×
Ad

ಮರವಂತೆ ಬಂದರಿನ ಬ್ರೇಕ್‌ ವಾಟರ್ ಅಪಾಯದಲ್ಲಿ

Update: 2026-07-07 20:05 IST

ಕುಂದಾಪುರ, ಜು.7: ಕಳೆದ ಕೆಲ ದಿನಗಳಿಂದ ವೇಗದ ಗಾಳಿಯೊಂದಿಗೆ ಸುರಿಯುತ್ತಿರುವ ಮಳೆಗೆ ಅರಬಿಸಮುದ್ರದ ಆರ್ಭಟ ತೀವ್ರತೆ ಪಡೆದು ಕೊಂಡಿದ್ದು, ಅಲೆಗಳ ಹೊಡೆತಕ್ಕೆ ಮರವಂತೆ ಔಟ್‌ಡೋರ್ (ಹೊರಾಂಗಣ) ಬಂದರಿನ ದಕ್ಷಿಣ ದಿಕ್ಕಿನ ಬ್ರೇಕ್ ವಾಟರ್ ಅಪಾಯಕ್ಕೆ ಸಿಲುಕಿದೆ. ಬೃಹತ್ ಗಾತ್ರದ ಅಲೆಗಳು ಅಪ್ಪಳಿಸುತ್ತಿರುವ ಪರಿಣಾಮ ಬ್ರೇಕ್‌ವಾಟರ್‌ನ ಕಲ್ಲು ಮತ್ತು ಟೆಟ್ರಾಪೋಡ್‌ಗಳು (ತ್ರಿಕೋನಾಕಾರದ ತಡೆಗಲ್ಲು) ಕುಸಿಯುತ್ತಿದ್ದು ನಿಧಾನವಾಗಿ ಕಡಲ ಒಡಲು ಸೇರುತ್ತಿವೆ.

ಕಳೆದ ಸುಮಾರು ಒಂದು ದಶಕಕ್ಕೂ ಅಧಿಕ ಸಮಯದಿಂದ ಮರವಂತೆ ಬಂದರು ಕಾಮಗಾರಿ ನಡೆಯುತ್ತಿದ್ದು ಇನ್ನೂ ಸಹ ಪೂರ್ಣಗೊಂಡಿಲ್ಲ. ಉತ್ತರ ದಿಕ್ಕಿನ ಬ್ರೇಕ್‌ವಾಟರ್ ವಿಸ್ತರಣೆ ಬಳಿಕ ದಿಕ್ಕು ಬದಲಿಸಿದ ಕಡಲು ಈಗ ದಕ್ಷಿಣದಲ್ಲಿ ಗೋಳು ಸೃಷ್ಟಿಸಿದೆ. ದಶಕದ ಹಿಂದೆ ನಿರ್ಮಿತ ಪಶ್ಚಿಮದ ಬ್ರೇಕ್ ವಾಟರ್‌ಗೆ ಬೃಹತ್ ಗಾತ್ರದ ಅಲೆಗಳು ಅಪ್ಪಳಿಸು ತ್ತಿದ್ದು ಅಲ್ಲಿಯೂ ಕುಸಿತ ಸಂಭವಿಸಿದೆ. ಅಳಿವೆಯಲ್ಲಿಯೂ ಭಾರಿ ಅಲೆಗಳಿದ್ದು ಬಂದರಿನ ಒಳಭಾಗವನ್ನು ಕೊರೆಯು ತ್ತಿದೆ. ಸುರಕ್ಷತೆಗಾಗಿ ಮೀನುಗಾರರು ಅಳವಡಿಸಿದ್ದ ಭಾರಿ ಗಾತ್ರದ ಮರಳಿನ ಚೀಲಗಳು ಅಲೆಗಳ ಹೊಡೆತಕ್ಕೆ ಹಾನಿಗೊಂಡಿವೆ.

ಮರವಂತೆ ಬಂದರು ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು ಕೇರಳ ಮಾದರಿಯ ಔಟ್‌ಡೋರ್ ಬಂದರು ನಿರ್ಮಾಣಕ್ಕೆ 2011ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿತ್ತು. ಮೊದಲ ಹಂತದಲ್ಲಿ 55 ಕೋಟಿ ರೂ.ಗೆ ಟೆಂಡರ್ ಆಗಿದ್ದು, 2013ರಲ್ಲಿ ಕಾಮಗಾರಿ ಪ್ರಾರಂಭಗೊಂಡಿತ್ತು. ಬಂದರಿನ ದಕ್ಷಿಣದಲ್ಲಿ 595 ಮೀ. ಮತ್ತು ಉತ್ತರ ದಿಕ್ಕಿನಲ್ಲಿ 560 ಮೀ. ಉದ್ದದ ಬ್ರೇಕ್ ವಾಟರ್ ನಿರ್ಮಾಣ ಕಾರ್ಯ ನಡೆದಿತ್ತು.

