ಮಹಿಳೆ-ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಗೆ ಮಾಹಿತಿ ಕಾರ್ಯಾಗಾರ
ಉಡುಪಿ, ಜೂ.11: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ವಿವಿಧ ವಿಭಾಗಗಳ ಮೇಲ್ವಿಚಾರಕಿಯರಿಗೆ ಸೌರಶಕ್ತಿ, ಸಾವಯವ ಕೃಷಿ, ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಯೋಗ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ಕುರಿತು ಒಂದು ದಿನದ ಮಾಹಿತಿ ಕಾರ್ಯಾಗಾರ ಬುಧವಾರ ಉಡುಪಿಯ ಬಾಲಭವನದಲ್ಲಿ ನಡೆಯಿತು.
ಕಾರ್ಯಾಗಾರವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅನುರಾಧ ಹಾದಿಮನಿ ಉದ್ಘಾಟಿಸಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಬಿ.ವಿ.ಟಿ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಅನೇಕ ತರಬೇತಿಗಳನ್ನು ಜಂಟಿಯಾಗಿ ಹಮ್ಮಿಕೊಂಡಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳು ವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅರುಣ್ ಪಟವರ್ಧನ್ ಮತ್ತು ಪ್ರವೀಣ್ ಸೌರಶಕ್ತಿ ಮತ್ತು ಜೀವನೋಪಾಯ ಸೌರ ಉಪಕರಣಗಳ ಬಗ್ಗೆ, ಸಾವಯವ ಕೃಷಿಕ ಗೋಪಾಲ ನಾಯಕ್ ಅವರು ಸಾವಯವ ಕೃಷಿ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ಕುರಿತು ಉಪನ್ಯಾಸ ನೀಡಿದರು. ಪ್ರಕಾಶ್ ನಾಯಕ್ ಯೋಗದ ಮಹತ್ವ ಮತ್ತು ಅದರ ಆರೋಗ್ಯಕರ ಪ್ರಯೋಜನ ಗಳ ಬಗ್ಗೆ ಪ್ರಾತ್ಯಕ್ಷಿಕೆ ಯೊಂದಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರು, ಸಖಿ ಒನ್ ಸ್ಟಾಪ್ ಕೇಂದ್ರದ ಸಿಬ್ಬಂದಿಗಳು, ಸಾಂತ್ವನ ಕೇಂದ್ರದ ಸಿಬ್ಬಂದಿಗಳು, ಬಾಲಭವನದ ಸಿಬ್ಬಂದಿಗಳು ಮತ್ತು ಯೋಜನಾ ಸಿಬ್ಬಂದಿಗಳು ಭಾಗವಹಿಸಿದ್ದರು.
ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ದೀಪಾ ಸ್ವಾಗತಿಸಿ, ವಂದಿಸಿದರೆ ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.