸ್ ಸರಕಾರಗಳ ಅಭಿವೃದ್ಧಿ ಗ್ರಹಿಕೆಯೇ ಜನವಿರೋಧಿಯಾಗಿದೆ.

ಸಿದ್ದು ಬಜೆಟ್ ಮೋದಿ ಮಾಡಿದ ಜಿಎಸ್‌ಟಿ ಇಳಿಕೆಯಿಂದ ರಾಜ್ಯದ ತೆರಿಗೆ ಸಂಗ್ರಹ ಕಡಿಮೆಯಾಯಿತು ಎಂದು ದೂರುತ್ತದೆ. ಆದರೆ ಅದಕ್ಕೆ ಕಾರಣವಾದ ಅಸಮಾನತೆಯನ್ನು ಹೆಚ್ಚಿಸುತ್ತಿರುವ ಕಾರ್ಪೊರೇಟ್ ಬಂಡವಾಳಶಾಹಿಪರ ಆರ್ಥಿಕ ನೀತಿಗಳ ವಿಷಯವನ್ನು ಸಮಾಜವಾದಿ ಸಿದ್ದು ಕೂಡ ಮುಚ್ಚಿಡುತ್ತಾರೆ.

ವಿದೇಶಿ ಹೂಡಿಕೆಯೇ ಸಿದ್ದು ಬಜೆಟ್‌ನ ಇಂಜಿನ್!

ಸಿದ್ದರಾಮಯ್ಯನವರು ಬಜೆಟ್ ಭಾಷಣದಲ್ಲಿ ರೈತರ, ದಲಿತರ, ಮಹಿಳೆಯರ, ಬಡವರ ಪರವಾದ ಹಲವಾರು ಕವನಗಳನ್ನು ಬಳಸಿ ಮೆರುಗು ಹೆಚ್ಚಿಸಿಕೊಂಡಿದ್ದರೂ ಬಜೆಟ್‌ನಲ್ಲಿ ಮಾತ್ರ ತಮ್ಮ ಆರ್ಥಿಕ ನೀತಿಗಳ ಇಂಜಿನ್ ವಿದೇಶಿ ಮತ್ತು ಸ್ವದೇಶಿ ಕಾರ್ಪೊರೇಟ್ ಬಂಡವಾಳ ಹೂಡಿಕೆಯೇ ಎಂದು ಸ್ಪಷ್ಟ ಪಡಿಸಿದ್ದಾರೆ.

‘‘2019-25ರ ನಡುವೆ ರಾಜ್ಯವು 67 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆಯನ್ನು ಸಾಧಿಸಿದ್ದು, ಇದಕ್ಕೆ ನೀತಿ ಸುಧಾರಣೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೂಡಿಕೆದಾರ ಸ್ನೇಹಿ ವಾತಾವರಣವೇ ಕಾರಣ’’ವೆಂದೂ ಘೋಷಿಸಿದ್ದಾರೆ. ಹೂಡಿಕೆದಾರ ಸ್ನೇಹಿ ವಾತಾವರಣವೆಂದರೆ ಕಾರ್ಪೊರೇಟ್ ಬಂಡವಾಳಶಾಹಿಗಳ ಹೂಡಿಕೆಗಳ ರಕ್ಷಣೆ, ಲಾಭ ಹೆಚ್ಚಳಕ್ಕೆ ಪೂರಕವಾದ ಉಚಿತ ಭೂಮಿ, ನೀರು, ವಿದ್ಯುತ್ ನೀತಿಗಳು ಮತ್ತು ಕಾರ್ಪೊರೇಟ್ ಲಾಭಕ್ಕೆ ಅಡ್ಡಿಯಾಗದ ಕಾರ್ಮಿಕ ನೀತಿಗಳು ಎಂದೇ ಅರ್ಥ. ಹೀಗಾಗಿಯೇ ದೇವನಹಳ್ಳಿಯಲ್ಲೂ ಒಳಗೊಂಡು ಇಡೀ ಬೆಂಗಳೂರಿನ ಸುತ್ತ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಟೌನ್‌ಶಿಪ್, ಫ್ಯಾಕ್ಟರಿ ಕಟ್ಟಲು ರೈತರ ಭೂಮಿ ಕಬಳಿಕೆ ಇತ್ಯಾದಿಗಳು ವೇಗವಾಗಿ ನಡೆಯುತ್ತಿವೆ.

