ಅನುಮಾನಿತ ವಿದೇಶಿಯರ ಪಟ್ಟಿಯೆಲ್ಲಿ? ಬಿಎಲ್‌ಒಗಳ ಸಾವಿಗೆ ಕಾರಣರು ಯಾರು?
ಮುಖ್ಯ ಚುನಾವಣಾ ಆಯುಕ್ತರಿಗೊಂದು ಬಹಿರಂಗ ಪತ್ರ
ಕರ್ನಾಟಕದಲ್ಲಿ ಎಸ್‌ಐಆರ್ ಪ್ರಾರಂಭವಾದ ಮೇಲೆ ನಾಲ್ವರು ಬಿಎಲ್‌ಒಗಳು ಎಸ್‌ಐಆರ್ ಕಾರ್ಯ ನಿರ್ವಹಿಸುವಾಗ ಸಾವಿಗೀಡಾಗಿದ್ದಾರೆ. ಅದಕ್ಕೆ ಕಾರಣ ಕೊಟ್ಟಿರುವ ಸಮಯಾವಧಿಯೊಳಗೆ ಕೆಲಸ ಮಾಡಿ ಮುಗಿಸಲೇ ಬೇಕೆಂಬ ಒತ್ತಡ. ಇದರ ಜೊತೆಗೆ ಪತ್ರಿಕೆಗಳು ವರದಿ ಮಾಡಿರುವಂತೆ ಬಿಎಲ್‌ಒ ಮೇಲಿನ ಅಧಿಕಾರಿಗಳು ಫಾರಂ ಹಂಚುವ ಕಾರ್ಯವನ್ನು ಇವತ್ತೇ ಸಂಪೂರ್ಣವಾಗಿ ಮುಗಿಸದಿದ್ದರೆ ಕೆಲಸದಿಂದ ತೆಗೆಯುವ ಶಿಸ್ತಿನ ಕ್ರಮಗಳನ್ನು ತೆಗೆದುಕೊಳ್ಳುವ ಬೆದರಿಕೆ ಹಾಕಿದ್ದಾರೆ.
ಅವರ ಮೇಲೆ ಇನ್ನಷ್ಟು ಅಪಾಯಕಾರಿ ಒತ್ತಡವನ್ನು ಸೃಷ್ಟಿಸಿದ್ದಾರೆ.
ಇದು ಬರಲಿರುವ ದಿನಗಳಲ್ಲಿ ಇನ್ನಷ್ಟು ಮಾರಕ ಪರಿಣಾಮಗಳನ್ನು ಖಂಡಿತಾ ಬೀರಲಿದೆ.
ಅಷ್ಟೇನೂ ಮಾನ್ಯರಲ್ಲದ ಶ್ರೀ ಜ್ಞಾನೇಶ್ ಕುಮಾರ್ ಅವರೇ,
ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾಗಿ ಇನ್ನು ವಾರವಾಗಿದೆ. ಆಗಲೇ ಕರ್ನಾಟಕದಲ್ಲಿ ನಾಲ್ವರು ಬಿಎಲ್‌ಒಗಳು ನೀವು ಸೃಷ್ಟಿಸಿದ ಅನಗತ್ಯ ಒತ್ತಡಗಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇದು ಈಗಾಗಲೇ ಎಸ್‌ಐಆರ್ ಮುಗಿದಿರುವ ರಾಜ್ಯಗಳಲ್ಲಿ ಬಲಿಯಾದ ಬಿಎಲ್‌ಒಗಳ ಸರಣಿ ಸಾವುಗಳ ಮುಂದುವರಿಕೆಯಾಗಿದೆ.
ಕರ್ನಾಟಕವನ್ನೂ ಒಳಗೊಂಡಂತೆ ಮೂರನೇ ಹಂತದಲ್ಲಿ 16 ರಾಜ್ಯಗಳಲ್ಲಿ ಎಸ್‌ಐಆರ್ ಪ್ರಾರಂಭಿಸುವ ಮುನ್ನ ಎಸ್‌ಐಆರ್ ಮುಗಿದ ರಾಜ್ಯಗಳಲ್ಲಿ ಬಿಎಲ್‌ಒಗಳು ಏಕೆ ಬಲಿಯಾದರು ಎಂಬ ಸಮೀಕ್ಷೆಯನ್ನೇನು ನೀವು ಮಾಡಿಕೊಳ್ಳಲಿಲ್ಲ. ಏಕೆ?
ಮೊನ್ನೆ ನಿಮ್ಮನ್ನು ಆಯ್ಕೆ ಮಾಡಿದ ಬಿಜೆಪಿ ಮತ್ತು ಅವರ ಮಿತ್ರ ಪಕ್ಷವಾದ ಜೆಡಿಎಸ್ ನಾಯಕರು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳನ್ನು ಭೇಟಿಯಾಗಿದ್ದರೂ ಈ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಅದು ಬಿಡಿ. ಅದು ಆ ಪಕ್ಷಗಳ ಅಮಾನುಷತೆಗೆ ಹಿಡಿದ ಕೈಗನ್ನಡಿಯಾಗಿದೆ.
