×
Ad

ಕೈಗಾರಿಕೆಗಳ ವಿದ್ಯುತ್ ಹಿಂಬಾಕಿ ಆದೇಶ ವಾಪಾಸ್ಸಾತಿಗೆ ಮನವಿ

Update: 2026-05-27 20:12 IST

ಉಡುಪಿ, ಮೇ 27: ಕೈಗಾರಿಕೆಗಳ ವಿದ್ಯುತ್ ಹಿಂಬಾಕಿ ಆದೇಶವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಮತ್ತು ಕನಿಷ್ಠ ವೇತನ ಹೆಚ್ಚಳವನ್ನು ಕೈಬಿಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘವು ಬುಧವಾರ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದೆ.

2025-26ನೇ ಸಾಲಿನ ಕೈಗಾರಿಕೆಗಳ ವಿದ್ಯುತ್ ಬಿಲ್ ಬಾಕಿ ಇದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನೀಡಿದೆ. ಇದನ್ನು ಪರಿಶೀಲಿಸಿ ದಾಗ ಕೃಷಿಪಂಪ್ ಸೆಟ್‌ಗಳಿಗೆ ನೀಡಬೇಕಾದ ಸಹಾಯಧನವನ್ನು ಕರ್ನಾಟಕ ಸರಕಾರ ಬಿಡುಗಡೆ ಮಾಡದೇ ಇರುವುದರಿಂದ ಆ ಐವೇಜನ್ನು ಕೈಗಾರಿಕೆ ಮತ್ತು ವಾಣಿಜ್ಯ ಮಳಿಗೆಗಳ ಮೇಲೆ ಹೇರಲಾಗಿದೆ. ಇದು ಕೈಗಾರಿಕೆಗಳಿಗೆ ಮಾಡಿದ ಅನ್ಯಾಯ. ಆದುದರಿಂದ ಈ ಹಿಂಬಾಕಿಯನ್ನು ಕೂಡಲೇ ಹಿಂಪಡೆದುಕೊಂಡು ಕೇವಲ ಕೈಗಾರಿಕೆಗಳು ಉಪಯೋಗಿಸಿದ ವಿದ್ಯುಚ್ಛಕ್ತಿಯ ದರವನ್ನು ಮಾತ್ರ ವಸೂಲಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸ ಲಾಗಿದೆ.

ಕೈಗಾರಿಕೋದ್ಯಮಗಳಲ್ಲಿ ಕನಿಷ್ಠ ವೇತನ ಶೇ.60 ಹೆಚ್ಚಳ ಮಾಡಿರುವುದನ್ನು ಸಂಘ ವಿರೋಧಿಸಿದ್ದು, ಕಾರ್ಮಿಕರ ವೇತನವನ್ನು ಎಲ್ಲಾ ಕೈಗಾರಿಕೆ ಉದ್ಯಮಗಳು ಪ್ರತಿ ವರ್ಷ ಹೆಚ್ಚಿಸುತ್ತಿದ್ದರೂ ಈಗಿನ ಸಂದರ್ಭದಲ್ಲಿ ಏಕಾಏಕಿ ಶೇ.60 ವೇತನ ಹೆಚ್ಚಳ ಮಾಡಿರುವುದು ಎಂಎಸ್‌ಎಂಇ ವಲಯದ ಉದ್ದಿಮೆಗಳಿಗೆ ಹೊರೆಯಾಗುತ್ತಿದೆ. ಈಗಾಗಲೇ ಎಲ್ಲಾ ಕೈಗಾರಿಕೆಗಳು ಯುದ್ಧದ ವೈಪರಿತ್ಯದಿಂದ ಡೀಸೆಲ್ ಬೆಲೆ ಹಾಗು ಸಾಗಾಟದ ವೆಚ್ಚ ಮತ್ತು ಕಚ್ಚಾವಸ್ತುಗಳ ಕೊರತೆಯಿಂದಾಗಿ ಬಳಲುತ್ತಿವೆ.

ಈ ಮಧ್ಯೆ ವೇತನ ಏರಿಕೆಯಿಂದಾಗಿ ಕೈಗಾರಿಕೆಗಳನ್ನು ಮುಚ್ಚುವಂತಹ ಪರಿಸ್ಥಿತಿ ಎದುರಾಗಿದೆ. ಅತಿಸಣ್ಣ ಮತ್ತು ಸಣ್ಣ ಉದ್ದಿಮೆಗಳು ತರಬೇತಿ ಕೇಂದ್ರ ಇದ್ದಂತೆ, ಕನಿಷ್ಠ ವೇತನ ಹೆಚ್ಚಳದ ಕಾರಣದಿಂದಾಗಿ ಅವು ನೇಮಕಾತಿ ಕಡಿಮೆ ಮಾಡಿದರೆ ನಿರುದ್ಯೋಗ ಪ್ರಮಾಣ ಹೆಚ್ಚಬಹುದು. ಈ ವಲಯದ ಉದ್ದಿಮೆಗಳ ನೆರವಿಗೆ ಸರಕಾರ ಬರಬೇಕೆಂದು ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಎಂ.ವಸಂತ್ ಕಿಣಿ ಮನವಿಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News