ಮತ್ತೊಂದು ಕಡೆ ಈ ಬಹುಪಾಲು ಉದ್ಯಮಗಳು ಬಂಡವಾಳಸಾಂದ್ರಿತ ಉನ್ನತ ತಂತ್ರಜ್ಞಾನ ಮತ್ತು ಎಐ ಆಧಾರಿತ ಉದ್ದಿಮೆಗಳಾಗಿದ್ದು ರಾಜ್ಯದ ಜಿಡಿಪಿ ಹೆಚ್ಚಿಸಬಹುದೇ ವಿನಾ ಸ್ಥಳೀಯರಿಗೆ ಉದ್ಯೋಗಗಳನ್ನು ನೀಡುವುದಿಲ್ಲ. ಬದಲಿಗೆ ಬದುಕನ್ನು ಕಿತ್ತುಕೊಳ್ಳುತ್ತದೆ.

ಸಮಾಜವಾದಿ ಸಿದ್ದು ಸರಕಾರವು ಹೀಗೆ ಬಜೆಟ್‌ನಲ್ಲೂ ಜನವಿರೋಧಿ ಯೋಜನೆ ಮತ್ತು ನೀತಿಗಳಲ್ಲಿ ಮೋದಿಯ ಬಿಜೆಪಿಗೆ ಪೈಪೋಟಿ ಕೊಡುತ್ತಿದೆ.

ವೆಚ್ಚ ಕಡಿತ -KPS ಮಾದರಿ

ವಿತ್ತೀಯ ಶಿಸ್ತಿನ ಸಿಪಾಯಿಯಾಗಿರುವ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ವೆಚ್ಚ ಕಡಿತ ಬಹಿರಂಗವಾಗಿಯೂ ಇದೆ. ಅಂತರ್ಗತವಾಗಿಯೂ ಇದೆ.

ಉದಾಹರಣೆಗೆ 54,000 ಉದ್ಯೋಗ ಭರ್ತಿಯನ್ನು ಘೋಷಿಸಿರುವ ಸಿದ್ದು ಸರಕಾರ ಈ ಬಜೆಟ್‌ನಲ್ಲಿ ಬೇಕಾಗುವ ಹೆಚ್ಚುವರಿ ಹಣಕಾಸನ್ನೇ ಎತ್ತಿಟ್ಟಿಲ್ಲ.

ಬದಲಿಗೆ ಉದ್ಯೋಗಗಳ ಪ್ರಮಾಣವನ್ನೇ ಕಡಿಮೆ ಮಾಡುವ ಹಲವಾರು ಯೋಜನೆಗಳನ್ನು ಘೋಷಿಸಿದೆ. ಅದರಲ್ಲಿ ಪ್ರಮುಖವಾದದ್ದು ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಜಾರಿ ಮಾಡುತ್ತಿರುವ KPS ಶಾಲೆಗಳು. ಸರಕಾರದಲ್ಲಿ ಭರ್ತಿಯಾಗದೇ ಬಾಕಿ ಇರುವ 2.5 ಲಕ್ಷ ಉದ್ಯೋಗಗಳಲ್ಲಿ ಅತಿ ಹೆಚ್ಚು ಉದ್ಯೋಗಗಳೆಂದರೆ 80,000ದಷ್ಟು ಉಪಾಧ್ಯಾಯರು. ಆದರೆ ಸರಕಾರ ಈಗಾಗಲೇ FRBM ಕಾಯ್ದೆಯಡಿ ಸರಕಾರಿ ವೆಚ್ಚಗಳಲ್ಲಿ ಪ್ರಧಾನವಾದ ಸಂಬಳ ಮತ್ತು ಪಿಂಚಣಿಗಳ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಹೀಗಾಗಿ 70,000 ಉಪಾಧ್ಯಾಯರನ್ನು ಭರ್ತಿ ಮಾಡಿ ವೆಚ್ಚವನ್ನು ಜಾಸ್ತಿ ಮಾಡಿಕೊಳ್ಳುವ ಬದಲಿಗೆ KPS ಎಂಬ ಸ್ವರ್ಗವನ್ನು ತೋರಿಸಿ ಸಾವಿರಾರು ಶಾಲೆಗಳನ್ನೇ ಮುಚ್ಚಿಬಿಡುವ ಅರ್ಥಾತ್ ಸಾವಿರಾರು ಉಪಾಧ್ಯಾಯರ ಹುದ್ದೆಗಳನ್ನೇ ಹಂತಹಂತವಾಗಿ ರದ್ದು ಮಾಡುವ ಸಿದ್ಧ ಮಾದರಿಯನ್ನು ಅನುಸರಿಸುತ್ತಿದೆ. ಅದಕ್ಕೆ ತಕ್ಕಂತೆ ಎಡಿಬಿಯಿಂದ ಈಗ ಕೆಪಿಎಸ್ ಶಾಲಾ ನಿರ್ಮಾಣಕ್ಕಾಗಿ ಪಡೆದುಕೊಂಡಿರುವ ರೂ. 2,500 ಕೋಟಿಗಳನ್ನು ಬಿಟ್ಟರೆ ಸರಕಾರ ಕೆಪಿಎಸ್‌ಗೆ ಯಾವುದೇ ಪೂರಕ ಅನುದಾನವನ್ನು ಕೊಡುವುದಿಲ್ಲವೆಂದು ಘೋಷಿಸಿದೆ.

