ಮರವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಿಯಂತ್ರಣ, ಸವಾರರ ಸುರಕ್ಷತೆಗೆ ಕ್ರಮ
ಕುಂದಾಪುರ, ಮೇ 15: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ಬೀಚ್ ರಾಷ್ಟ್ರೀಯ ಹೆದ್ದಾರಿ ಬದಿ ಅಪಘಾತ ಸಂಭವಿಸದಂತೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಎ.29ರಂದು ಮರವಂತೆ ಬೀಚ್‌ಬಳಿ ಪ್ರವಾಸಿ ಬಸ್, ರಸ್ತೆ ಬದಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಟಿಓ ಅಧಿಕಾರಿ ಮಾರುತಿ ನಾಯ್ಕ್, ಎನ್‌ಎಚ್‌ಎಐ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ಹಾಗೂ ಸಿಬ್ಬಂದಿ, ಐಆರ್‌ಬಿ ಸಂಸ್ಥೆಯ ಮನೋಜ್ ಮೊದಲಾ ದವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದ್ದರು.
ಈ ಪ್ರದೇಶದಲ್ಲಿ ಅಪಘಾತ ತಡೆಗಟ್ಟುವ ಉದ್ದೇಶದಿಂದ ರಸ್ತೆ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಅವಲೋಕಿಸಿ ಸಂಬಂಧಿತ ರಾ.ಹೆದ್ದಾರಿ ಗುತ್ತಿಗೆ ವಹಿಸಿರುವ ಐಆರ್‌ಬಿಗೆ ನಿರ್ದೇಶನ ನೀಡಲಾಗಿತ್ತು. ಅದರಂತೆ ಸ್ಥಳದಲ್ಲಿ ನೋ ಪಾರ್ಕಿಂಗ್, ವಾಹನಗಳ ವೇಗ ಮಿತಿ ಸಂಬಂಧಿತ ಸೂಚನೆಗಳು, ಪ್ರತಿಫಲಕಗಳು(ರಿಫ್ಲೆಕ್ಟರ್), ಅಪಘಾತ ವಲಯ ಸೂಚಕ ನಾಮಫಲಕಗಳು ಸಹಿತ ವಾಹನ ಸವಾರರ ಸುರಕ್ಷತೆ ಹಾಗೂ ಅಪಘಾತ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗುತ್ತಿಗೆ ಸಂಸ್ಥೆ ಕ್ರಮವಹಿಸಿದೆ.