×
Ad

ಮುಂಗಾರು ಋತುವಿನಲ್ಲಿ ಕೊಂಕಣ ರೈಲ್ವೆ: ಪ್ರಯಾಣಿಕರ ಸುರಕ್ಷತೆಯೊಂದಿಗೆ ಸಮಯ ಪಾಲನೆಗೆ ಆದ್ಯತೆ

Update: 2026-05-20 20:27 IST

ಉಡುಪಿ, ಮೇ 20: ಪಶ್ಚಿಮ ಘಟ್ಟದ ದುರ್ಗಮ ಹಾದಿಯಲ್ಲಿ ಸಾಗುವ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಾಗುವ ರೈಲುಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡುವ ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿ. (ಕೆಆರ್‌ಸಿಎಲ್) ಈ ಬಾರಿಯ ಮಳೆಗಾಲದಲ್ಲಿ ಸಮಯದ ಪರಿಪಾಲನೆಗೂ ಹೆಚ್ಚಿನ ಆದ್ಯತೆಯನ್ನು ನೀಡಲಿದೆ. ಇದಕ್ಕಾಗಿ ಮುಂಗಾರು ಪೂರ್ವ ರೈಲ್ವೆ ಹಳಿಗಳ ತೀವ್ರ ಪರಿಶೀಲನೆ ನಡೆಯುತ್ತಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಪಶ್ಚಿಮ ಕರಾವಳಿಯ ಪ್ರಾಕೃತಿಕ ಸೌಂದರ್ಯದ ಆದರೆ ಸವಾಲಿನ ಪರಿಸರದಲ್ಲಿ ಒಂದೇ ಹಳಿ ವ್ಯವಸ್ಥೆಯನ್ನು ಹೊಂದಿರುವ ಈ ಮಾರ್ಗದಲ್ಲಿ ಸಂಚರಿಸುವ ರೈಲಿನ ಸಾಮರ್ಥ್ಯವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಾ ಗುತ್ತಿದೆ. ಬೆಟ್ಟ-ಗುಡ್ಡ, ಏರು ತಗ್ಗುಗಳಿರುವ ಗರಿಷ್ಠ ಪ್ರಮಾಣದಲ್ಲಿ ಮಳೆ ಬೀಳುವ ಈ ಮಾರ್ಗದಲ್ಲಿ ರೈಲು ಹಾದು ಹೋಗುವು ದರಿಂದ ಮುಂಬರುವ ಮುಂಗಾರು ಋತುವಿನ ಹಿನ್ನೆಲೆಯಲ್ಲಿ ವಿಶೇಷ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮೂಲಭೂತ ಸೌಕರ್ಯಗಳ ಉನ್ನತೀಕರಣ ಕಾರ್ಯದ ಭಾಗವಾಗಿ ರೈಲು ಹಳಿಗಳ ಸುರಕ್ಷತೆ ಮತ್ತು ವಿಶ್ವಾಸಾರ್ಹ ತೆಯನ್ನು ಖಚಿತಪಡಿಸಿಕೊಳ್ಳಲು ಪೂರ್ವ ಮುಂಗಾರು ತಪಾಸಣೆ ಹಾಗೂ ಇಂಜಿನಿಯರಿಂಗ್ ನಿರ್ವಹಣಾ ಕಾರ್ಯ ಗಳು ಈಗ ಭರದಿಂದ ಸಾಗುತ್ತಿವೆ. ಇವುಗಳಲ್ಲಿ ಹಳಿಗಳ ಸಮೀಪದ ಮರದ ಗೆಲ್ಲುಗಳ ಕಡಿಯುವಿಕೆ, ಬಿಎಲ್ಟಿ ದುರಸ್ತಿ, ಹಳಿಗಳ ಎತ್ತರ ಏರಿಸುವಿಕೆ, ರೈಲ್ವೆ ಹಳಿಗಳ ತೀವ್ರ ಪರಿಶೀಲನೆ, ಬದಲಿ ಹಳಿಗಳ ಅಳವಡಿಕೆ ಹಾಗೂ ಅವುಗಳ ನಿರ್ವಹಣೆ ಸೇರಿದಂತೆ ವಿವಿಧ ಕಾಮಗಾರಿಗಳು ಸೇರಿವೆ. ಈ ಕಾರ್ಯಗಳು ರೈಲು ಹಳಿಗಳ ಬಲಿಷ್ಠತೆಯನ್ನು ಕಾಪಾಡುವುದರ ಜೊತೆಗೆ ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗಲಿವೆ.