ಹಾಗೆಯೇ ಉನ್ನತ ಶಿಕ್ಷಣಗಳಲ್ಲಿನ ಸಾವಿರ ಹುದ್ದೆಗಳ ಭರ್ತಿಯನ್ನು ‘after rationalisation’ ಅರ್ಥಾತ್ ಹುದ್ದೆಗಳ ಸಂಖ್ಯಾ ಕಡಿತವನ್ನು ಮಾಡಿದ ನಂತರ ಮಾಡಲಾಗುವುದೆಂದು ಹೇಳಲಾಗಿದೆ. ಇವಲ್ಲದೆ ಉಳಿದ ಬಡವರ ಪರ ಯೋಜನೆಗಳನ್ನು ಇನ್ನುಮುಂದೆ ಅತ್ಯಂತ ಅಗತ್ಯವಿರುವ Targetted ಫಲಾನುಭವಿಗಳಿಗೆ ಮಾತ್ರ ನೀಡುತ್ತಾ 2030ರ ಒಳಗೆ ಸಂಬಳದ ವೆಚ್ಚವನ್ನು ಜಿಎಸ್‌ಡಿಪಿಯ ಶೇ. 2.66ಕ್ಕೆ ಹಾಗೂ ಪಿಂಚಣಿ ವೆಚ್ಚವನ್ನು ಶೇ.1.20ಕ್ಕೆ ಇಳಿಸುವುದಾಗಿ ಸಮಾಜವಾದಿ ಸಿದ್ದು ಅವರು MTFPಯಲ್ಲಿ ಹೂಡಿಕೆದಾರರಿಗೆ ಭರವಸೆ ನೀಡಿದ್ದಾರೆ.

ಸರಕಾರದ ಆದಾಯ ಹೆಚ್ಚಿಸಲು ಬಗೆಬಗೆಯಾಗಿ ಜನರ ಸುಲಿಗೆ

ಸಿದ್ದು ಸರಕಾರವು ಸರಕಾರದ ಆದಾಯವನ್ನು ಹೆಚ್ಚಿಸಿಕೊಳ್ಳಲು ಮೋದಿ ಸರಕಾರದಂತೆ ಮತ್ತು FRBM ಕಾಯ್ದೆಯ ಷರತ್ತುಗಳಂತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜನರನ್ನು ಸುಲಿಯುವ ಮಾರ್ಗಗಳನ್ನೇ ಅನುಸರಿಸುತ್ತಿದೆ.