ಆದರೆ ಈ ಬಿಜೆಪಿ ಮತ್ತವರ ಮಿತ್ರಪಕ್ಷಗಳು ಕೇಳಲೇ ಬೇಕಿದ್ದ ಮುಖ್ಯ ಪ್ರಶ್ನೆಯನ್ನು ಕೂಡ ಕೇಳಲಿಲ್ಲ ಮತ್ತು ನೀವು ಹೇಳಲೇ ಬೇಕಿದ್ದ ಉತ್ತರವನ್ನು ಹೇಳಲಿಲ್ಲ.
ಅದು- ‘‘ಎಸ್‌ಐಆರ್ ಮೂಲಕ ಪತ್ತೆ ಹಚ್ಚಲಾದ ಅಕ್ರಮ ವಿದೇಶಿ ವಲಸಿಗರ ಪ್ರಮಾಣವೆಷ್ಟು?’’
ಏಕೆಂದರೆ ಬಿಜೆಪಿ ಮತ್ತವರ ಮಿತ್ರಪಕ್ಷಗಳು ಎಸ್‌ಐಆರ್ ಆನ್ನು ಸಮರ್ಥಿಸಿಕೊಳ್ಳುತ್ತಿದ್ದುದೇ ಅಕ್ರಮ ವಿದೇಶಿಯರನ್ನು ಪತ್ತೆ ಹಚ್ಚಲು ಎಸ್‌ಐಆರ್ ಅತ್ಯಗತ್ಯ ಎಂದಲ್ಲವೇ?
ಅವರೇಕೆ ಅದನ್ನು ಪ್ರಶ್ನಿಸುತ್ತಿಲ್ಲ? ನೀವೇಕೆ ದೇಶಕ್ಕೆ ಉತ್ತರ ಕೊಡುತ್ತಿಲ್ಲ?
ಅದಕ್ಕೆ ಕಾರಣವಿದೆ. ಅವುಗಳನ್ನೇ ಒಂದು ಸತ್ಯ ಶೋಧನಾ ವರದಿಯಾಗಿ ಈ ಲೇಖನದಲ್ಲಿ ಜನರ ಮುಂದೆ ಮಂಡಿಸಲಾಗಿದೆ:
1)ಬಿಎಲ್‌ಒ ಗಳ ಸಾವುಗಳಿಗೆ, ಮತದಾರರ ಆತಂಕಗಳಿಗೆ ಕಾರಣವೇನು?
ಕರ್ನಾಟಕದಲ್ಲಿ ಎಸ್‌ಐಆರ್ ಪ್ರಾರಂಭವಾದ ಮೇಲೆ ನಾಲ್ವರು ಬಿಎಲ್‌ಒಗಳು ಎಸ್‌ಐಆರ್ ಕಾರ್ಯ ನಿರ್ವಹಿಸುವಾಗ ಸಾವಿಗೀಡಾಗಿದ್ದಾರೆ. ಅದಕ್ಕೆ ಕಾರಣ ಕೊಟ್ಟಿರುವ ಸಮಯಾವಧಿಯೊಳಗೆ ಕೆಲಸ ಮಾಡಿ ಮುಗಿಸಲೇ ಬೇಕೆಂಬ ಒತ್ತಡ. ಇದರ ಜೊತೆಗೆ ಪತ್ರಿಕೆಗಳು ವರದಿ ಮಾಡಿರುವಂತೆ ಬಿಎಲ್‌ಒ ಮೇಲಿನ ಅಧಿಕಾರಿಗಳು ಫಾರಂ ಹಂಚುವ ಕಾರ್ಯವನ್ನು ಇವತ್ತೇ ಸಂಪೂರ್ಣವಾಗಿ ಮುಗಿಸದಿದ್ದರೆ ಕೆಲಸದಿಂದ ತೆಗೆಯುವ ಶಿಸ್ತಿನ ಕ್ರಮಗಳನ್ನು ತೆಗೆದುಕೊಳ್ಳುವ ಬೆದರಿಕೆ ಹಾಕಿದ್ದಾರೆ.
ಅವರ ಮೇಲೆ ಇನ್ನಷ್ಟು ಅಪಾಯಕಾರಿ ಒತ್ತಡವನ್ನು ಸೃಷ್ಟಿಸಿದ್ದಾರೆ.
ಇದು ಬರಲಿರುವ ದಿನಗಳಲ್ಲಿ ಇನ್ನಷ್ಟು ಮಾರಕ ಪರಿಣಾಮಗಳನ್ನು ಖಂಡಿತಾ ಬೀರಲಿದೆ.
