ಮಳೆಗಾಲದಲ್ಲಿ ಅಡಿಕೆ-ಇತರೆ ಬೆಳೆಗಳ ನಿರ್ವಹಣೆ: ರೈತರಿಗೆ ಸಲಹೆ
ಉಡುಪಿ, ಜೂ.11: ಉಡುಪಿ ಜಿಲ್ಲೆ ವಾರ್ಷಿಕವಾಗಿ 4,500 ಮೀಮೀಗೂ ಅಧಿಕ ಮಳೆಯಾಗುವ ಪ್ರದೇಶವಾಗಿದ್ದು, ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು ಹಾಗೂ ಕಾಳುಮೆಣಸು ಬೆಳೆಗಳು ವಿಪರೀತ ಮಳೆಯಿಂದಾಗಿ ವಿವಿಧ ರೋಗಬಾಧೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಇದರ ಅಸಮರ್ಪಕ ನಿರ್ವಹಣೆಯಿಂದ ಇಳುವರಿ ನಷ್ಟವಾಗುವುದಲ್ಲದೆ, ರೋಗಬಾಧೆ ಉಲ್ಬಣವಾಗಿ ಮರಗಳು ಸಂಪೂರ್ಣವಾಗಿ ನಾಶವಾಗುವ ಸಾಧ್ಯತೆ ಇರುತ್ತದೆ.
ಮಳೆಗಾಲದಲ್ಲಿ ಮೋಡ ಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಹೆಚ್ಚಾದ ಮಣ್ಣಿನ ತೇವಾಂಶ, ಪೋಷಕಾಂಶಗಳ ಕೊಚ್ಚಣೆ ಮತ್ತು ಸೂರ್ಯನ ಬೆಳಕಿನ ಕೊರತೆ ಮುಂತಾದ ಹಲವು ಕಾರಣಗಳಿಂದ ಅಡಿಕೆ ಯಲ್ಲಿ ಕೊಳೆ ರೋಗ, ಕಾಳುಮೆಣಸುನಲ್ಲಿ ಸೊರಗು ರೋಗ ಹಾಗೂ ತೆಂಗಿನಲ್ಲಿ ಸುಳಿಕೊಳೆ ರೋಗ ಉಲ್ಬಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಅಡಿಕೆ ಮತ್ತು ತೆಂಗಿನಲ್ಲಿ ಮಳೆಗಾಲದಲ್ಲಿ ಕೊಳೆರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳದೆ ಇದ್ದಲ್ಲಿ, ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿವರೆಗೂ ಹೆಚ್ಚಾಗಿರುವ ಮಂಜಿನ ಹನಿಗಳು ರೋಗಾಣುಗಳ ಅಭಿವೃದ್ದಿಗೆ ಅನುಕೂಲ ಕರವಾಗಿದ್ದು, ಕೊಳೆ ರೋಗಕ್ಕೆ ಕಾರಣವಾದ ಶಿಲೀಂದ್ರ ರೋಗಾಣುಗಳು ಅಭಿವೃದ್ಧಿ ಹೊಂದಿ ಶಿರಕೊಳೆ ಮತ್ತು ಸುಳಿಕೊಳೆ ರೋಗಗಳಿಂದಾಗಿ ಅಡಿಕೆ/ತೆಂಗಿನ ಮರಗಳು ಸಾಯುವ ಸಂಭವ ಹೆಚ್ಚಾಗಿರುತ್ತದೆ.
ಅಡಿಕೆ ಬೆಳೆಗೆ ರೋಗಬಾಧೆಗಳು ಉಲ್ಬಣಿಸುವುದನ್ನು ತಡೆಗಟ್ಟಲು ಈ ಕೆಳಗಿನಂತೆ ಮುಂಜಾಗ್ರತಾ ಕ್ರಮಗಳನ್ನು ಶಿಫಾರಸ್ಸು ಮಾಡಲಾಗಿದೆ: ಕೆಳಗೆ ಬಿದ್ದಿರುವ ರೋಗ ಪೀಡಿತ ಕಾಯಿ ಹಾಗೂ ಒಣಗಿದ ಹಿಂಗಾರಗಳನ್ನು ಆರಿಸಿ ತೆಗೆದು ಸುಡುವುದು ಅಥವಾ ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು. ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಚೊಕ್ಕ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು.
ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು. ರೋಗವನ್ನು ಹತೋಟಿ ಯಲ್ಲಿಡಲು ಜೂನ್ ತಿಂಗಳಿನಿಂದ ಅಗಸ್ಟ್-ಸೆಪ್ಟೆಂಬರ್ ತಿಂಗಳವರೆಗೆ 25 ರಿಂದ 30 ದಿನಗಳ ಅಂತರದಲ್ಲಿ ಶೇ.1ರ ಬೋರ್ಡೋ ದ್ರಾವಣ ಅಥವಾ ಮ್ಯಾಂಡಿಪ್ರೋಪಾಮಿಡ್ (1ಮಿ.ಲೀ. 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ) ಗೊನೆಗಳಿಗೆ ಹಾಗೂ ಎಲೆ ತೊಟ್ಟು, ಹೊಡೆ ಭಾಗ ಮತ್ತು ಸುಳಿ ಭಾಗಗಳು ಚೆನ್ನಾಗಿ ನೆನೆಯುವಂತೆ ಸೂಕ್ತ ಅಂಟಿನೊಂದಿಗೆ (ರಾಳ) ಸಿಂಪರಣೆ ಮಾಡಬೇಕು.
ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸ್ಸು ಮಾಡಿದ ಸುಣ್ಣ, ಸಾವಯವ ಗೊಬ್ಬರ (ಪ್ರತಿ ಮರಕ್ಕೆ 10-12 ಕಿ.ಗ್ರಾಂ) ಮತ್ತು ರಾಸಾಯನಿಕ ಗೊಬ್ಬರ ಗಳನ್ನು (ಪ್ರತಿ ಮರಕ್ಕೆ 100:40:140 ಗ್ರಾಂ ಸಾ.ರಂ.ಪೊ) ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಮಣ್ಣಿಗೆ ಸೇರಿಸಬೇಕು. ಈಗಾಗಲೇ ಶಿಫಾರಸ್ಸು ಮಾಡಿದ ಶೇ.50ರಷ್ಟು ರಸಗೊಬ್ಬರ ಗಳನ್ನು ಮುಂಗಾರಿನ ಮೊದಲು ಕೊಟ್ಟಿದ್ದರೆ ಈಗ ಉಳಿದ ಅರ್ಧ ಭಾಗವನ್ನು ಕೊಟ್ಟರೆ ಸಾಕಾಗುತ್ತದೆ. ಇದೇ ಅವಧಿಯಲ್ಲಿ ಬೇರುಗಳ ವಲಯವನ್ನು ಶೇ.10ರ ಬೋರ್ಡೋ ದ್ರಾವಣ ಅಥವಾ ಶೇ. 0.3ರ ಅಕೋಮಿನ್/ ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣದಿಂದ ನೆನೆಸಬೇಕು. ಪ್ರತಿ ಮರಕ್ಕೆ ಸುಮಾರು 5 ಲೀ. ದ್ರಾವಣ ಬೇಕಾಗುತ್ತದೆ.
ತುಂತುರು ಮಳೆ ಇರುವಾಗ ಬೋರ್ಡೋ ದ್ರಾವಣವನ್ನು ಹಾಗೂ ಶುಷ್ಕ ವಾತಾವರಣ ಇದ್ದಾಗ ಬೋರ್ಡೋ ದ್ರಾವಣಕ್ಕೆ ಬದಲಿ ಶಿಲೀಂದ್ರ ನಾಶಕಗಳಾದ ಮ್ಯಾಂಡಿಪ್ರೋಪಾಮಿಡ್ (1ಮೀ.ಲೀ. 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ) ಅಥವಾ ಮೆಟಲಾಕ್ಸಿಲ್ ಎಂ.ಝಡ್ (2 ಗ್ರಾಂ 1 ಲೀ ನೀರಿನಲ್ಲಿ ಕರಗಿಸಿ) ಔಷಧಗಳನ್ನು ಸೂಕ್ತ ಅಂಟಿನೊಂದಿಗೆ ಸಿಂಪರಣೆಗೆ ಬಳಸಬಹುದು.
