×
Ad

ಕರ್ನಾಟಕ ಒಲಿಂಪಿಕ್ಸ್ ಕ್ರೀಡಾಕೂಟ 2025-26 | ಅತ್ಲೆಟಿಕ್ಸ್‌ನಲ್ಲಿ 9 ಪದಕಗಳೊಂದಿಗೆ ಬೆಳಗಾವಿ ಶುಭಾರಂಭ

Update: 2026-01-21 00:20 IST

ತುಮಕೂರು : ಜಿಲ್ಲೆಯಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ 2025-26ರ ಅತ್ಲೆಟಿಕ್ಸ್‌ನಲ್ಲಿ ಮೊದಲ ದಿನವೇ ಬೆಳಗಾವಿ ಅತ್ಲೆಟ್‌ಗಳು 9 ಪದಕಗಳನ್ನು ಗೆದ್ದು ಮೇಲುಗೈ ಸಾಧಿಸಿದ್ದಾರೆ. ಏತನ್ಮಧ್ಯೆ, ಉಡುಪಿಯ ಮಾಧುರ್ಯ ಒಂದು ಚಿನ್ನ ಸೇರಿ ಎರಡು ಪದಕ ಗೆದ್ದು ಬೀಗಿದ್ದಾರೆ.

ಕೂಟದ ಐದನೇ ದಿನವಾದ ಮಂಗಳವಾರ ಅತ್ಲೆಟಿಕ್ಸ್, ವೇಟ್‌ಲಿಫ್ಟಿಂಗ್, ಟೇಬಲ್ ಟೆನಿಸ್, ಲಾನ್ ಟೆನಿಸ್ ಮತ್ತು ಈಜು ಸ್ಪರ್ಧೆಗಳಲ್ಲಿ ಪದಕ ಬೇಟೆ ನಡೆದವು. ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅತ್ಲೆಟಿಕ್ಸ್‌ನಲ್ಲಿ ಬೆಳಗಾವಿ ಜತೆ ಆತಿಥೇಯ ತುಮಕೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅತ್ಲೇಟ್‌ಗಳು ಒಂದೊಂದು ಸ್ಪರ್ಧೆಯಲ್ಲಿ ಎಲ್ಲಾ ಮೂರು ಪದಕ ಗೆದ್ದ ಸಾಧನೆಯನ್ನೂ ಮಾಡಿದ್ದಾರೆ. ಉಡುಪಿಯ ಮಾಧುರ್ಯ ಡಿಸ್ಕಸ್ ಥ್ರೋನಲ್ಲಿ ಸ್ವರ್ಣ ಮತ್ತು ಶಾಟ್‌ಪುಟ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಪುರುಷರ 400 ಮೀ. ಓಟದಲ್ಲಿ ಬೆಳಗಾವಿಯ ಓಂ ಸುನಿಲ್ ಚೌಹಾಣ್, ವೀರೇಶ್ ಬಿ. ಕಾಂಬ್ಳೆ ಮತ್ತು ಸ್ವಯಂ ದಿನೇಶ್ ಜುವೇಕರ್ ಸ್ವರ್ಣ, ಬೆಳ್ಳಿ, ಕಂಚಿನ ಪದಕ ಗೆದ್ದರು; ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಕನ್ನಡದ ಶ್ರಾವಣಿ ಭಾಟೆ, ರೇಖಾ ಬಸಪ್ಪ ಪಿರೊಜಿ ಮತ್ತು ಗೀತಾ ಬಿ. ಚೌಕಾಶಿ ಕ್ರಮವಾಗಿ ಮೊದಲ 3 ಸ್ಥಾನ ಗೆದ್ದರು. ಈ ಮಧ್ಯೆ, ಪುರುಷರ 10 ಸಾವಿರ ಮೀ.ನಲ್ಲಿ ತುಮಕೂರಿನ ಟಿ.ಸಿ. ಸಂದೀಪ್, ಎಲ್. ರಘುವೀರ್ ಮತ್ತು ಎಚ್.ಎ. ದರ್ಶನ್ ಅನುಕ್ರಮವಾಗಿ ಪೋಡಿಯಂ ಸ್ಥಾನ ಗಳಿಸಿ ಗಮನ ಸೆಳೆದರು.