ಇದಲ್ಲದೆ ರಾಜ್ಯಾದ್ಯಂತ ಮತದಾರರು Enumeration Form ಭರ್ತಿ ಮಾಡುವಲ್ಲಿ ಹಲವು ಗೊಂದಲಗಳನ್ನು ಎದುರಿಸುತ್ತಾ ಅಪಾರ ಆತಂಕ ಎದುರಿಸುತ್ತಿದ್ದಾರೆ. ಸರಳವೆನ್ನುವ ಪ್ರಕ್ರಿಯೆಯಲ್ಲಿ ಸರಳ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡದೆ ಚುನಾವಣಾ ಅಧಿಕಾರಿಗಳು ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ.
ಉದಾಹರಣೆಗೆ Enumeration Formನಲ್ಲಿ ಕೊನೆಗೆ ತಾನು ಕೊಟ್ಟಿರುವ ಮಾಹಿತಿಗಳು ತಪ್ಪಾದರೆ ದಂಡಕ್ಕೆ ಅರ್ಹನಾಗಿರುತ್ತೇನೆ ಎಂದು ಮತದಾರರು ಒಪ್ಪಿಕೊಂಡು ಸಹಿ ಮಾಡಬೇಕು ಮತ್ತು ಬಿಎಲ್‌ಒಗಳು ‘‘ಹಿಂದಿನ ಎಸ್‌ಐಆರ್ (2002ರ)ಮತದಾರರ ಪಟ್ಟಿಯಿಂದ ಮೇಲ್ಕಂಡ ವಿವರಗಳನ್ನು ನಾನು ಪರಿಶೀಲಿಸಿದ್ದೇನೆ’’ ಎಂದು ವಾಗ್ದಾನ ಮಾಡಿ ಸಹಿ ಹಾಕಬೇಕು.
ಇವೆರಡೂ ಸರಿಯಾಗಿ ಆಗಬೇಕೆಂದರೆ 2002ರ ಪಟ್ಟಿ ಸುಲಭವಾಗಿ ದಕ್ಕಬೇಕು. ಈಗಾಗಲೇ ಸಾಕಷ್ಟು ವರದಿಗಳು ಸ್ಪಷ್ಟಪಡಿಸುವಂತೆ ಆ ಬಗ್ಗೆ ಮತದಾರರಿಗೂ ಮಾಹಿತಿಯಿಲ್ಲ. ಹೀಗಾಗಿ ಅದನ್ನು ಒದಗಿಸಲು ಬಿಎಲ್‌ಒ ಗಳಿಗೂ ಸಾಧ್ಯವಾಗುತ್ತಿಲ್ಲ. ಒಂದೊಂದು ಮನೆಯಲ್ಲೂ ಇದಕ್ಕಾಗಿಯೇ ಸಾಕಷ್ಟು ಸಮಯ ವ್ಯಯವಾಗುತ್ತಿದ್ದು ಬಿಎಲ್‌ಒಗಳು ತಮ್ಮ ಟಾರ್ಗೆಟ್‌ಪೂರೈಸಲಾಗುತ್ತಿಲ್ಲ. ಅದರ ಮೇಲೆ ಕೆಲಸದಿಂದ ತೆಗೆಯುವ ಒತ್ತಡಗಳು ಮತ್ತು ಅವೈಜ್ಞಾನಿಕ ಸಮಯ ಮಿತಿಗಳು.
ಇವೆಲ್ಲದರಿಂದ ಒಂದು ಕಡೆ ಬಿಎಲ್‌ಒಗಳು ಹೆಣಗಾಡುತ್ತಿದ್ದಾರೆ. ಅದರಿಂದಾಗಿ ಮತದಾರರ ಭವಿಷ್ಯವೂ ಆತಂಕಕ್ಕೆ ಈಡಾಗುತ್ತಿದೆ.
ಜನರ ಈ ಆತಂಕ ಆಗಸ್ಟ್ 5ರಂದು ಕರಡು ಪಟ್ಟಿಯ ಪ್ರಕಟವಾದ ನಂತರ ಇನ್ನಷ್ಟು ಹೆಚ್ಚಲಿರುವುದು ಸ್ವಾಭಾವಿಕ. ಆ ಅವಧಿಯಲ್ಲಿ ರಾಜ್ಯವು ಇನ್ನಷ್ಟು ಅರಾಜಕತೆ, ಜನರ ಅಸಹಾಯಕ ಆತಂಕಗಳಿಗೆ ಸಾಕ್ಷ್ಯವಾಗಲಿದೆ.
2) ಆದರೆ 2026 ಅಕ್ಟೋಬರ್ ಒಳಗೆ ಎಸ್‌ಐಆರ್ ಮುಗಿಸಲೇ ಬೇಕೆಂಬ ತುರ್ತೇನು? ಚುನಾವಣಾ ಆಯೋಗವೇ ಹೇಳುವಂತೆ 2002ರಲ್ಲಿ ನಡೆದ ಐಆರ್ ಸಾವಧಾನವಾಗಿ ಒಂದೂವರೆ ವರ್ಷಗಳ ಕಾಲ ನಡೆಸಲಾಗಿತ್ತಲ್ಲವೇ?
