ಯಕ್ಷಗಾನ ಕಲಾರಂಗದ 50 ಮನೆಗಳಿಗೆ ಮಾಹೆ ಪ್ರಾಯೋಜಕತ್ವ: ಡಾ.ರಂಜನ್ ಪೈ ಘೋಷಣೆ
ಉಡುಪಿ, ಜೂ.17: ಉಡುಪಿಯ ಯಕ್ಷಗಾನ ಕಲಾರಂಗ ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಬಡ ಯಕ್ಷಗಾನ ಕಲಾವಿದರಿಗೆ ಮನೆಗಳನ್ನು ನಿರ್ಮಿಸಿಕೊಡುತ್ತಿರುವ ಯೋಜನೆ ಯೊಂದಿಗೆ ಮಾಹೆ ಕೈಜೋಡಿಸಲು ನಿರ್ಧರಿಸಿದ್ದು, ಪ್ರತಿವರ್ಷ 10 ಮನೆಗಳಂತೆ ಒಟ್ಟು 50 ಮನೆಗಳ ಪ್ರಾಯೋಜಕತ್ವವನ್ನು ಮಾಹೆ ವಹಿಸಲಿದೆ ಎಂದು ಮಾಹೆ ಅಧ್ಯಕ್ಷ ಡಾ.ರಂಜನ್ ಆರ್ ಪೈ ಪ್ರಕಟಿಸಿದ್ದಾರೆ.
ಯಕ್ಷಗಾನ ಕಲಾರಂಗದ ಐವೈಸಿ ಕಟ್ಟಡಕ್ಕೆ ಮಂಗಳವಾರ ಭೇಟಿ ನೀಡಿ ವೀಕ್ಷಿಸಿದ ಡಾ.ರಂಜನ್ ಪೈ ಅವರು ಯಕ್ಷಗಾನ ಕಲಾರಂಗ ಯಾವುದೇ ಆಡಂಬರವಿಲ್ಲದೆ ಮನೆ ಇಲ್ಲದವರಿಗೆ ಮನೆ ನಿರ್ಮಿಸಿ ಕೊಡುತ್ತಿರುವ ಕಾರ್ಯ ವನ್ನು ಶ್ಲಾಘಿಸಿ ಮಾಹೆ ವತಿಯಿಂದ ಪ್ರತಿವಷರ್ ಹತ್ತು ಮನೆಗಳಂತೆ ಐವತ್ತು ಮನೆಗಳ ಪ್ರಾಯೋಜಕತ್ವ ವಹಿಸುವುದಾಗಿ ತಿಳಿಸಿದರು.
ಮಾಹೆ ವಿವಿಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ ಮಾತನಾಡಿ, ಆರೋಗ್ಯ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾಹೆ ನಿರಂತರ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಯಕ್ಷಗಾನ ಕಲಾರಂಗದ ಅವಶ್ಯಕತೆಗೆ ಮಾಹೆ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಡಾ.ರಂಜನ್ ಆರ್. ಪೈ ಅವರನ್ನು ಕಲಾರಂಗದ ವತಿಯಿಂದ ಸ್ಮರಣಿಕೆ ನೀಡಿ ಗೌರಸಲಾ ಯಿತು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಸಂಸ್ಥೆಯ ಹಿಂದಿನ ಕಾರ್ಯಗಳಿಗೆ ನೀಡಿದ ಉದಾರ ಆರ್ಥಿಕ ನೆರವಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಕಟ್ಟಡದಲ್ಲಿ ಇನ್ನೂ ಆಗಬೇಕಾಗಿರುವ ಕಾಮಗಾರಿಯನ್ನು ಪ್ರಾಸಂಗಿಕವಾಗಿ ಡಾ.ರಂಜನ್ ಪೈ ಗಮನಕ್ಕೆ ತಂದರು. ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ ರಾವ್, ಉಪಾಧ್ಯಕ್ಷರಾದ ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ.ಕೆ.ಸದಾಶಿವ ರಾವ್, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ.ಹೆಗಡೆ, ವಿದ್ಯಾಪ್ರಸಾದ್, ಸದಸ್ಯ ರಾದ ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಪ್ರೊ.ಎಂ.ಎಲ್. ಸಾಮಗ, ಭುವನಪ್ರಸಾದ ಹೆಗ್ಡೆ, ವಿಜಯಕುಮಾರ್ ಮುದ್ರಾಡಿ, ಪ್ರೊ.ಶಂಕರ್, ಅನಂತರಾಜ ಉಪಾಧ್ಯ, ಡಾ.ರಾಜೇಶ್ ನಾವುಡ, ಗಣೇಶ ಬ್ರಹ್ಮಾವರ, ಸಂಸ್ಕೃತಿ ಉಪಸ್ಥಿತರಿದ್ದರು.