×
Ad

ಎಸ್‌ಐಆರ್: ಉಡುಪಿ ಜಿಲ್ಲೆಯಲ್ಲಿ 3,02,848 ಗಣತಿ ನಮೂನೆ ವಿತರಣೆ

Update: 2026-07-04 20:10 IST

ಉಡುಪಿ, ಜು.4: ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್-2026) ಪ್ರಕ್ರಿಯೆಯು ಚುರುಕಾಗಿ ನಡೆಯುತ್ತಿದ್ದು, ಮತದಾರರಿಗೆ ಗಣತಿ ನಮೂನೆ (ಎನ್ಯೂಮರೇಶನ್ ಫಾರ್ಮ್) ಗಳನ್ನು ವಿತರಿಸಲು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಓ) ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.

ಜುಲೈ 4ರ ಗುರುವಾರದವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 10,63,876 ಎನ್ಯೂಮರೇಶನ್ ಫಾರ್ಮ್‌ಗಳನ್ನು ಮುದ್ರಿಸಲಾಗಿದ್ದು,ಈವರೆಗೆ 3,02,848 ಫಾರ್ಮ್‌ಗಳನ್ನು ಮತದಾರರಿಗೆ ವಿತರಿಸಿ, ಶೇ.28.46ರಷ್ಟು ಪ್ರಗತಿ ಯನ್ನು ಸಾಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.

ಈವರೆಗೆ ಒಟ್ಟು 22170 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಗೊಳಿಸಲಾಗಿದ್ದು, ಜಿಲ್ಲೆಯಲ್ಲಿ 127 ಮಂದಿ ಮತದಾರರು ಮೃತಪಟ್ಟಿರು ವುದು ಮನೆ ಭೇಟಿಯ ವೇಳೆ ಗೊತ್ತಾಗಿದೆ. ಅದೇ ರೀತಿ 62 ಮಂದಿ ಮತದಾರರು ಖಾಯಂ ಆಗಿ ವರ್ಗಾವಣೆಗೊಂದ್ದಾರೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.

ಗುರುವಾರ ನಡೆದ ವಿಡಿಯೋ ಸಂವಾದದಲ್ಲಿ ನೀಡಲಾದ ನಿರ್ದೇಶನದಂತೆ ಬಿಎಲ್‌ಒ ಹಾಗೂ ಬಿಎಲ್‌ಒ ಸೂಪರ್‌ ವೈಸರ್‌ಗಳಿಗೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಲು ತಾಂತ್ರಿಕ ಬೆಂಬಲದ ಅಗತ್ಯ ಇರುವುದರಿಂದ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಜಿಲ್ಲೆಯಾದ್ಯಂತ ಸ್ಥಾಪಿಸಲಾದ ಬಿಎಲ್‌ಒ ಫೆಸಿಲಿಟೇಷನ್ ಸೆಂಟರ್ ಹಾಗೂ ವೋಟರ್ ಫಿಸಿಲಿಟೇಷನ್ ಸೆಂಟರ್‌ಗಳ ಕಾರ್ಯ ನಿರ್ವಹಣಾ ಅವಧಿಯನ್ನು ಬೆಳಗ್ಗೆ 7:00ರಿಂದ ರಾತ್ರಿ 9:00ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಸೆಕ್ಟರ್ ಅಧಿಕಾರಿಗಳ ನೇಮಕ: ಮತದಾರರ ಪಟ್ಟಿಗಳ ಪರಿಷ್ಕರಣೆ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಅಧಿಕಾರಿಯು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಅರ್ಜಿಗಳಲ್ಲಿ ಡಿಜಿಟಲೀಕರಣ ಮಾಡಿದ ಗಣತಿ ವಿವರಗಳನ್ನು ಪರಿಶೀಲನೆ ಮಾಡುತ್ತಾರೆ ಹಾಗೂ ನಮೂನೆಗಳ ಸ್ವೀಕೃತಿ, ದಾಖಲೆ ನಿರ್ವಹಣೆ ಮತ್ತು ಬಿಎಲ್‌ಒ ಆ್ಯಪ್‌ನಲ್ಲಿ ಅಪ್‌ಲೋಡ್ ಪ್ರಕ್ರಿಯೆ ಮೇಲ್ವಿಚಾರಣೆ ಮಾಡಲಿದ್ದಾರೆ.

ಸೆಕ್ಟರ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮಚಗಟ್ಟೆಗಳಲ್ಲಿ ಯಾವುದೇ ಲೋಪವಿಲ್ಲದಂತೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.

ಉಡುಪಿ ಜಿಲ್ಲೆಗೆ ಒಟ್ಟು 119 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ 25, ಕುಂದಾಪುರಕ್ಕೆ 22, ಉಡುಪಿಗೆ 24, ಕಾಪುವಿಗೆ 25 ಹಾಗೂ ಕಾರ್ಕಳ ಕ್ಷೇತ್ರಕ್ಕೆ 23 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣ ಗೊಳಿಸಲು ಎಲ್ಲಾ ಸಾರ್ವಜನಿಕರು ತಮ್ಮ ಮನೆಗಳಿಗೆ ಭೇಟಿ ನೀಡುವ ಬಿಎಲ್‌ಒಗಳಿಗೆ ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಮನೆ ಭೇಟಿ ಅಭಿಯಾನವು ಜೂನ್‌30ರಿಂದ ಪ್ರಾರಂಭಗೊಂಡು ಜುಲೈ 29ರವರೆಗೆ ನಡೆಯವಲಿದೆ. ಸಲ್ಲಿಕೆಯಾದ ನಮೂನೆಗಳ ಡಿಜಿಟಲೀಕರಣವು ಜೂ.30ರಿಂದ ಜುಲೈ 29ರವರೆಗೆ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲಿ ಜುಲೈ 4ರವರೆಗೆ ನಡೆದ ಎಸ್‌ಐಆರ್ ಪ್ರಕ್ರಿಯೆ ಸಾಧನೆ ಹೀಗಿದೆ:

ವಿಧಾನಸಭಾಕ್ಷೇತ್ರ     -     ಒಟ್ಟು ಮತದಾರರು    -     ವಿತರಿಸಿದ ನಮೂನೆ

118.ಬೈಂದೂರು       -          2,41,863        -             55,348

119.ಕುಂದಾಪುರ        -         2,12,473        -             66,283

120.ಉಡುಪಿ             -          2,21,680         -             68,128

121.ಕಾಪು                -           1,94,718         -             56,708

122.ಕಾರ್ಕಳ             -           1,93,142          -           56,383

ಒಟ್ಟು                        -            10,63,876        -           3,02,848

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News