ಟೇಬಲ್ ಟೆನಿಸ್ ಡಬಲ್ಸ್- ಬೆಂಗಳೂರು, ಮಂಗಳೂರಿಗೆ ಪ್ರಶಸ್ತಿ: ಮಹಾತ್ಮಾ ಗಾಂಧಿ ಒಳಾಂಗಣ ಕ್ರೀಡಾಂಗಣ ದಲ್ಲಿ ನಡೆದ ಪುರುಷರ ಟೇಬಲ್ ಟೆನಿಸ್ ಡಬಲ್ಸ್ ವಿಭಾಗದಲ್ಲಿ ಬೆಂಗಳೂರಿನ ರೋಹಿತ್ ಶಂಕರ್-ರಾಮ್ ಕುಮಾರ್ ಜೋಡಿ 3-0 ಸೆಟ್‌ಗಳಿಂದ ಮಂಗಳೂರಿನ ಸನ್ಮಾನ್-ವಿನಯ್ ಕುಮಾರ್ ಜೋಡಿಯನ್ನು ಸೋಲಿಸಿ ಬಂಗಾರದ ಪದಕಕ್ಕೆ ಕೊರಳೊಡ್ಡಿತು.

ಇದೇ ವೇಳೆ ಮಹಿಳೆಯರ ಡಬಲ್ಸ್‌ನಲ್ಲಿ ಮಂಗಳೂರಿನ ಪಿ.ಪ್ರೇಕ್ಷ -ನಹಲಾ ಜೋಡಿ 3-2 ಸೆಟ್‌ನಿಂದ ಬೆಂಗಳೂರು ನಗರದ ಸಹನಾ-ಕರ್ಣ ಜೋಡಿ ವಿರುದ್ಧ ಜಯಗಳಿಸಿ ಸ್ವರ್ಣ ಗೆದ್ದಿತು

ಟೆನಿಸ್‌ನಲ್ಲಿ ಜೇಸನ್ ಡೇವಿಡ್, ಹೃದಯೇಶಿಗೆ ಸ್ವರ್ಣ: ತುಮಕೂರು ಜಿಲ್ಲಾ ಲಾನ್ ಟೆನಿಸ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಜೇಸನ್ ಡೇವಿಡ್ 2-6, 6-2, 2-1 ಸೆಟ್‌ಗಳಿಂದ ನಿಶಿತ್ ನವೀನ್ ಅವರನ್ನು ಮಣಿಸಿ, ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಆದರೆ 3ನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ನಿಶಿತ್ ಗಾಯಗೊಂಡು ನಿವೃತ್ತಿಯಾದ ಹಿನ್ನೆಲೆಯಲ್ಲಿ ಜೇಸನ್ ಡೇವಿಡ್ ವಿಜಯಿ ಎಂದು ಘೋಷಿಸಲಾಯಿತು. ಬೆಂಗಳೂರು ಸಿದ್ದಾಂತ ಶಾಸ್ತ್ರಿ ಬಳ್ಳಾರಿಯ ಧನುಶ್ ಸೋಲಿಸಿ ಕಂಚು ಗೆದ್ದರು.

ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಹೃದಯೇಶಿ ಪೈ 4-6, 6-1, 6-4 ಸೆಟ್‌ಗಳಿಂದ ಭಾರತಿಯನ್ ಬಿ. ಪೈ ವಿರುದ್ಧ ಗೆದ್ದರೆ, ಬೆಂಗಳೂರಿನ ಸುರಭಿ ಶ್ರೀನಿವಾಸ್ 6-0, 6-0 ಸೆಟ್‌ಗಳಿಂದ ತುಮಕೂರು ಸ್ವಾತಿ ಕುಮಾರ್ ಮಣಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

ಪುರುಷರ ಡಬಲ್ಸ್‌ನಲ್ಲಿ ಬಳ್ಳಾರಿಯ ಅಭಿಷೇಕ್ ರೆಡ್ಡಿ-ಧನುಶ್ ಜೋಡಿಗೆ ಚಿನ್ನ. ತುಮಕೂರಿನ ಅಮೋಘ -ರಕ್ಷಿತ್ ಜೋಡಿಗೆ ಬೆಳ್ಳಿ. ಬೆಂಗಳೂರಿನ ನಿಶಿತ್ ನವೀನ್-ಸಿದ್ಧಾಂತ್ ಶಾಸ್ತ್ರಿ ಜೋಡಿಗೆ ಕಂಚಿನ ಪದಕ ಲಭಿಸಿತು. ಮಹಿಳಾ ಡಬಲ್ಸ್ ನಲ್ಲಿಬೆಂಗಳೂರಿನ ಭಾರತಿಯಾನ-ಹೃದೇಶಿ (ಸ್ವರ್ಣ), ತುಮಕೂರಿನ ಎಂ.ಎನ್.ರಂಜಿತಾ - ಸ್ವಾತಿ ಎಚ್. ಕುಮಾರ್ (ಬೆಳ್ಳಿ), ತುಮಕೂರಿನ ತಾನ್ಯಾ ಮೋರಸ್ - ಮೇಘನಾ ಸುರೇಶ್ (ಕಂಚು) ಅನುಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News