ಹಿರೇಬೆಣಕಲ್ ಶಿಲಾಗೋರಿಗಳ ತಾಣಕ್ಕೆ ಭೇಟಿ ನೀಡಿದ ತುಮಕೂರು ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿ
ಗಂಗಾವತಿ, ಡಿ.30: ಹಿರೇಬೆಣಕಲ್ ಬೆಟ್ಟದ ಮೂರು ಸಾವಿರ ವರ್ಷ ಹಳೆಯ ಶಿಲಾಘೋರಿಗಳ ತಾಣಕ್ಕೆ ಸೋಮವಾರ ತುಮಕೂರು ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿ ಶಿವಸಿದ್ದೇಶ್ವರ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ಸ್ವಾಮೀಜಿ ಗ್ರಾಮದಿಂದ ಸುಮಾರು ಎರಡು ಕಿಲೋಮೀಟರ್ ದೂರದ ದುರ್ಗಮ ಹಾದಿಯನ್ನು ಕಾಲ್ನಡಿಗೆಯ ಮೂಲಕ ದಾಟಿ, ಕಲ್ಲು-ಮುಳ್ಳುಗಳ ಸಂಧಿಯಿಂದ ಸಾಗುತ್ತ ಸ್ಥಳೀಯ ಯುವಕರೊಂದಿಗೆ ಶಿಲಾಘೋರಿಗಳ ವೀಕ್ಷಣೆ ನಡೆಸಿದರು.
“ಈ ತಾಣದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಮಾನವ ವಾಸಿಸುತ್ತಿದ್ದು, ಶಿಲಾಗೋರಿಗಳುಅದಕ್ಕೆ ಸಾಕ್ಷಿಯಾಗಿದೆ. ದುರಂತ ಮತ್ತು ನಾಶದಿಂದ ಬಹುತೇಕ ಶಿಲಾಗೋರಿಗಳು ಕೊಳೆದುಹೋಗಿವೆ. ಉಳಿದಿರುವವುಗಳ ಸಂರಕ್ಷಣೆ ನಮ್ಮ ಪ್ರಮುಖ ಜವಾಬ್ದಾರಿ,” ಎಂದು ಗ್ರಾಮಸ್ಥರಾದ ವೀರೇಶ್ ಅಂಗಡಿ, ಬಸನಗೌಡ, ಮಂಜುನಾಥ್ ದೊಡ್ಡನಿ, ಶಂಕರ್ ಬೂದಗುಂಪಿ, ಪಂಪಣ್ಣ, ವೀರಭದ್ರಪ್ಪ ಅಂಗಡಿ, ನಾಗರಾಜ್ ಡಾಣಾಪುರ್ ಮತ್ತು ಹರನಾಯಕ ಹೇಳಿದರು.
ಶಿಲಾಗೋರಿಗಳ ವೀಕ್ಷಣೆ ಬಳಿಕ ಸ್ವಾಮೀಜಿ ಶಿವಸಿದ್ದೇಶ್ವರ ಅಭಿಪ್ರಾಯ ವ್ಯಕ್ತಪಡಿಸಿ , “ಇಂತಹ ಆದ್ಭುತ ಐತಿಹಾಸಿಕ ತಾಣಗಳು ರಾಜ್ಯದ ಅಮೂಲ್ಯ ಸಂಪತ್ತು. ಅವುಗಳ ಸಂರಕ್ಷಣೆಗೆ ಸರ್ಕಾರ ಹೆಚ್ಚು ಆದ್ಯತೆ ನೀಡಬೇಕು. ಸ್ಥಳೀಯರ ಸಹಕಾರವು ಅತ್ಯಂತ ಮುಖ್ಯ. ಈ ತಾಣಗಳನ್ನು ಮುಂದಿನ ಪೀಳಿಗೆಗಳಿಗೆ ಉಳಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು
ಗ್ರಾಮದಲ್ಲಿ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇಂದಿರಾ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.