ಬ್ರಹ್ಮಾವರದಲ್ಲಿ ಮಾದಕ ವ್ಯಸನಗಳ ವಿರುದ್ಧ ಜಾಗೃತಿ ನಡಿಗೆ
ಬ್ರಹ್ಮಾವರ, ಜೂ.7: ಮೂಡುಗಿಳಿಯಾರು ಜನಸೇವಾ ಟ್ರಸ್ಟ್, ಟೀಂ ಅಭಿಮತ ಆಶ್ರಯದಲ್ಲಿ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಮಾದಕ ವ್ಯಸನ ಮುಕ್ತ ಜಾಗೃತಿ ನಡಿಗೆ ವಾಕಥಾನ್‌ನ್ನು ರವಿವಾರ ಬ್ರಹ್ಮಾವರದಲ್ಲಿ ಆಯೋಜಿಸಲಾಗಿತ್ತು.
ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾದಕ ವ್ಯಸನ ಮುಕ್ತ ಜಾಗೃತಿ ನಡಿಗೆ ಕೇವಲ ಬ್ರಹ್ಮಾವರಕ್ಕೆ ಮಾತ್ರ ಸೀಮಿತವಾಗದೇ ಇಡೀ ಕರ್ನಾಟಕದ ಉದ್ದಕ್ಕೂ ನಡೆಯಬೇಕು. ಈ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಕೆಲಸವಾಗಿದೆ. ಭಾರತ ಇವತ್ತು ಬಹಳ ದೂರ ಸಾಗಬೇಕಾದ ಅಗತ್ಯದೆ. ಇಡೀ ವಿಶ್ವಕ್ಕೆ ಶಾಂತಿ, ಸಹಬಾಳ್ವೆ, ಒಳ್ಳೆಯ ಸಂಸ್ಕೃತಿ ಕೊಡಬಲ್ಲ ರಾಷ್ಟ್ರ ಇದ್ದರೇ ಅದು ಭಾರತದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪಾರಿವಾಳ ಹಾರಿಸಿ ಬಿಡುವುದರ ಮೂಲಕ ಶುಭ ಹಾರೈಸಿದರು. ಉಡುಪಿ ಶಾಸಕ ಯಶಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಉದ್ಯಮಿಗಳಾದ ಸುಗ್ಗಿ ಸುಧಾಕರ ಶೆಟ್ಟಿ, ಬೇಳೂರು ರಾಘವೇಂದ್ರ ಶೆಟ್ಟಿ, ಕಾರ್ಮಿಕ ಮುಖಂಡ ರವಿ ಶೆಟ್ಟಿ ಬೈಂದೂರು, ಯುವ ನಾಯಕ ಈಶ್ವರ ಶೆಟ್ಟಿ ಮಂಗಳೂರು, 6ನೇ ಕರ್ನಾಟಕ ನೌಕ ಎನ್‌ಸಿಸಿ ಘಟಕದ ಅಧಿಕಾರಿ ಕಮಾಂಡರ್ ಎಂ.ಎ.ಮುಲ್ತಾನಿ, ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಪ್ರಿನ್ಸಿಪಾಲ್ ರಾಬರ್ಟ್ ರೋಡ್ರಿಗ್ರಸ್, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗಿಳಿಯಾರು ಜನಸೇವಾ ಟ್ರಸ್ಟ್ ಪ್ರಮುಖರಾದ ಶರತ್ ಶೆಟ್ಟಿ ಕೊತ್ತಾಡಿ, ಡಿ.ಸಿ.ಉಮೇಶ್ ಶೆಟ್ಟಿ, ಉದಯ ಶೆಟ್ಟಿ ಪಡುಕರೆ, ಕೆ.ಸಿ.ರಾಜೇಶ್, ಪ್ರವೀಣ್ ಯಕ್ಷಿಮಠ, ಅರುಣ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ ಗಿಳಿಯಾರು ಸ್ವಾಗತಿಸಿದರು. ಪ್ರಣೂತ್ ಆರ್.ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಾವರದ ಪ್ರಮುಖ ಬೀದಿಗಳಲ್ಲಿ ಸುಮಾರು ಸಾವಿರಾರು ಅಧಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳು, ನಾಗರಿಕರು ಸೇರಿದಂತೆ ಒಂದೇ ಧ್ವನಿಯಲ್ಲಿ ಡ್ರಗ್ಸ್ ಬೇಡ, ಆರೋಗ್ಯಕರ ಬದುಕು ಬೇಕು ಎಂಬ ಸಂದೇಶವನ್ನು ಸಾರಿ ವಾಕಥಾನ್ ಮೂಲಕ ಜಾಗೃತಿ ಮೂಡಿಸಿದರು.