ಕರ್ನಾಟಕದಲ್ಲಿ ಜೂನ್ 30ರಂದು ಪ್ರಾರಂಭವಾದ Enumeration Form ಹಂಚಿಕೆ ಮತ್ತು ವಾಪಸ್ ಪಡೆಯುವ ಪ್ರಕ್ರಿಯೆಗಳನ್ನು ಜುಲೈ 29 (ಅಂದರೆ ಒಂದು ತಿಂಗಳ ಒಳಗೆ) ಮುಗಿಸಿ, ಡಿಜಿಟಲೈಸ್ ಮಾಡಬೇಕಿದೆ. ಏಕೆಂದರೆ ಅಕ್ಟೋಬರ್ ಒಳಗೆ - ಅಂದರೆ ಒಟ್ಟಾರೆ ಮೂರು ತಿಂಗಳ ಒಳಗೆ ಇಡೀ ಎಸ್‌ಐಆರ್ ಪ್ರಕ್ರಿಯೆ ಮಾಡಿ ಮುಗಿಸಬೇಕೆಂಬ ಅವೈಜ್ಞಾನಿಕ-ಅಪ್ರಜಾತಾಂತ್ರಿಕ ಕಾಲಮಿತಿಯನ್ನು ಚುನಾವಣಾ ಆಯೋಗ ಯಾವುದೇ ತರ್ಕವಿಲ್ಲದೆ ರೂಪಿಸಿದೆ.
ಅದೇ ಇಂತಹ ಅಪರಿಮಿತ ಒತ್ತಡಗಳನ್ನು ಬಿಎಲ್‌ಒಗಳ ಮೇಲೂ, ಮತದಾರರ ಮೇಲೂ ಸೃಷ್ಟಿಸುತ್ತಿದೆ.
ಆಯೋಗದ ಮತ್ತು ಬಿಜೆಪಿಯ ಅಸಲೀ ಉದ್ದೇಶ 2027ರ ಫೆಬ್ರವರಿಯಲ್ಲಿ ಪ್ರಾರಂಭವಾಗಲಿರುವ ಜನಗಣತಿಗೆ (ಸೆನ್ಸಸ್) ಮುನ್ನ ಅಂದರೆ 2026ರ ಡಿಸೆಂಬರ್ ವೇಳೆಗೆ ದೇಶದ 31 ರಾಜ್ಯಗಳಲ್ಲಿ ಎಸ್‌ಐಆರ್ ಮಾಡಿ ಮುಗಿಸುವುದು. ಅದಕ್ಕಾಗಿಯೇ ಈ ಅವೈಜ್ಞಾನಿಕ ಕಾಲಮಿತಿ. ಅಕ್ಟೋಬರ್‌ನಲ್ಲಿ ಕರ್ನಾಟಕವನ್ನು ಒಳಗೊಂಡಂತೆ 16 ರಾಜ್ಯಗಳ ಎಸ್‌ಐಆರ್ ಮುಗಿಸಿ ಉಳಿದ ರಾಜ್ಯಗಳ ಎಸ್‌ಐಆರ್ ಅನ್ನು ಡಿಸೆಂಬರ್‌ನಲ್ಲಿ ಮುಗಿಸಲಿದೆ.
3) ಸೆನ್ಸಸ್‌ಗೂ ಎಸ್‌ಐಆರ್‌ಗೂ ಏನು ಸಂಬಂಧ?
ಸೆನ್ಸಸನ್ನು ಸಾಮಾನ್ಯವಾಗಿ ದೇಶದ ಜನರ ಗಣತಿ ಮಾಡಲು ನಡೆಸಲಾಗುತ್ತದೆ.
ಆದರೆ ಮೋದಿ ಸರಕಾರ 2020ರ ಸೆನ್ಸಸ್-ಜನಗಣತಿಯನ್ನು ಜನರ ನಾಗರಿಕತ್ವವನ್ನು ಪರಿಶೀಲಿಸಲು ಮತ್ತು ತಮಗೆ ಬೇಡವಾದ ಸಮುದಾಯಗಳ ನಾಗರಿಕತ್ವವನ್ನು ಕಿತ್ತು ಹಾಕಲು ಬಳಸಿಕೊಳ್ಳಬೇಕೆಂದಿದ್ದರು.
ಅದಕ್ಕಾಗಿಯೇ 2019ರಲ್ಲಿ ಸಿಎಎ ಕಾಯ್ದೆಯನ್ನು ಜಾರಿಗೆ ತಂದರು.
2020-21ರ ಜನಗಣತಿಯಲ್ಲಿ ಜನರ ನಾಗರಿಕತ್ವದ ಪುರಾವೆಯನ್ನು ಕೇಳುತ್ತಾ NPR (National Population Register) ತಯಾರಿಸಲು ಬೇಕಾದ ಪ್ರಶ್ನಾವಳಿಗಳನ್ನು ರೂಪಿಸಿದ್ದರು.
