ಪಡುಬಿದ್ರಿ: ಅದಮಾರು ಪಿಪಿಸಿ ಶಾಲಾ ಕಾವಲುಗಾರ ಆತ್ಮಹತ್ಯೆ
ಪಡುಬಿದ್ರಿ: ಅದಮಾರು ಪೂರ್ಣಪ್ರಜ್ಞ ಶಾಲೆಯ ಕಾವಲುಗಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಎರ್ಮಾಳು ನಿವಾಸಿ ನವೀನ್ ಬಂಗೇರಾ (57) ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗಿನ ಜಾವ, ಶಾಲೆಯಿಂದ ನೂರು ಮೀಟರ್ ದೂರದ ಯಶೋಧ ಎಂಬವರ ವಾಸದ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪಡುಬಿದ್ರಿ ಪೊಲೀಸರು ಹುಡುಕಾಡಿದಾಗ ನವೀನ್ ಮೃದೇಹ ಪತ್ತೆಯಾಯಿತು ಎಂದು ತಿಳಿದು ಬಂದಿದೆ.
ಮನೆಯವರು ಆರು ಮೂವತ್ತರ ಸುಮಾರಿಗೆ ಮನೆಯಿಂದ ಹೊರ ಬಂದಾಗ ಬಾವಿಕಟ್ಟೆಯಲ್ಲಿ ಪರ್ಸ್, ನೂರರ, ಐವತ್ತರ ಮತ್ತು 500ರ ನೋಟ್ ಗಳು ಚೆಲ್ಲಿತ್ತು. ಕೆಲವು ನೋಟ್ ಹರಿದು ಎಸೆಯಲಾಗಿತ್ತು ಎನ್ನಲಾಗಿದೆ.
ಅವಿವಾಹಿತರಾದ ನವೀನ್ ರವರು ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರು ಎಂದು ಕುಟುಂಬಸ್ಥರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