×
Ad

Padubidri | ತೇಲಿ ಬಂದ ಮುಳುಗಿದ ಮೀನುಗಾರಿಕಾ ದೋಣಿ

Update: 2026-07-03 21:50 IST

ಪಡುಬಿದ್ರಿ: ಸಮುದ್ರದಲ್ಲಿ ನೀರು ತುಂಬಿ ಅಪಘಾತಕ್ಕೊಳಗಾಗಿದ್ದ ಮಲ್ಪೆ ನೋಂದಣಿಯ ‘ಮಂಜು ಮಾತ’ ಗಿಲ್‌ನೆಟ್ ಮೀನುಗಾರಿಕಾ ದೋಣಿ ಶುಕ್ರವಾರ ಸಂಜೆ ಹೆಜಮಾಡಿ ಸಿಎಸ್‌ಪಿ ಠಾಣಾ ವ್ಯಾಪ್ತಿಯ ಎರ್ಮಾಳು ಬಡಾ ಗ್ರಾಮದ ಉಚ್ಚಿಲ ಕಡಲ ತೀರಕ್ಕೆ ತೇಲಿ ಬಂದಿದೆ.

ಜೂ.29ರಂದು ಬೆಳಿಗ್ಗೆ ಮಲ್ಪೆ ಬಂದರಿನಿಂದ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ದೋಣಿಯ ತಳಭಾಗದಿಂದ ಮಧ್ಯಾಹ್ನ ನೀರು ಸೋರಿಕೆಯಾಗತೊಡಗಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಭಾರತೀಯ ಕರಾವಳಿ ಕಾವಲು ಪಡೆಯ ಸಹಾಯ ಕೋರಲಾಗಿದ್ದು, ಸ್ಥಳಕ್ಕೆ ಧಾವಿಸಿದ ಕೋಸ್ಟ್‌ಗಾರ್ಡ್ ಸಿಬ್ಬಂದಿ ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದರು. ದೋಣಿಯನ್ನು ರಕ್ಷಿಸಲು ಸಾಧ್ಯವಾಗದ ಕಾರಣ ಸಮುದ್ರದಲ್ಲೇ ಬಿಟ್ಟು ಕಾರ್ಯಾಚರಣೆ ಪೂರ್ಣಗೊಳಿಸಲಾಗಿತ್ತು.

ಬಳಿಕ ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಸಿಎಸ್‌ಪಿ ಠಾಣೆ, ಮೀನುಗಾರಿಕಾ ಇಲಾಖೆ, ಇಮಿಗ್ರೇಶನ್ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮೀನುಗಾರರನ್ನು ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲಿಸಿದರು. ನಾಲ್ವರು ತಮಿಳುನಾಡು ಹಾಗೂ ಇಬ್ಬರು ಕೇರಳ ಮೂಲದವರಾಗಿರುವುದು ದೃಢಪಟ್ಟಿದೆ.

ಜಿಲ್ಲಾಧಿಕಾರಿಗಳ ಮೀನುಗಾರಿಕಾ ನಿಷೇಧಾಜ್ಞೆ ಉಲ್ಲಂಘಿಸಿ ಕಾನೂನುಬಾಹಿರವಾಗಿ ಮೀನುಗಾರಿಕೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ದೋಣಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ದೋಣಿಯ ಲೈಸೆನ್ಸ್ ಮತ್ತು ನೋಂದಣಿ ರದ್ದುಪಡಿಸುವಂತೆ ಮೀನುಗಾರಿಕಾ ಇಲಾಖೆಗೆ ವರದಿ ಸಲ್ಲಿಸಲಾಗಿದೆ.

ಶುಕ್ರವಾರ ಸಂಜೆ ಸುಮಾರು 6.15ಕ್ಕೆ ದೋಣಿಯು ಉಚ್ಚಿಲ ಸಮುದ್ರ ತೀರಕ್ಕೆ ತೇಲಿ ಬಂದಿದ್ದು, ಮಾಹಿತಿ ಪಡೆದ ಹೆಜಮಾಡಿ ಸಿಎಸ್‌ಪಿ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಅಬ್ದುಲ್ ರಜಾಕ್, ಸಿಪಿಸಿ ಪ್ರವೀಣ್, ಕೆಎನ್‌ಡಿ ರಾಜೇಶ್ ಹಾಗೂ ತೀರ್ಥ ಅವರು ಸ್ಥಳೀಯ ಮೀನುಗಾರರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ದೋಣಿಯನ್ನು ಸುರಕ್ಷಿತವಾಗಿ ಕಡಲ ತೀರಕ್ಕೆ ಎಳೆದು ತಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News