ಮೇ 17: ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತ್ಯೋತ್ಸವ
ಉಡುಪಿ, ಮೇ 15: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಉಡುಪಿ ಜಿಲ್ಲಾ ಶಾಖೆಯ ವತಿಯಿಂದ ಮೇ 17ನೇ ರವಿವಾರ ಬ್ರಹ್ಮಾವರ ಸಮೀಪದ ಮಂದಾರ್ತಿ ಗ್ರಾವಿಟಿ ಶಾಲೆಯ ಬಳಿ ಇರುವ ಕರ್ನಾಟಕ ಮರಾಠ ಪರಿಷತ್ ನಿವೇಶನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತ್ಯೋತ್ಸವ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ವಿದ್ಯಾರ್ಥಿವೇತನ ಮತ್ತು ಸಹಾಯಧನ ವಿತರಣಾ ಸಮಾರಂಭ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ಕವಡೆ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಗೆ ಸೇರಿದ ಸಮಾಜದ ಸುಮಾರು 175 ಮಂದಿ 5ನೇ ತರಗತಿಯಿಂದ ಪಿಯುಸಿವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸುಮಾರು ಎರಡು ಲಕ್ಷ ರೂ.ಮೌಲ್ಯದ ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ವಿತರಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಮರಾಠ ಸಮುದಾಯದ 300 ಮನೆಗಳಿಗೆ ಸುಮಾರು 1500 ಮಂದಿ ಇದ್ದೇವೆ. ಸಂಖ್ಯೆಯ ಕಾರಣ ದಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ನಾವು ಹಿಂದುಳಿದಿದ್ದೇವೆ. ಹೀಗಾಗಿ ಪರಿಷತ್‌ನ ನಿವೇಶನ ದಲ್ಲಿ ಸಮುದಾಯ ಭವನವೊಂದನ್ನು ನಿರ್ಮಿಸುವ ಪ್ರಯತ್ನ ಇನ್ನೂ ಸಫಲವಾಗಿಲ್ಲ. ಇದಕ್ಕಾಗಿ ಪ್ರಯತ್ನ ನಡೆಯುತ್ತಿದೆ ಎಂದರು.
ಮೇ 17ರಂದು ನಡೆಯುವ ಶಿವಾಜಿ ಜಯಂತಿಯನ್ನು ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ಉದ್ಘಾಟಿಸಲಿದ್ದು, ಸಂಘದ ರಾಜ್ಯಾಧ್ಯಕ್ಷ ಎಸ್.ಸುರೇಶ್ ರಾವ್ ಸಾಠೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಕಿರಣ್‌ಕೊಡ್ಗಿ ಹಾಗೂ ಸಮಾಜದ ಗಣ್ಯರು ಮುಖ್ಯ ಅತಿಥಿಗಳಾಗಿ ಬಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಲಹೆಗಾರರಾದ ಬಿ.ಕೇಶವ ರಾವ್ ಮಾನೆ, ಸತೀಶ್ ರಾವ್ ಪವಾರ್ ಹಾಗೂ ಇತರರು ಉಪಸ್ಥಿತರಿದ್ದರು.