ಅಪಘಾತ ಪ್ರಮಾಣ ಕಡಿಮೆ ಪ್ರಯತ್ನ: ಸಚಿವ ರಾಮಲಿಂಗ ರೆಡ್ಡಿ
ಮಹಾ ರುದ್ರಯಾಗದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ
ಉಡುಪಿ, ಮೇ 15: ನಮ್ಮ ದೇಶದಲ್ಲಿ ಪ್ರತಿವರ್ಷ 4ಲಕ್ಷ ಮಂದಿ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಅದಕ್ಕಿಂತ ಎರಡು ಪಟ್ಟು ಮಂದಿ ಅಂಗವಿಕಲರಾಗುತ್ತಿದ್ದಾರೆ. ಇದರಿಂದ ಕುಟುಂಬದ ಆಧಾರ ಸ್ತಂಭವೇ ನಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಜಗತ್ತಿನಲ್ಲಿ ಅಪಘಾತ ಪ್ರಮಾಣ ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೂ ಸಾಧ್ಯವಾಗುತ್ತಿಲ್ಲ. ಶೇ.70ರಷ್ಟು ದ್ವಿಚಕ್ರ ವಾಹನಗಳೇ ಅಪಘಾತಕ್ಕೀಡಾಗುತ್ತಿರುತ್ತದೆ ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್‌ರಾಜ್ ಕಾಂಚನ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾಗಿರುವ ಮಹಾ ರುದ್ರಯಾಗದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಭಾ ಕಾರ್ಯಕ್ರಮ ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಈ ಯಾಗದಿಂದ ದೇಶ, ರಾಜ್ಯಕ್ಕೆ ಬಂದ ಯಾವುದೇ ಸಂಕಷ್ಟಗಳು ದೂರವಾಗಿ, ಈ ನಾಡು ಸುಭೀಕ್ಷೆ ಹೊಂದಲಿ ಎಂದು ಅವರು ಹಾರೈಸಿದರು.
ಮಹಾರುದ್ರಯಾಗದ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಉಡುಪಿ ಜಿಲ್ಲೆ ಶಿಕ್ಷಣದಲ್ಲಿ ಇಡೀ ದೇಶದಲ್ಲಿಯೇ ಮುಂಚೂಣಿ ಇದೆ. ಇಲ್ಲಿನ ಬಹುತೇಕ ಮಂದಿ ಉನ್ನತ ಸ್ಥಾನಗಳಲ್ಲಿ ಇದ್ದಾರೆ. ಅದೇ ರೀತಿ ನಮ್ಮ ಮಕ್ಕಳಲ್ಲಿ ಧಾರ್ಮಿಕ ಭಾವನೆ ಬೆಳೆಸಿ ಅವರ ಜೀವನದಲ್ಲಿ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ಈ ಮಹಾರುದ್ರಯಾ ಗದ ಮೂಲಕ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.
ಬ್ರಹ್ಮರ್ಷಿ ಆನಂದ ಸಿದ್ಧಿ ಪೀಠಂನ ಸಂಸ್ಥಾಪಕ ಶ್ರೀಮಹರ್ಷಿ ಆನಂದ ಗುರೂಜಿ ಆಶೀವರ್ಚನ ನೀಡಿದರು. ಅಧ್ಯಕ್ಷತೆಯನ್ನು ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ವಹಿಸಿದ್ದರು. ಕೇಂದ್ರ ಸರಕಾರ ಆದೇಶದಂತೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಮಕ್ಕಳ ಸುರತ್ಷತೆಗಾಗಿ ಮಕ್ಕಳಿಗೆ ಉಚಿತ ಹೆಲ್ಮೆಟ್‌ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯಚಂದ್ರ ಜೈನ್, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ನಗರಸಭೆ ಮಾಜಿ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮಾತನಾಡಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ, ಪಟ್ಲ ಸತೀಶ್ ಶೆಟ್ಟಿ, ಕೊಲ್ಲೂರು ದೇವಳದ ಟ್ರಸ್ಟಿ ಸುರೇಂದ್ರ ಶೆಟ್ಟಿ, ಬೆಂಗಳೂರಿನ ಶಂಕರ್ ಶೆಟ್ಟಿ, ಕೆ.ನಾರಾಯಣ ಬಲ್ಲಾಳ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೆರೂರು, ಯಾದವ್ ಅಮೀನ್, ಪಧ್ಮನಾಭ ಬಂಗೇರ, ತಾರನಾಥ್ ಗುರುರಾಜ್ ರಾವ್, ರಮೇಶ್ ಮಾಸ್ಟರ್ ಕಲ್ಮಾಡಿ, ಚಂದ್ರಶೇಖರ್, ನರೇಂದ್ರ ಎಂ., ಸತೀಶ್ ಬಂಗೇರ, ದಾಮೋದರ ಬಂಗೇರ, ನವೀನ್ ಕುಂದರ್, ಭುವನ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಸಂಚಾಲಕ ಕೃಷ್ಣಮೂರ್ತಿ ಆಚಾರ್ಯ ಸ್ವಾಗತಿಸಿದರು. ರಮೇಶ್ ತಿಂಗಳಾಯ ವಂದಿಸಿದರು. ದಯಾನಂದ ಮತ್ತು ವಿಜಯೇಂದ್ರ ವಸಂತ್ ಕಾರ್ಯಕ್ರಮ ನಿರೂಪಿಸಿದರು.