×
Ad

2013ರಲ್ಲಿ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ: ಡಾ.ಜಿ.ಪರಮೇಶ್ವರ್

ಮೂರು ಬಾರಿ ಸಿಎಂ ಸ್ಥಾನ ಕೈತಪ್ಪಿತು

Update: 2026-06-08 15:27 IST

ತುಮಕೂರು, ಜೂ.8: 2013ರ ವಿಧಾನಸಭೆ ಚುನಾವಣೆಯಲ್ಲಿ ನಾನು ಸೋತೆ. ಬಹುಶಃ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನನ್ನ ಹಣೆಬರಹವೋ ಏನೋ ಗೊತ್ತಿಲ್ಲ. ಆಗ ನಾನು ಸೋತ ಕಾರಣಕ್ಕೆ ಅವರು ಮುಖ್ಯಮಂತ್ರಿಯಾದ್ರು’ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

ಉಪ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ತಮ್ಮ ಒಡೆತನದ ಸಿದ್ಧಾರ್ಥ ಕಾಲೇಜಿಗೆ ಸೋಮವಾರ ಆಗಮಿಸಿದ ಅವರು ಮಾತನಾಡುತ್ತಾ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

ತಮ್ಮ ರಾಜಕೀಯ ಜೀವನ ನಡೆದು ಬಂದ ಹಾದಿ ನೆನೆದು ಇಲ್ಲಿ ಭಾವುಕರಾದ ಪರಮೇಶ್ವರ್, ‘2018ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 80 ಸ್ಥಾನ ಜಯಿಸಿತ್ತು. 30 ಸ್ಥಾನಗಳನ್ನು ಜಯಿಸಿದ್ದ ಜೆಡಿಎಸ್ ಪಕ್ಷದ ಜೊತೆಗೆ ಪಕ್ಷ ಮೈತ್ರಿ ಮಾಡಿಕೊಂಡಾಗ ಕಾರಣಾಂತರದಿಂದ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಅವತ್ತು ನನ್ನನ್ನು ಮುಖ್ಯಮಂತ್ರಿ ಮಾಡಬಹುದಿತ್ತು. ಆದರೆ ಯಾವುದೋ ಕಾರಣಕ್ಕೆ ಮಾಡಲಿಲ್ಲ. ಎರಡನೇ ಭಾರಿಗೂ ಸಿಎಂ ಸ್ಥಾನ ಕೈತಪ್ಪಿತು’ ಎಂದು ಹೇಳಿದರು.

‘2023ರ ವಿಧಾನಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. 2026ರಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಯತ್ನಿಸಿದೆ. ಈ ಭಾರಿ ಸಿಎಂ ಆಗುವ ವಿಶ್ವಾಸ ಇತ್ತು. ಒಂದು ಹಂತದಲ್ಲಿ ನನಗೆ ಮುಖ್ಯಮಂತ್ರಿ ಸ್ಥಾನ ಕೊಡಲು ಸಾಧ್ಯವಿಲ್ಲ ಅನ್ನುವುದಾದರೆ ಹೇಳಿ, ಮಾಡಲು ಬಹಳಷ್ಟು ಕೆಲಸಗಳಿವೆ. ನಾನು ವಾಪಸ್ ಹೋಗುತ್ತೇನೆ ಎಂದು ಹೈಕಮಾಂಡ್ ಗೆ ಹೇಳಿದ್ದೆ. ಆದರೆ ರಾಜಕೀಯ ಬದಲಾಗುತ್ತಲೇ, ತೀರ್ಮಾನಗಳು ಕೂಡ ಬದಲಾಗುತ್ತವೆ. ಹಾಗಾಗಿ, ಈಗ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಜವಾಬ್ದಾರಿಯುತ ಸ್ಥಾನ. ಆಸ್ಥಾನಕ್ಕೆ ಕುಂದುಂಟಾಗದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ’ ಎಂದು ಪರಮೇಶ್ವರ ಹೇಳಿದರು.

 ‘ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದೆ. ಈಗ 40 ವರ್ಷಗಳ ಅನುಭವ ಬೆನ್ನಿಗಿದೆ. ಜನಪರ ಕೆಲಸ ಮಾಡಿದ್ದರಿಂದ ಜನರ ಪ್ರೀತಿ ಸಿಕ್ಕಿದೆ. ಇಲ್ಲವಾಗಿದ್ದರೆ ಜನರಾಗಲೀ; ಪಕ್ಷವಾಗಲೀ ನನ್ನನ್ನು ಗುರುತಿಸುತ್ತಿರಲಿಲ್ಲ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News