ಆ ಪ್ರಕ್ರಿಯೆಯಲ್ಲಿ ನಾಗರಿಕತ್ವ ಸಾಬೀತು ಮಾಡಲಾದವರ ಪಟ್ಟಿಯನ್ನು ಮಾತ್ರ ಪ್ರತ್ಯೇಕಿಸಿ NRC (National Register Of Citizens) ಪಟ್ಟಿಯನ್ನು ಸಿದ್ಧಪಡಿಸಲು ಮುಂದಾಗಿದ್ದರು.
ಯಾರು ನಾಗರಿಕತ್ವದ ಪುರಾವೆಯನ್ನು ನೀಡುವುದಿಲ್ಲವೋ ಅವರನ್ನು NRCಯಿಂದ ಹೊರಗಿಡುವುದಲ್ಲದೆ ಅವರನ್ನು ಶಂಕಿತ ವಿದೇಶಿಯರ ಪಟ್ಟಿಗೆ ಸೇರಿಸುವ ಮತ್ತು ದೇಶದಿಂದ ಹೊರಗಟ್ಟುವ ಪ್ರಕ್ರಿಯೆಗಳಿಗಾಗಿ ಸಿದ್ಧತೆ ಮಾಡಿಕೊಂಡಿದ್ದರು.
ಆದರೆ ಜನರ ಬೃಹತ್ ಹೋರಾಟದಿಂದ ಅದನ್ನು ಮಾಡಲು ಆಗಿರಲಿಲ್ಲ. 2020-21ರಲ್ಲಿ ಕೋವಿಡ್ ದಾಳಿಯಿಂದಾಗಿ ಸೆನ್ಸಸನ್ನೇ ಮಾಡಲಿಲ್ಲ
ಈಗ 2027ರ ಫೆಬ್ರವರಿಯಿಂದ ಮತ್ತೆ ಜನಗಣತಿ ಪ್ರಾರಂಭವಾಗಲಿದೆ. (2026ರಲ್ಲಿ ಮನೆಗಣತಿ ಮುಗಿಯುತ್ತದೆ) 2025ರ ಬಜೆಟ್‌ನಲ್ಲಿ ಜನಗಣತಿ ಮಾಡಲು ಕೇವಲ 3,000 ಕೋಟಿ ರೂ. ನೀಡಿದ್ದರೆ, 2026ರ ಬಜೆಟ್‌ನಲ್ಲಿ ಸೆನ್ಸಸ್ ಜೊತೆ-ಜೊತೆಗೆ NPR ಅನ್ನು ಮಾಡಲು 6,000 ಕೋಟಿ ರೂ. ನೀಡಲಾಗಿದೆ.
(https://indianexpress.com/article/political-pulse/no-npr-notification-budget-funds-nrc10507407/)
ಅಂದರೆ 2019ರಲ್ಲಿ ಮಾಡಲಾಗದ್ದನ್ನು ಈ ಸೆನ್ಸಸ್ ಸಮಯದಲ್ಲಿ ಮಾಡಿ ಮುಗಿಸಲು ಮೋದಿ ಸರಕಾರ ಮುಂದಾಗಿದೆ.
ಸೆನ್ಸಸ್ ಪ್ರಕ್ರಿಯೆಯಲ್ಲೇ NRCಯನ್ನು ಮಾಡಲು ಸಾಧ್ಯ. ಆದರೆ ನೇರವಾಗಿ NRC ಮಾಡದೆ ಅದೇ ಪ್ರಶ್ನೆಗಳನ್ನು ಈಗ ಎಸ್‌ಐಆರ್ ಮೂಲಕ ಕೇಳುತ್ತಾ NRCಯ ಪೂರ್ವಭಾವಿ ತಯಾರಿಗಳನ್ನು ಪೂರೈಸಲಾಗುತ್ತಿದೆ.
4) ಆದರೆ ಎಸ್‌ಐಆರ್ ಕೇವಲ ಮತ ಪರಿಷ್ಕರಣೆಯಲ್ಲವೇ?
ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಆಯೋಗದ ವಕೀಲರು ಸಹ ಎಸ್‌ಐಆರ್ ಮಾಡುತ್ತಿರುವುದು ನಾಗರಿಕತ್ವದ ಪರಿಶೀಲನೆಗೆ ಹೊರತು ಕೇವಲ ಮತಪಟ್ಟಿ ಪರಿಷ್ಕರಣೆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
(‘‘ Revision of electoral rolls had been done earlier on the basis of self-declaration of citizenship. This [SIR 2025] we found was an opportune time to take note of this statutory amendment of 2003 and examine citizenship for the purpose of preparing the electoral roll’’)
5) ಹಾಗಾದರೆ ಕ್ರೋನಾಲಜಿ ಏನು?
ಮೊದಲು-ಎಸ್‌ಐಆರ್, ಆಮೇಲೆ- ಸೆನ್ಸಸ್, ಜೊತೆಜೊತೆಗೆ - NPR
ಅದಾದ ಕೂಡಲೇ- NRC
ಹೀಗಾಗಿ ಎಸ್‌ಐಆರ್ ಅನ್ನು ಅವಸರ ಅವಸರದಿಂದ ಮಾಡಿ ಮುಗಿಸುತ್ತಿರುವುದೇ 2027ರ ಸೆನ್ಸಸ್ ಜೊತೆಗೆ ನಡೆಯಲಿರುವ NPR ಮತ್ತು ಆ ನಂತರದ NRCಗೆ ಬೇಕಿರುವ ನಾಗರಿಕರ ಮತ್ತು ನಾಗರಿಕರಲ್ಲದವರ ಪಟ್ಟಿಯನ್ನು ತಯಾರಿಸಲು.
