×
Ad

ನಾಡ: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

Update: 2026-05-14 19:00 IST

ಕುಂದಾಪುರ, ಮೇ 14: ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉಪ್ಪು ಮಿಶ್ರಿತ ಕಲುಷಿತ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಹಾಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವಂತೆ ಆಗ್ರಹಿಸಿ ಭಾರತ ಪ್ರಜಾ ಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಪಡುಕೋಣೆ ಘಟಕ ಮತ್ತು ಜನವಾದಿ ಮಹಿಳಾ ಸಂಘಟನೆ ನಾಡ ವಲಯ ಇವರ ನೇತೃತ್ವದಲ್ಲಿ ಗ್ರಾಮಸ್ಥರು ನಾಡ ಗ್ರಾಮ ಪಂಚಾಯತ್ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಡ, ಹಡವು, ಪಡುಕೋಣೆ, ಬಡಾಕೆರೆ ಮತ್ತು ಹೊಸಾಡು ಗ್ರಾಮ ಪಂಚಾ ಯತ್ ವ್ಯಾಪ್ತಿಯ ಸೇನಾಪುರ ಗ್ರಾಮಗಳಲ್ಲಿ ಉಪ್ಪು ಮಿಶ್ರಿತ ಹಾಗೂ ಕಲುಷಿತ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಬೇಸಿಗೆಯಲ್ಲಿ ಸೌಪರ್ಣಿಕಾ ನದಿಯಲ್ಲಿ ಉಪ್ಪು ನೀರು ಸೇರುವ ಪರಿಣಾಮ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಅವರು ದೂರಿದರು.

ಕಳೆದ ವರ್ಷ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ತಾಂತ್ರಿಕ ವರದಿ ಸಿದ್ಧಪಡಿಸಲು ಸೂಚಿಸಲಾ ಗಿತ್ತಾದರೂ ವರದಿ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಜನರು ಉಪ್ಪು ನೀರು ಕುಡಿಯುವ ಪರಿಸ್ಥಿತಿ ಬಂದೊದಗಿದ್ದು, ಈ ಬಗ್ಗೆ ಗ್ರಾಮಸಭೆಗಳಲ್ಲಿ ಅಹವಾಲು ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗಿತ್ತು. ಆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯ ನಿರ್ಣಯಗಳನ್ನು ತಕ್ಷಣ ಜಾರಿ ಮಾಡಬೇಕು. ಸೌಪರ್ಣಿಕ ನದಿಯ ಹೇರೂರು-ಕೋಣ್ಕಿ ಭಾಗದಲ್ಲಿ ವೆಂಟೆಡ್ ಡ್ಯಾಮ್ ನಿರ್ಮಿಸಬೇಕು. ನಾಡ, ಹಡವು, ಬಡಾಕೆರೆ ಹಾಗೂ ಸೇನಾಪುರ ಗ್ರಾಮಗಳಿಗೆ ಶುದ್ಧ ಕುಡಿಯುನ ನೀರಿನ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು. ಬೇಸಿಗೆಯಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ತನಿಖೆ ನಡೆಸಬೇಕು ಎಂಬಿತ್ಯಾದಿ ಆಗ್ರಹಗಳ ಮನವಿಯನ್ನು ನಾಡ ಗ್ರಾಪಂ ಪಿಡಿಒ ಅವರಿಗೆ ಸಲ್ಲಿಸಲಾಯಿತು.

ಡಿವೈಎಫ್‌ಐ ಮುಖಂಡ ರಾಜೀವ ಪಡುಕೋಣೆ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಎಚ್.ನರಸಿಂಹ, ಯುವಸಂಘಟನೆ ಕಾರ್ಯದರ್ಶಿ ರಾಜೇಶ ಬಗ್ವಾಡಿ, ಜನವಾದಿ ಮಹಿಳಾ ಸಂಘಟನೆ ತಾಲೂಕು ಅಧ್ಯಕ್ಷೆ ನಾಗರತ್ನ ನಾಡ, ವಲಯ ಅಧ್ಯಕ್ಷೆ ಮನೋರಮಾ ಭಂಡಾರಿ, ಕಾರ್ಯದರ್ಶಿ ಶೋಭಾ, ಆದಿವಾಸಿ ಹಕ್ಕುಗಳ ಸಮಿತಿ ಮುಖಂಡ ಶ್ರೀಧರ ನಾಡ, ರೈತ ಸಂಘದ ಮುಖಂಡ ಲಯನ್ಸ್ ರೆಬೆಲ್ಲೊ, ನಿಸರ್ಗ ಪಡುಕೋಣೆ, ಶೀಲಾವತಿ, ಜನಾರ್ದನ ಹೆಬ್ಬಾರ್ ಮೊದಲಾದವರು ಪ್ರತಿಭಟನೆ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News