ಭಾರತ ಹಿಂದೂರಾಷ್ಟ್ರ, ಈ ಸತ್ಯಕ್ಕೆ ಸಂವಿಧಾನಾತ್ಮಕ ಅನುಮೋದನೆ ಬೇಕಿಲ್ಲ : ಮೋಹನ್ ಭಾಗವತ್
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (Photo: PTI)
ಕೊಲ್ಕತ್ತಾ: ಭಾರತ ಹಿಂದೂರಾಷ್ಟ್ರ. ಈ ಸತ್ಯಕ್ಕೆ ಸಂವಿಧಾನಾತ್ಮಕ ಅನುಮೋದನೆಯ ಅಗತ್ಯವಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಆರೆಸ್ಸೆಸ್ ಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಈಗಲೂ ಹಿಂದೂರಾಷ್ಟ್ರ. ಭಾರತೀಯ ಸಂಸ್ಕೃತಿ ಇರುವವರೆಗೂ ಹಿಂದೂರಾಷ್ಟ್ರವಾಗಿಯೇ ಮುಂದುವರಿಯಲಿದೆ ಎಂದು ಹೇಳಿದರು.
"ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ. ಯಾವಾಗದಿಂದ ಇದು ಘಟಿಸುತ್ತಿದೆ ಎನ್ನುವುದು ನಮಗೆ ಗೊತ್ತಿಲ್ಲ. ಆದ್ದರಿಂದ ಇದಕ್ಕೂ ಸಂವಿಧಾನಾತ್ಮಕ ಅನುಮೋದನೆ ಬೇಕೇ? ಹಿಂದೂಸ್ತಾನ ಎನ್ನುವುದು ಹಿಂದೂ ದೇಶ. ಭಾರತ ನಮ್ಮ ಮಾತೃಭೂಮಿ ಎಂದು ಪರಿಗಣಿಸಿ ಭಾರತೀಯ ಸಂಸ್ಕೃತಿಯನ್ನು ಅನುಸರಿಸುವ ಜನ, ಹಿಂದೂಸ್ತಾನದಲ್ಲಿ ಎಂದಿನವರೆಗೆ ವಾಸವಿರುತ್ತಾರೆಯೋ, ಭಾರತದ ಪೂರ್ವಜರ ವೈಭವವನ್ನು ಬೆಳಸುವುದರಲ್ಲಿ ನಂಬಿಕೆ ಹೊಂದಿರುತಾರೆಯೂ ಅಲ್ಲಿಯವರೆಗೂ ಭಾರತ ಹಿಂದೂ ದೇಶ. ಇದು ಸಂಘದ ತತ್ವಸಿದ್ಧಾಂತ" ಎಂದು 100 ವ್ಯಾಖ್ಯಾನ ಮಾಲೆ ಕಾರ್ಯಕ್ರಮದಲ್ಲಿ ಸ್ಪಷ್ಟಪಡಿಸಿದರು.
"ಸಂಸತ್ತು ಸಂವಿಧಾನಕ್ಕೆ ತಿದ್ದುಪಡಿ ತಂದು ಈ ಶಬ್ದವನ್ನು ಸೇರಿಸಲು ನಿರ್ಧರಿಸಿದರೆ, ಒಳ್ಳೆಯದು. ಮಾಡದಿದ್ದರೂ ತೊಂದರೆಯೇನಿಲ್ಲ. ಏಕೆಂದರೆ ಆ ಶಬ್ದದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ನಾವು ಹಿಂದೂಗಳು. ನಮ್ಮ ದೇಶ ಹಿಂದೂರಾಷ್ಟ್ರ. ಇದು ಸತ್ಯ. ಜಾತಿಪದ್ಧತಿಯು ಜನ್ಮದ ಆಧಾರದ್ದೇ ವಿನಃ ಹಿಂದುತ್ವದ ಹಾಲ್‍ಮಾರ್ಕ್ ಅಲ್ಲ" ಎಂದು ವಿಶ್ಲೇಷಿಸಿದರು.