ಅದಕ್ಕಾಗಿಯೇ ಸದ್ಯಕ್ಕೆ ಚುನಾವಣೆ ನಡೆಯದ ಕರ್ನಾಟಕದಂತಹ ರಾಜ್ಯಗಳಲ್ಲೂ ಕೂಡ ಅವಸರವಸರವಾಗಿ ಮೂರು ತಿಂಗಳ ಅವಧಿಯೊಳಗೆ ಎಸ್‌ಐಆರ್ ಮಾಡಿ ಮುಗಿಸಲಾಗುತ್ತಿದೆ. ಏಕೆಂದರೆ 2027ರ ಸೆನ್ಸಸ್‌ಗೆ ಮುಂಚೆ ದೇಶಾದ್ಯಂತೆ ಎಸ್‌ಐಆರ್ ಮಾಡಿ ಮುಗಿಸಬೇಕಿದೆ.
ಆದ್ದರಿಂದಲೇ ಒಂದು ತಿಂಗಳೊಳಗೆ ಎಸ್‌ಐಆರ್ ಫಾರಂಗಳನ್ನು ವಾಪಸ್ ಪಡೆದುಕೊಂಡು ಡಿಜಿಟಲೈಸ್ ಮಾಡಿ ಮುಗಿಸಬೇಕೆಂದು ಮುಖ್ಯ ಚುನಾವಣಾಧಿಕಾರಿಗಳು ಬಿಎಲ್‌ಒಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಸರಿಯಾದ ಮತ್ತು ಸಮಗ್ರ ತರಬೇತಿ ಹಾಗೂ ಅಗತ್ಯವಿರುವ ಸಮಯಾವಕಾಶವನ್ನು ಕೊಡದೆ ಅವಧಿಯೊಳಗೆ ಟಾರ್ಗೆಟ್ ಮುಗಿಸಲಿಲ್ಲವೆಂದರೆ ಹಲವು ಶಿಕ್ಷಾ ಕ್ರಮಗಳ ಭೀತಿಯನ್ನು ಒಡ್ಡಲಾಗುತ್ತಿದೆ. ಆದ್ದರಿಂದಲೇ ಇತರ ರಾಜ್ಯಗಳಲ್ಲಿ ಆದಂತೆ ಈಗಾಗಲೇ ಕರ್ನಾಟಕದಲ್ಲಿ ಕೂಡ ಒತ್ತಡವನ್ನು ತಡೆದುಕೊಳ್ಳಲಾಗದೆ ಬಿಎಲ್‌ಒಗಳ ಸಾವಿನ ಸರಣಿ ಪ್ರಾರಂಭವಾಗಿದೆ.
ಇನ್ನು ಮತದಾರರ ಪರಿಸ್ಥಿತಿ:
Enumeration formನ ಪ್ರಶ್ನೆಗಳು ಮೇಲ್ನೋಟಕ್ಕೆ ಸರಳವಾಗಿ ಕಾಣುತ್ತದೆ.
ಆದರೆ ನಾಡಿನ ಸಾಮಾನ್ಯ ಜನರ ಬದುಕಿನ ಮತ್ತು ಅರಿವಿನ ಪರಿವೆಯೇ ಇಲ್ಲದ ಅಧಿಕಾರಿಗಳು ತಮ್ಮ ರಾಜಕೀಯ ಧಣಿಗಳ ಅಗತ್ಯಗಳಿಗಾಗಿ ತಯಾರಿಸಿರುವ ಪ್ರಶ್ನಾವಳಿ ಸರಳವಾಗಿ ಕಂಡರೂ ಸಾಕಷ್ಟು ಗೊಂದಲ ಉಂಟು ಮಾಡಿದೆ.
ಆಡಳಿತದ ಭಾಷೆಯ ಪರಿಚಯವಿಲ್ಲದ ಜನರು ತಮಗೆ ಅರ್ಥವಾಗುವ ರೀತಿಯಲ್ಲಿ ಫಾರಂ ಭರ್ತಿ ಮಾಡಿ ಕಷ್ಟಕ್ಕೆ ಸಿಕ್ಕಿಕೊಳ್ಳುತ್ತಿದ್ದಾರೆ.
ಇಲ್ಲಿಯೂ ಕೂಡ ಅದರ ಬಗ್ಗೆ ಅರಿವು ಮೂಡಿಸಿ ಸಾವಧಾನವಾಗಿ ಫಾರಂ ವಾಪಸ್ ಪಡೆದುಕೊಳ್ಳುವ ಕ್ರಮ ಅನುಸರಿಸುತ್ತಿಲ್ಲದಿರುವುದೇ ಜನರಲ್ಲಿ ಆತಂಕ ಹುಟ್ಟಲು ಕಾರಣವಾಗಿದೆ.
