×
Ad

ಹಂಗಾರಕಟ್ಟೆ ಕಿರು ಬಂದರು: ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲು ಸಂಸದ ಕೋಟ ಸಲಹೆ

Update: 2026-07-01 20:39 IST

ಉಡುಪಿ, ಜು.1: ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ ಮೀನುಗಾರಿಕಾ ಕಿರು ಬಂದರು ಕಾಮಗಾರಿ ಅಭಿವೃದ್ಧಿಗೆ ಮೂರು ವರ್ಷಗಳ ಹಿಂದೆ 78 ಕೋಟಿ ರೂ. ಮಂಜೂರಾಗಿದೆ. ಇದಾಗಿ ಮೂರು ವರ್ಷಗಳು ಕಳೆದರೂ ಬಂದರು ಕಾಮಗಾರಿಯನ್ನು ಪ್ರಾರಂಭಿಸದಿರುವ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಬಗ್ಗೆ ಬಂದರು ಅಧಿಕಾರಿಗಳು ಪ್ರತಿಕ್ರಿಯಿಸಿ, ಬೆಂಗಳೂರಿನ ಪರಿಸರ ಇಲಾಖೆಯಲ್ಲಿ ಕಡತ ಬಾಕಿ ಉಳಿದಿದ್ದು ಇಲಾಖಾನುಮತಿ ಸಿಗುತ್ತಲೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು. ಬೆಂಗಳೂರಿನ ಹಿರಿಯ ಅಧಿಕಾರಿ ಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ ಸಂಸದ ಕೋಟ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಅನುಮತಿ ನೀಡುವಂತೆ ಸಲಹೆ ನೀಡಿದರು.

ಅದೇ ರೀತಿ ಸಮೀಪದ ಕೋಡಿಕನ್ಯಾಣದ ಕಿರು ಬಂದರಿನ ಹೂಳೆತ್ತುವ ಕಾಮಗಾರಿಗೆ 84 ಲಕ್ಷ ರೂ. ಮಂಜೂರಾ ಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿಯುತ್ತಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದೆಂದು ಅಧಿಕಾರಿಗಳು ಸಂಸದರಿಗೆ ಭರವಸೆ ನೀಡಿದರು.

ಲೋಕಸಭಾ ಸದಸ್ಯರ ಉಡುಪಿ ಕಚೇರಿಯಲ್ಲಿ ಕರೆದ ಸಭೆಯಲ್ಲಿ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ, ಬಂದರು ಇಲಾಖೆ ಉಪನಿರ್ದೇಶಕರಾದ ರಾಥೋಡ್, ಸಿ.ಆರ್.ಝೆಡ್ ವಿಷಯ ನಿರ್ವಾಹಕರಾದ ಧೀರಜ್ ಮುಂತಾದವರು ಉಪಸ್ಥಿತರಿದ್ದರು.

ಬೆಳೆ ವಿಮೆ ಅವಧಿ ವಿಸ್ತರಣೆಗೆ ಮನವಿ: 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ನೊಂದಾವಣಾ ಅವಧಿ ಜೂನ್ 30ರ ಕೊನೆಗೆ ಮುಕ್ತಾಯಗೊಂಡಿದ್ದು, ಬೆಳೆ ವಿಮೆ ಯೋಜನೆಯ ನೊಂದಾವಣೆ ಯನ್ನು ಒಂದು ತಿಂಗಳ ಅವಧಿಗೆ ವಿಸ್ತರಿಸುವಂತೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರದ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಸಚಿವ ಶಿವರಾಜ್ ಸಿಂಗ್ ಚೌವ್ಹಾನ್ ಮತ್ತು ಕೇಂದ್ರದ ಕೃಷಿ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ವಿಶೇಷವಾಗಿ ಅಡಿಕೆ, ಕಾಳುಮೆಣಸು ಸೇರಿದಂತೆ ಇನ್ನಿತರ ತೋಟಗಾರಿಕಾ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ರೈತರು ಆಸಕ್ತಿ ಹೊಂದಿದ್ದಾರೆ. ನಿಗದಿತ ದಿನದೊಳಗೆ ನೊಂದಣಿ ಪೂರ್ಣಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ತಡವಾಗಿ ಬಂದ ನಿರಂತರ ಮಳೆ ಮತ್ತು ಪ್ರತಿಕೂಲ ಹವಾಮಾನ ಕೃಷಿ ಚಟುವಟಿಕೆ ಹಾಗೂ ರೈತಾಪಿ ವರ್ಗದ ಕೆಲಸದ ಒತ್ತಡ ಗಳಿಂದಾಗಿ ರೈತರು ವಿಮಾ ಸೌಲಭ್ಯವನ್ನು ಪಡೆಯಲು ತೊಂದರೆಯನ್ನು ಅನುಭಸುತ್ತಿದ್ದಾರೆ ಎಂದು ಅವರು ಸಚಿವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಅಲ್ಲದೇ, ಬೆಳೆ ವಿಮೆ ಯೋಜನೆಯಡಿ ಇದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸುವುದು ವಿಳಂಬವಾದ ಕಾರಣದಿಂದ ಅನೇಕ ಮಂದಿ ರೈತರು ವಿಮಾ ಯೋಜನೆಯನ್ನು ಪಡೆಯಲು ವಂಚಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಮುಂದಿನ 1 ತಿಂಗಳುಗಳ ಕಾಲ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಪ್ರಯೋಜನ ರೈತಾಪಿ ವರ್ಗಕ್ಕೆ ಸಿಗಲು ಅರ್ಜಿ ಸ್ವೀಕಾರದ ಅವಧಿ ವಿಸ್ತರಿಸುವಂತೆ ಕೋಟ ಕೇಂದ್ರಕ್ಕೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News