×
Ad

ಸ್ವಚ್ಚತಾ ಶನಿವಾರ: ರಸ್ತೆ ಬದಿಯ ತ್ಯಾಜ್ಯ ತೆರವು

Update: 2026-07-04 18:51 IST

ಮಂಗಳೂರು, ಜು.4: ತಾಲೂಕು ಹಾಗೂ ಗ್ರಾಪಂ ವ್ಯಾಪ್ತಿಯ ರಸ್ತೆ ಬದಿಯ ತ್ಯಾಜ್ಯಗಳನ್ನು ತೆರವುಗೊಳಿಸುವ ಮೂಲಕ ದ.ಕ.ಜಿಲ್ಲೆಯ 9 ತಾಲೂಕುಗಳಲ್ಲೂ ರ ಱಸ್ವಚ್ಚತಾ ಶನಿವಾರ ನಡೆಯಿತು.

ಖುದ್ದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳೇ ರಸ್ತೆ ಬದಿಯ ತ್ಯಾಜ್ಯ ತೆರವು ಕಾರ್ಯದಲ್ಲಿ ತೊಡಗಿಸಿ ಕೊಂಡರು. ರಸ್ತೆ ಇಕ್ಕೆಲಗಳ ಕಸ ತೆರವು, ಹುಲ್ಲು ಕಟಾವು, ಜಲಮೂಲಗಳಿಂದ ಪ್ಲಾಸ್ಟಿಕ್ ಬಾಟಲ್‌ಗಳ ತೆರವು, ಸ್ವಚ್ಛತಾ ಪ್ರತಿಜ್ಞೆ, ಸ್ವಚ್ಛತಾ ಶ್ರಮದಾನ ನಡೆಯಿತು.

ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ಬಿಸಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ವಿಧಿಸಲಾಯಿತು. ಈವರೆಗೆ 190 ಅಧಿಕ ಪ್ರಕರಣಗಳು ವರದಿಯಾಗಿದ್ದು, 2.90 ಲಕ್ಷ ರೂ.ದಂಡ ವಿಧಿಸಲಾಗಿದೆ.

*ಕಡಬ ತಾಲೂಕಿನ 9 ಗ್ರಾಪಂಗಳಲ್ಲಿ ಏಕಕಾಲದಲ್ಲಿ 45 ಕಿಮೀ ಸ್ವಚ್ಛತೆ

ದ.ಕ.ಜಿಪಂ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ, ತಾಪಂ ಕಡಬ ಹಾಗೂ ವಿವಿಧ ಸಂಘ-ಸಂಸ್ಥೆಗಳು, ವಿವಿಧ ಇಲಾಖೆ ಗಳ ಸಹಕಾರದೊಂದಿಗೆ ಮಹಾತ್ಮ ಗಾಂಧಿ ಗ್ರಾಪಂಗಳ ಹಾಗೂ ಕಡಬ ಪಟ್ಟಣ ಪಂಚಾಯತ್‌ಗಳ ಸಂಯುಕ್ತ ಆಶ್ರಯದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವನ್ನು ಸಂಪರ್ಕಿಸುವ ಮತ್ತು ಕಡಬ ತಾಲೂಕು ಕೇಂದ್ರದ ಮೂಲಕ ಹಾದು ಹೋಗುವ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿ ಸ್ವಚ್ಛತಾ ಕಾರ್ಯ ಶನಿವಾರ ನಡೆಯಿತು.

ಹೆದ್ದಾರಿ ಬದಿ ಗ್ರಾಪಂಗಳಾದ ಕೊಯಿಲ, ರಾಮಕುಂಜ, ಆಲಂಕಾರು, ಪೆರಾಬೆ, ಕುಟ್ರುಪಾಡಿ, ಕಡಬ ಪಟ್ಟಣ ಪಂಚಾಯತ್, ಕಡಬ ತಾಪಂ, ಮರ್ಧಾಳ, ಐತ್ತೂರು, ಬಿಳಿನೆಲೆ ಹಾಗೂ ಸುಬ್ರಹ್ಮಣ್ಯ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತೆ ನಡೆಸಲಾಯಿತು.

*ಕಡಬ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲೂ ಸ್ವಚ್ಛತೆ

ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್, ಉಪಾಧ್ಯಕ್ಷೆ ನೀಲಾವತಿ ಶಿವರಾಮ್, ಸದಸ್ಯರಾದ ಕುಸುಮ, ದಯಾನಂದ, ಶಾಲಿನಿ, ಮೋಹನ್ ದಾಸ್, ಮುಖ್ಯಾಧಿಕಾರಿ ಲೀಲಾವತಿ ಮತ್ತು ಸಿಬ್ಬಂದಿಗಳು, ಟೂರಿಸ್ಟ್ ವಾಹನ ಚಾಲಕ-ಮಾಲಕರ ಸಂಘ- ಆಟೊ ರಿಕ್ಷಾ ಚಾಲಕ-ಮಾಲಕರ ಸಂಘ, ಆಶಾ ಕಾರ್ಯಕರ್ತೆಯರು, ಅಂಗನ ವಾಡಿ ಕಾರ್ಯಕರ್ತೆಯರು, ನಾಗರಿಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಕಡಬ ಪೇಟೆಯುದ್ಧಕ್ಕೂ ಕಸ ಹೆಕ್ಕುವ ಮೂಲಕ ಮತ್ತು ಅಂಗಡಿ ಮುಂಭಾಗ ಕಸವನ್ನು ಎಸೆಯದೆ ಬುಟ್ಟಿಗೆ ಹಾಕುವಂತೆ ನಾಗರಿಕರಿಗೆ ತಿಳಿಸಲಾಯಿತು.

*ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ಪ್ರತಿಜ್ಞೆ

ಹೆದ್ದಾರಿ ಹಾದು ಹೋಗುವ 9 ಗ್ರಾಪಂಗಳಲ್ಲಿ ಸ್ವಚ್ಛತೆಯ ಪ್ರತಿಜ್ಞೆ ಕೈಗೊಂಡು ಶುಚಿತ್ವದ ನಡೆಸಲಾಯಿತು. ಆಯಾಯ ಗ್ರಾಪಂಗಳಲ್ಲಿ ಹಲವು ಗುಂಪುಗಳನ್ನಾಗಿ ಮಾಡಿ ಸ್ವಚ್ಛತಾ ಶ್ರಮದಾನ ಕೈಗೊಳ್ಳಲಾಯಿತು.

ದ.ಕ.ಜಿಪಂ ಉಪಕಾರ್ಯದರ್ಶಿ ಹಾಗೂ ಸ್ವಚ್ಛ ಭಾರತ್ ಮಿಷನ್ ನೋಡಲ್ ಅಧಿಕಾರಿ ಜಯಲಕ್ಷ್ಮಿ ರಾಯಕೋಡ, ಕಡಬ ತಾಪಂ ಇಒ ಅಧಿಕಾರಿ ನವೀನ್ ಭಂಡಾರಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಜಿಪಂ ಸ್ವಚ್ಚ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕ ಡೊಂಬಯ್ಯ ಇಡ್ಕಿದು, ನವೀನ್, ಪವನ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News