ಇದಾದ ನಂತರ ಆಗಸ್ಟ್ 5ರಂದು ಕರಡು ಪಟ್ಟಿ ಪ್ರಕಟವಾಗಲಿದೆ.
ಅದರಲ್ಲಿ ಹೆಸರಿಲ್ಲದವರಿಗೆ ಮತ್ತು ಕೊಟ್ಟ ಮಾಹಿತಿಗಳಲ್ಲಿ 12 ಬಗೆಯ ತಾರ್ಕಿಕ ಹೊಂದಾಣಿಕೆ ಇರದಿದ್ದರೆ ನೋಟಿಸ್ ನೀಡಲಾಗುವವರಿಗೂ ತಮ್ಮ ಹೆಸರನ್ನು ಮತ್ತೆ ಪಟ್ಟಿಯಲ್ಲಿ ಸೇರಿಸಿಕೊಳ್ಳಲು ಇರುವುದು ಒಂದೇ ತಿಂಗಳ ಅವಕಾಶ. ಒಂದು ತಿಂಗಳಲ್ಲಿ ಆಡಳಿತಕ್ಕೆ ಸಮಾಧಾನವಾಗುವ ರೀತಿಯ ದಾಖಲೆಗಳನ್ನು ಕೊಡದಿದ್ದರೆ ಪಟ್ಟಿಯಿಂದ ಹೊರಗುಳಿಯಲಿದ್ದಾರೆ.
ಇದು ಇನ್ನಷ್ಟು ಅರಾಜಕತೆ ಹಾಗೂ ಆತಂಕಗಳನ್ನು ಮತ್ತು ಮತದಾರರ ಮೇಲೆ ಮಾರಣಾಂತಿಕ ಪರಿಣಾಮಗಳನ್ನು ಉಂಟು ಮಾಡಲಿದೆ.
ಇದು ಕೂಡ ಸೆನ್ಸಸ್ ಶುರುವಾಗುವ ಒಳಗೆ ಎಸ್‌ಐಆರ್ ಮುಗಿಸಬೇಕೆಂಬ ಅವಸರದ ಕ್ರೌರ್ಯದ ಪರಿಣಾಮವಾಗಲಿದೆ.
ಇದು ಅಸಲಿ ಕಾರಣ.
ಬಿಜೆಪಿ ಸರಕಾರದ ರಾಜಕೀಯ ದುರುದ್ದೇಶ ಮತ್ತು ಹಿಂದುತ್ವದ ಅಜೆಂಡಾಗಳನ್ನು ಜಾರಿಗೆ ತರಲೆಂದೇ ಅಸಾಂವಿಧಾನಿಕ ಎಸ್‌ಐಆರ್ ನಡೆಸಲಾಗುತ್ತಿದೆ.
ಅದನ್ನು ಆಕ್ರಮಣಕಾರಿಯಾಗಿ ಜಾರಿ ಮಾಡಲೆಂದೇ ಬಿಜೆಪಿಯ ಕೈಗೊಂಬೆ ಚುನಾವಣಾ ಆಯೋಗ ಎಸ್‌ಐಆರ್‌ನ ಅವೈಜ್ಞಾನಿಕ ಮಾನದಂಡಗಳನ್ನು, ಅಸಾಧ್ಯವಾದ ಸಮಯ ಮಿತಿಯನ್ನು ಹಾಗೂ ಅಪ್ರಜಾತಾಂತ್ರಿಕ ಪ್ರಕ್ರಿಯೆ ಮತ್ತು ಜನವಿರೋಧಿ ಪ್ರಶ್ನಾವಳಿಗಳನ್ನು ರೂಪಿಸಿದೆ.
ಇದೇ ಬಿಎಲ್‌ಒಗಳ ಸಾವುಗಳಿಗೂ, ಮತದಾರರ ಆತಂಕ ಹಾಗೂ ಅರಾಜಕತೆಗಳಿಗೂ ಕಾರಣವಾಗಿದೆ.
6) ಮಾನ್ಯರೇ(?), ಅನುಮಾನಿತ ವಿದೇಶಿಯರ ಪಟ್ಟಿಯೆಲ್ಲಿ?
ಎಸ್‌ಐಆರ್ ಬಗ್ಗೆ ಸುಪ್ರೀಂ ಕೋರ್ಟು ಕೊಟ್ಟ ಆದೇಶದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರತೀಯ ನಾಗರಿಕರಲ್ಲ ಎಂಬ ಅನುಮಾನದ ಮೇಲೆ ಮತಪಟ್ಟಿಯಿಂದ ಹೊರಗಿಟ್ಟವರ ಪಟ್ಟಿಯನ್ನು ನಾಲ್ಕು ವಾರದ ಒಳಗೆ ಕೇಂದ್ರದ ಸಕ್ಷಮ ಪ್ರಾಧಿಕಾರಕ್ಕೆ ಕಳಿಸಿಕೊಡಬೇಕೆಂದು ನಿರ್ದೇಶನ ನೀಡಿತ್ತು.
