ಪ್ರಜ್ಞಾವಂತ ಕಲಾವಿದರಿಂದ ಯಕ್ಷಗಾನ ಹೊಸತನೊಂದಿಗೆ ಬೆಳೆಯಲು ಸಾಧ್ಯ: ಡಾ.ಜೋಶಿ
ಉಡುಪಿ, ಜೂ.2: ಯಕ್ಷಗಾನದಂತಹ ಶೈಲೀಕೃತ ಕಲೆ ಪರಂಪರೆಯೊಂದಿಗೆ ಔಚಿತ್ಯ ಅರಿತು ಹೊಸತನ್ನು ಸೇರಿಸಿ ಕೊಳ್ಳತ್ತಾ ಬೆಳೆಯಬೇಕಾಗಿದೆ. ಪ್ರಜ್ಞಾವಂತ ಕಲಾವಿದ ಇದನ್ನು ಮಾಡಲು ಸಾಧ್ಯ ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.
ಉಡುಪಿಯ ಯಕ್ಷಗಾನ ಕಲಾರಂಗ ವೃತ್ತಿ ಮೇಳದ ಯುವ ಕಲಾವಿದರಿಗೆ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾದ ಯಕ್ಷಗಾನ ಮಾರ್ಗದರ್ಶಿ ಶಿಬಿರವನ್ನು ಮಂಗಳವಾರ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇದಕ್ಕೆ ಇಂತಹ ಶಿಬಿರಗಳು ಪೂರಕವಾಗುತ್ತವೆ. ಯಕ್ಷಗಾನ ಕಲಾರಂಗ ಕಲಾವಿದರ ಕ್ಷೇಮ ಚಿಂತನೆಯೊಂದಿಗೆ ಕಲೆಯನ್ನು ಬೆಳೆಸುವ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ವಿದ್ವಾಂಸ ದಿವಾಕರ ಹೆಗಡೆ ಕೆರೆಹೊಂಡ ಮಾತನಾಡಿ, ಯಕ್ಷಗಾನದಲ್ಲಿ ಹಲವು ಸಾಧ್ಯತೆ ಗಳಿವೆ. ಅಧ್ಯಯನಶೀಲ ಕಲಾವಿದರು ತಮ್ಮ ಪ್ರತಿಭೆಯಿಂದ ಹೊಸ ಆಯಾಮ ನಿರ್ಮಿಸಲು ಸಾಧ್ಯವಿದೆ. ಆಹಾರ್ಯ, ಆಂಗಿಕ, ವಾಚಿಕ, ಸಾತ್ವಿಕ ಈ ನಾಲ್ಕೂ ಅಂಶಗಳನ್ನು ಔಚಿತ್ಯವರಿತು ಅಭಿವ್ಯಕ್ತಿಸಿದಾಗ ಯಕ್ಷಗಾನದ ಸೌಂದರ್ಯ ಹೆಚ್ಚುತ್ತದೆ ಎಂದರು.
ವೇದಿಕೆಯಲ್ಲಿ ಹಿರಿಯ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ಎ.ಪಿ.ಪಾಠಕ್, ಸಂಸ್ಥೆಯ ಸದಸ್ಯರಾದ ಪ್ರೊ.ಕೆ.ಸದಾಶಿವ ರಾವ್, ಪ್ರೊ.ಎಂ.ಎಲ್.ಸಾಮಗ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ, ಶಿಬಿರದ ಪ್ರಾಯೋಜಕ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಶಿಬಿರದ ನಿರ್ದೇಶಕ ಪವನ್ ಕಿರಣ್ಕೆರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ಸಂಯೋಜಿಸಿದರು. ಜತೆ ಕಾರ್ಯದರ್ಶಿ ವಿದ್ಯಾಪ್ರಸಾದ್ ವಂದಿಸಿದರು. ನಾರಾಯಣ ಎಂ.ಹೆಗಡೆ ಕಾರ್ಯಕ್ರಮ ನಿರೂಪಿಸಿದರು.