ಈ ಎಲ್ಲಾ ಕಾಮಗಾರಿಗಳನ್ನು ಸುರಕ್ಷಿತವಾಗಿ ನಡೆಸುವ ದೃಷ್ಟಿಯಿಂದ ಕೆಲವು ಪ್ರದೇಶಗಳಲ್ಲಿ ರೈಲುಗಳ ವೇಗವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿದೆ. ಇದರಿಂದಾಗಿ ಕೆಲವೊಂದು ತಡೆಗಳ ಕಾರಣದಿಂದ ರೈಲುಗಳ ವೇಳಾ ಪಟ್ಟಿಯಲ್ಲಿ ಸಣ್ಣ ಪ್ರಮಾಣದ ವಿಳಂಬ, ಕೆಲವು ಗಂಟೆ ರೈಲುಗಳ ತಡೆಯೂ ಇರುವ ಸಾಧ್ಯತೆಯಿದೆ. ಆದರೆ ಈ ಕ್ರಮಗಳು ದೀರ್ಘಕಾಲೀನ ಸುರಕ್ಷತೆ ಮತ್ತು ಕಾರ್ಯಾಚರಣಾ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿದೆ ಎಂದು ಕೆಆರ್‌ಸಿಎಲ್ ಸ್ಪಷ್ಟಪಡಿಸಿದೆ.

ಮುಂಗಾರು ಪೂರ್ವ ನಿರ್ವಹಣಾ ಚಟುವಟಿಕೆಗಳು ಮೇ ತಿಂಗಳ ಕೊನೆಯ ಒಳಗೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದ್ದು, ಇದರ ಬಳಿಕ ರೈಲುಗಳ ಸಂಚಾರದ ವೇಳಾಪಟ್ಟಿಯಲ್ಲಿ ಹಾಗೂ ಸಮಯಪಾಲನೆಯಲ್ಲಿ ಗಮನಾರ್ಹ ಪ್ರಮಾಣದ ಸುಧಾರಣೆ ಕಂಡುಬರುವ ನಿರೀಕ್ಷೆ ಇದೆ.

ರೈಲುಗಳ ಸಂಚಾರವನ್ನು ಸಮರ್ಥವಾಗಿ ನಿರ್ವಹಿಸಲು ಕೆಆರ್‌ಸಿಎಲ್ ಬಲಿಷ್ಠ ಮೇಲ್ವಿಚಾರಣಾ ವ್ಯವಸ್ಥೆ ಮತ್ತು ಸಮನ್ವಯದ ಕ್ರಮಗಳನ್ನು ಕೊಂಕಣ ರೈಲ್ವೆ ಅನುಸರಿಸುತ್ತಿದೆ. ಪಾರದರ್ಶಕವಾದ ವೇಳಾಪಟ್ಟಿ ಹಾಗೂ ನಿರಂತರ ಎಚ್ಚರಿಕೆ ಮೂಲಕ ಏಕ ಹಳಿ ಮಾರ್ಗದ ವ್ಯವಸ್ಥೆಯಲ್ಲಿಯೂ ಕನಿಷ್ಠ ವಿಳಂಬವನ್ನು ಖಚಿತ ಪಡಿಸಲಾಗುತ್ತಿದೆ.

ಪ್ರಯಾಣದ ವೇಳೆ ಕೊಂಕಣ ರೈಲ್ವೆ ಪ್ರಯಾಣಿಕರಿಗೆ ನಿರಂತರವಾಗಿ ಅಪ್‌ಡೇಟ್‌ಗಳನ್ನು ನೀಡಲಾಗುತ್ತದೆ. ರೈಲು ಗಳ ವೇಳಾಪಟ್ಟಿ, ನಿಲ್ದಾಣದ ವಿವಿಧ ಪ್ರಕಟಣೆಗಳು, ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ಡಿಸ್ಪ್ಲೇಗಳು, ಅಧಿಕೃತ ರೈಲ್ವೆ ವೆಬ್‌ಸೈಟ್‌ಗಳು ಹಾಗೂ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಪ್ರಯಾಣಿಕರಿಗೆ ನಿಯಮಿತ ಮಾಹಿತಿ ನೀಡಲಾಗು ತ್ತಿದೆ. ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಹಾಗೂ ವಿಶ್ವಾಸಾರ್ಹ ಸೇವೆ ನೀಡುವ ಬದ್ಧತೆಯನ್ನು ಕೊಂಕಣ ರೈಲ್ವೆ ಮತ್ತೊಮ್ಮೆ ಪುನರುಚ್ಚರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News