×
Ad

ಮಾಹೆ ಸಹಕುಲಪತಿಯಾಗಿ ಮೇ.ಜ.ಮ್ಯಾಥ್ಯೂಸ್ ಜೇಕಬ್

Update: 2026-06-17 21:29 IST

ಮಣಿಪಾಲ, ಜೂ.17: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯ ಆರೋಗ್ಯ ವಿಜ್ಞಾನ ವಿಭಾಗದ ನೂತನ ಸಹಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ವಿಎಸ್‌ಎಂ (ನಿವೃತ್ತ) ಇವರನ್ನು ನೇಮಕ ಮಾಡಲಾಗಿದೆ.

ಡಾ.ಮ್ಯಾಥ್ಯೂಸ್ ಜೇಕಬ್, ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಲ್ಲಿ 36 ವರ್ಷಗಳ ಸುದೀರ್ಘ ಹಾಗೂ ವಿಶಿಷ್ಟ ಸೇವಾ ಅನುಭವ ಹೊಂದಿದ್ದಾರೆ. ಕ್ಲಿನಿಕಲ್ ಕೇರ್, ವೈದ್ಯಕೀಯ ಶಿಕ್ಷಣ, ಸಂಶೋಧನೆ, ಆರೋಗ್ಯ ರಕ್ಷಣಾ ನಾಯಕತ್ವ ಮತ್ತು ಸಾಂಸ್ಥಿಕ ಆಡಳಿತದಲ್ಲಿ ಅಪಾರ ಪರಿಣತಿ ಹೊಂದಿದ್ದಾರೆ.

ಪುಣೆಯ ಪ್ರತಿಷ್ಠಿತ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಅಲ್ಲದೇ ಅರಿವಳಿಕೆ ಮತ್ತು ಕ್ರಿಟಿಕಲ್ ಕೇರ್‌ನಲ್ಲಿ ಎಂಡಿ ಪದವಿ ಪಡೆದಿದ್ದಾರೆ. ಜೊತೆಗೆ ಡಿಎನ್‌ಬಿ ಮತ್ತು ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸಾಯನ್ಸ್‌ನ ಸದಸ್ಯತ್ವ ಹೊಂದಿದ್ದಾರೆ. ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸಾಯನ್ಸ್‌ನಿಂದ ಆಸ್ಪತ್ರೆ ಆಡಳಿತದಲ್ಲಿ ಎಕ್ಸಿಕ್ಯೂಟಿವ್ ಸ್ನಾತಕೋತ್ತರ ಡಿಪ್ಲೊಮಾ, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಿಂದ ಮೆಡಿಕಲ್ ಲಾ ಮತ್ತು ಎಥಿಕ್ಸ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ.

ಪ್ರಸಿದ್ಧ ಅರಿವಳಿಕೆ ಮತ್ತು ಕ್ರಿಟಿಕಲ್ ಕೇರ್ ತಜ್ಞರಾಗಿರುವ ಇವರು, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಿದ್ದು, ರೋಗಿಗಳ ಆರೈಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದ ಅನುಭವ ಹೊಂದಿದ್ದಾರೆ.

ಪ್ರಾಧ್ಯಾಪಕರಾಗಿ ಬೋಧನೆ, ಸ್ನಾತಕೋತ್ತರ ತರಬೇತಿ, ಪಠ್ಯಕ್ರಮ ಅಭಿವೃದ್ಧಿ, ಮೌಲ್ಯಮಾಪನ ಮತ್ತು ವಿದ್ಯಾರ್ಥಿ ಮಾರ್ಗದರ್ಶನದಲ್ಲಿ 14 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಇವರು, ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 35ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ.

ಸಶಸ್ತ್ರ ಪಡೆಗಳು ಮತ್ತು ಆರೋಗ್ಯ ವಲಯಕ್ಕೆ ನೀಡಿದ ಅಸಾಧಾರಣ ಸೇವೆ ಹಾಗೂ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ, 2023ರಲ್ಲಿ ಪ್ರತಿಷ್ಠಿತ ’ವಿಶಿಷ್ಟ ಸೇವಾ ಪದಕ’ವನ್ನು ಡಾ.ಜೇಕಬ್‌ಗೆ ನೀಡಿ ಗೌರವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News