(‘‘Regarding persons whose names have been deleted from the 2003 roll on account of the Commission being of the opinion that they are not citizens, the Commission shall refer such cases within 4 weeks to the Competent authority under the Citizenship Act, 1955, for adjudication of their citizenship’’-p.123 of judgement).
(https://api.sci.gov.in/supremecourt/ 2025/35785/35785_2025_1_1501_71617 Judgement_27-May-2026.pdf)
ಸುಪ್ರೀಂ ಕೋರ್ಟ್ ಆದೇಶ ಕೊಟ್ಟಿದ್ದು ಮೇ 27ಕ್ಕೆ.
ಅಂದರೆ ಐದುವಾರ ಕಳೆದಿದೆ.
-ಚುನಾವಣಾ ಆಯೋಗ ಅನುಮಾನಿತ ವಿದೇಶಿಯರ ಪಟ್ಟಿಯನ್ನು ತಯಾರಿಸಿದೆಯೇ?
-ಸಕ್ಷಮ ಪ್ರಾಧಿಕಾರಕ್ಕೆ ಕಳಿಸಿದೆಯೇ?
-ಕಳಿಸಿದ್ದಲ್ಲಿ ಏಕೆ ಬಹಿರಂಗ ಪಡಿಸಿಲ್ಲ?
-ಕಳಿಸದೆ ಇದ್ದಲ್ಲಿ ಅದು ದೇಶದ್ರೋಹಿ ಆಲಸ್ಯವಲ್ಲವೇ?
-ಅಥವಾ ಕಳಿಸದೆ ಇರುವುದಕ್ಕೆ ಬೇರೆ ಬಿಜೆಪಿ ಪಕ್ಷಪಾತಿ ಕಾರಣಗಳಿವೆಯೇ?
ಪ. ಬಂಗಾಳ ಬಿಟ್ಟರೆ ಎಸ್‌ಐಆರ್ ಮುಗಿದಿರುವ ರಾಜ್ಯಗಳಲ್ಲಿ ಗೈರು ಹಾಜರು (Absent), ಸ್ಥಳಾಂತರ (Shifted), ನಿಧನ (Dead) ಮತ್ತು ನಕಲು (Duplicate) ಎಂಬ ವರ್ಗೀಕರಣ ಬಿಟ್ಟರೆ ಅನುಮಾನಿತರು ಎಂಬ ವರ್ಗೀಕರಣವಿರಲಿಲ್ಲ. ಈಗ ಕರ್ನಾಟಕವನ್ನು ಒಳಗೊಂಡಂತೆ ಮೂರನೇ ಹಂತದ ಎಸ್‌ಐಆರ್ ನಡೆಯುತ್ತಿರುವ ರಾಜ್ಯಗಳಲ್ಲಿ ಮಾತ್ರASDD ಜೊತೆಗೆ O-Others ಎಂಬ ವರ್ಗೀಕರಣ ಸೇರಿಸಲಾಗಿದೆ.
-ಹಾಗಿರುವಾಗ ASDD ವರ್ಗೀಕರಣ ಮಾತ್ರವಿರುವ ರಾಜ್ಯಗಳಲ್ಲಿ Others- ಅನುಮಾನಿತರನ್ನು ಹೇಗೆ ಈಗ ಹೊಸದಾಗಿ ಪತ್ತೆ ಹಚ್ಚುವಿರಿ?
-ಅದಕ್ಕೆ ಅನುಸರಿಸುವ ಮಾನದಂಡಗಳೇನು? ಅದರ ಬಗ್ಗೆ ಮೌನವೇಕೆ?
-ಚುನಾವಣಾ ಆಯೋಗದ ಈ ಮೌನವನ್ನು ಪ್ರಶ್ನಿಸದ ಬಿಜೆಪಿ ಮತ್ತು ಮೋದಿ ಸರಕಾರವೂ ಈ ದೇಶದ್ರೋಹದಲ್ಲಿ ಶಾಮೀಲಲ್ಲವೇ?
7) ಇದಕ್ಕಿರುವುದು ಒಂದೇ ಪರಿಹಾರ
ದುರುದ್ದೇಶದ ಎಸ್‌ಐಆರ್ ರದ್ದಾಗಬೇಕು
ಜನಸ್ನೇಹಿ ಮತಪಟ್ಟಿ ಪರಿಷ್ಕರಣೆ ಸಾವಧಾನವಾಗಿ ನಡೆಯಬೇಕು
ಪ್ರಜಾತಂತ್ರ ಉಳಿಯಬೇಕು.
ಅದಕ್ಕಾಗಿ ಎಸ್‌ಐಆರ್ ರದ್ದುಗೊಳಿಸಲು ಬೀದಿಗಳಲ್ಲಿ ಬೃಹತ್ ಹೋರಾಟ ಕಟ್ಟಬೇಕು