ಈ ಕ್ರಮಗಳನ್ನು ಸಾಮೂಹಿಕವಾಗಿ ಎಲ್ಲಾ ರೈತರು ಏಕಕಾಲದಲ್ಲಿ ಅನುಸರಿಸಿದ್ದಲ್ಲಿ ಮರಗಳನ್ನು ಸುಳಿಕೊಳೆ ಅಥವಾ ಶಿರಕೊಳೆಯಿಂದ ಸಾಯುವುದನ್ನು ತಪ್ಪಿಸಬಹುದಾಗಿದೆ. ಮಳೆಗಾಲದಲ್ಲಿ ಅಡಿಕೆ ಅಲ್ಲದೆ ತೆಂಗು ಬೆಳೆಗೂ ಕೊಳೆರೋಗ ಹಾಗೂ ಕಾಳುಮೆಣಸು ಬೆಳೆಗೆ ಶೀಘ್ರ ಸೊರಗು ರೋಗ ಬಾಧಿಸುವ ಸಾಧ್ಯತೆ ಇದ್ದು, ಅಡಿಕೆಗೆ ಶಿಫಾರಸ್ಸು ಮಾಡಿದ ಸಿಂಪರಣೆಯನ್ನು ರೋಗಬಾಧಿತ ತೆಂಗಿನ ಮರಗಳಿಗೆ ಹಾಗೂ ಮುಂಜಾಗೃತ ಕ್ರಮವಾಗಿ ಕಾಳುಮೆಣಸು ಬಳ್ಳಿಗಳಿಗೂ ಸಿಂಪರಣೆ ಮಾಡುವುದರಿಂದ ಅವುಗಳ ರೋಗ ಬಾಧೆಯನ್ನು ನಿಯಂತ್ರಿಸ ಬಹುದಾಗಿದೆ.
ರೈತರಿಗೆ ಸಲಹೆಗಳು: ಮಳೆಗಾಲದಲ್ಲಿ ಅಡಿಕೆ, ತೆಂಗು, ರಬ್ಬರ್ ಮತ್ತು ಇತರೆ ತೋಟಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ಯಾಗುವ ಸಾಧ್ಯತೆ ಇದ್ದು, ಇದರಿಂದ ಡೆಂಗಿ ಮತ್ತು ಮಲೇರಿಯಾ ದಂತ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ರೈತರು ಈ ಬಗ್ಗೆ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು.
ತೋಟಗಳಲ್ಲಿ ನೀರು ನಿಲ್ಲದಂತೆ ಸೂಕ್ತ ಬಸಿಕಾಲುವೆಗಳನ್ನು ನಿರ್ಮಾಣ ಮಾಡುವುದು ಹಾಗೂ ಬಸಿಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕು. ಅಡಿಕೆ ತೋಟಗಳಲ್ಲಿ ಗರಿಗಳು ಬಿದ್ದು, ಗರಿಗಳಲ್ಲಿ ನೀರು ಸಂಗ್ರಹವಾಗುವ ಸಾಧ್ಯತೆ ಇರುತ್ತದೆ. ಗರಿಗಳನ್ನು ಕಾಲಕಾಲಕ್ಕೆ ಸಂಗ್ರಹಿಸಿ, ವಿಲೆವಾರಿ ಮಾಡಬೇಕು.
ರಬ್ಬರ್ ತೋಟಗಳಲ್ಲಿ ರಬ್ಬರ್ ಹಾಲು ಸಂಗ್ರಹಣೆ ಮಾಡಲು ಉಪಯೋಗಿಸುವ ಪರಿಕರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು/ಬಟ್ಟಲುಗಳನ್ನು ನೀರು ನಿಲ್ಲದಂತೆ ಕೆಳಗೆ ತಿರುಗಿಸಬೇಕು. ರೈತರು/ಕೃಷಿ ಕಾರ್ಮಿಕರು ತೋಟಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸೊಳ್ಳೆಗಳು ಕಚ್ಚದಂತೆ ಅಗತ್ಯ ಮನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳ ಬೇಕು. ಸಿಡಿಲು/ಗಾಳಿ ಯಿಂದ ಹಾನಿಯಾಗದಂತೆ ಈಗಾಗಲೇ ಜಿಲ್ಲಾಡಳಿತದಿಂದ ಹೊರಡಿಸಿದ ಮಾರ್ಗಸೂಚಿಯ ನುಸಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.