2016ರಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಅದು ನಲುಗಿ ಹೋಗಿತ್ತು. 2022ರಲ್ಲಿ ಅರಬಿ ಸಮುದ್ರದಲ್ಲಿ ಕಾಣಿಸಿ ಕೊಂಡ ತೌಕೆ ಚಂಡಮಾರುತದ ಪರಿಣಾಮ ಇದು ಮತ್ತೆ ಜರ್ಜರಿತಗೊಂಡಿತ್ತು. ಪ್ರಸ್ತುತ 84 ಕೋಟಿ ರೂ. ವೆಚ್ಚದಲ್ಲಿ ಉತ್ತರ ದಿಕ್ಕಿನ ಬ್ರೇಕ್‌ವಾಟರ್ 812 ಮೀ.ಗೆ ವಿಸ್ತರಣೆಯಾಗಿದೆ. ದಕ್ಷಿಣದಲ್ಲಿ ಹೆಚ್ಚುವರಿಯಾಗಿ 65 ಮೀ. ವಿಸ್ತರಣೆ ನಡೆಯುತ್ತಿದೆ. ಈಗಿರುವ ಕಡಲಿನ ಆರ್ಭಟ ಕಾಮಗಾರಿಯ ಮೇಲೆ ಪರಿಣಾಮ ಬೀರಿದೆ.

‘ಅಲೆಗಳ ಹೊಡೆತ ತಪ್ಪಿಸಲು ಬಂದರಿನ ಉತ್ತರ ದಿಕ್ಕಿನಲ್ಲಿ ಹೆಚ್ಚುವರಿಯಾಗಿ 260 ಮೀ. ವಿಸ್ತರಣೆ ಕಾರ್ಯ ನಡೆ ದಿದೆ. ದಕ್ಷಿಣ ದಿಕ್ಕಿನಲ್ಲಿ ಸುರಕ್ಷತೆಗಾಗಿ ಹೆಚ್ಚುವರಿಯಾಗಿ 65 ಮೀ. ವಿಸ್ತರಣೆ ನಡೆಯುತ್ತಿದೆ. ಅಲೆಗಳ ಆರ್ಭಟದಿಂದ ದಕ್ಷಿಣ ದಿಕ್ಕಿನಲ್ಲಿ ಎದುರಾಗಿರುವ ತೊಂದರೆ ಪರಿಹರಿಸಲು ಕ್ರಮ ವಹಿಸಲಾಗಿದೆ.

-ಪ್ರಸನ್ನ, ಇಂಜಿನಿಯರ್ ಬಂದರು ಮತ್ತು ಮೀನುಗಾರಿಕೆ ಇಲಾಖೆ ಉಡುಪಿ.

‘ಕಳೆದೊಂದು ದಶಕದಿಂದ ನಡೆಯುತ್ತಿರುವ ಔಟ್‌ಡೋರ್ ಬಂದರು ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ, ಉತ್ತರದಲ್ಲಿ ಬ್ರೇಕ್‌ವಾಟರ್ ವಿಸ್ತರಣೆಯಾಗಿದೆ. ಕಡಲಬ್ಬರ ಹೆಚ್ಚಳಗೊಂಡ ಬೆನ್ನಲ್ಲೇ ದಕ್ಷಿಣ ದಿಕ್ಕಿನ ಬ್ರೇಕ್ ವಾಟರ್‌ಗೆ ಭಾರಿ ಅಲೆಗಳು ಅಪ್ಪಳಿಸುತ್ತಿದ್ದು, ಕಲ್ಲು ಕುಸಿದು ಸಮುದ್ರ ಸೇರುತ್ತಿವೆ. ಸಂಬಂಧಿತ ಇಲಾಖೆ ಈ ಬಗ್ಗೆ ಗಮನಹರಿಸಬೇಕು.

-ಶ್ರೀಧರ ಖಾರ್ವಿ, ಸ್ಥಳೀಯ ಮೀನುಗಾರ ಮುಖಂಡ ಮರವಂತೆ.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News