ಉದಾಹರಣೆಗೆ ರಾಜ್ಯ ಸರಕಾರದ ರಾಜಸ್ವದಲ್ಲಿ ಪ್ರಧಾನ ಪಾಲು ವಾಣಿಜ್ಯ ತೆರಿಗೆಗಳು. ಅದರಲ್ಲಿ ಜಿಎಸ್‌ಟಿ, ಪೆಟ್ರೋಲ್ ಮತ್ತು ಡಿಸೆಲ್ ತೆರಿಗೆ ಮತ್ತು ವೃತ್ತಿ ತೆರಿಗೆ ಸೇರಿಕೊಳ್ಳುತ್ತವೆ. ಈ ಬಾಬತ್ತುಗಳಿಂದ ಹೋದ ವರ್ಷ ರಾಜ್ಯ ಸರಕಾರಕ್ಕೆ 1,20,000 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಜಿಎಸ್‌ಟಿ ದರ ಕಡಿಮೆಯಾದ್ದರಿಂದ ಜಿಎಸ್‌ಟಿ ಸಂಗ್ರಹ ಕಳೆದ ವರ್ಷ ರೂ. 10,000 ಕೋಟಿ ಕಡಿಮೆಯಾಗಿ ಕೇವಲ ರೂ. 1,10,000 ಕೋಟಿ ಸಂಗ್ರಹವಾಯಿತು. ಮುಂದಿನ ವರ್ಷವೂ ಜಿಎಸ್‌ಟಿ ಸಂಗ್ರಹ ರೂ. 15,000 ಕೋಟಿ ಕಡಿಮೆಯಾಗುತ್ತದೆ ಎಂದು ಹೇಳುವ ಬಜೆಟ್ ಒಟ್ಟಾರೆ ವಾಣಿಜ್ಯ ತೆರಿಗೆಯಿಂದ ಮುಂದಿನ ವರ್ಷ 1,25,00 ಕೋಟಿ ರೂ. ಹೆಚ್ಚುವರಿ ಸಂಗ್ರಹವಾಗಲಿದೆ ಎಂದು ಅಂದಾಜಿಸಿದೆ. ಈ ಹೆಚ್ಚುವರಿ 15,000 ಕೋಟಿ ರೂ. ಜಿಎಸ್‌ಟಿಯಿಂದ ಅಲ್ಲ. ಹಾಗಿದ್ದರೆ ಸರಕಾರ ಪೆಟ್ರೊಲ್ ಮತ್ತು ಡೀಸೆಲ್ ತೆರಿಗೆ ಹೆಚ್ಚಿಸಲಿದೆಯೇ? ಅದರ ಪರಿಣಾಮವೇನು?

ಹಾಗೆಯೇ ರಾಜ್ಯ ಸರಕಾರವು ರಾಜಸ್ವ ಹೆಚ್ಚಿಸಲು ಸಂಪನ್ಮೂಲ ಕ್ರೋಡೀಕರಣ ಸಮಿತಿಯನ್ನು ರಚಿಸಿತ್ತು. ಅದು ರಾಜಸ್ವ ಹೆಚ್ಚಿಸಲು ಮುಖ್ಯವಾಗಿ ರಾಜ್ಯ ಸರಕಾರವು ಕೊಡುವ ಸೇವೆಯ ಶುಲ್ಕಗಳನ್ನು ಹೆಚ್ಚಿಸಲು ಮತ್ತು ಸರಕಾರದ ಆಸ್ತಿಗಳನ್ನು ಸುಧಾರಿಸಿ ನಗದೀಕರಣ ಮಾಡಲು ಸಲಹೆ ನೀಡಿದೆ. ಅಂದರೆ ಸರಕಾರ ನೀರು, ವಿದ್ಯುತ್, ಸಾರಿಗೆ, ಇನ್ನಿತರ ಸೇವೆಗಳ ಮೇಲಿನ ಶುಲ್ಕವನ್ನು ಹೆಚ್ಚಿಸಲಿದೆಯೇ?

ಸರಕಾರದ ಬಳಿ ಒಟ್ಟು 1,11,91,070 ಎಕರೆ ಜಮೀನಿದೆ. ರಾಜ್ಯದಲ್ಲಿ 32 ಲಕ್ಷ ರೈತರು ಸರಕಾರಿ ಜಮೀನಿಗೆ ಅರ್ಜಿ ಹಾಕಿದ್ದಾರೆ. ಆದರೆ ಸರಕಾರ ಅದನ್ನು ಕಾರ್ಪೊರೇಟ್‌ಗಳಿಗೆ invIT, PPP ಮಾರ್ಗದಲ್ಲಿ ಖಾಸಗೀಕರಿಸಿ, ನಗದೀಕರಿಸಿ, ಸರಕಾರದ ಆದಾಯ ಹೆಚ್ಚಿಸಿಕೊಳ್ಳುತ್ತದಂತೆ.

ಹೀಗಾಗಿಯೇ ಇದು ನವ ಸಮಾಜವಾದಿ ಲೇಬಲ್‌ನಲ್ಲಿರುವ ಹಳೆಯ ಬಂಡವಾಳಶಾಹಿ ಮತ್ತು ಬಿಜೆಪಿ ಮದ್ಯವೇ!

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಸುಂದರ್

contributor

Similar News