×
Ad

ಎಲ್ಲ ಚಟುವಟಿಕೆಗಳಿಗೆ ಪೇಜಾವರ ಸ್ವಾಮೀಜಿ ಒಪ್ಪಿಗೆ: ಶಶಿಧರ್ ಭಟ್

Update: 2026-07-07 21:07 IST

ಉಡುಪಿ: ನೀಲಾವರ ಗೋಗ್ರಾಸ ಸೇವಾ ತಂಡವು ಪೇಜಾವರ ಮಠಕ್ಕಾಗಲಿ, ಪೇಜಾವರ ಸ್ವಾಮೀಜಿಗಳಿಗಾಗಲಿ, ನೀಲಾವರ ಮತ್ತು ಕೊಡವೂರು ಗೋಶಾಲೆಗಾಗಲಿ ಯಾವುದೇ ಮೋಸ, ವಂಚನೆ ಅಥವಾ ದ್ರೋಹವೆಸಗಿಲ್ಲ ಎಂದು ತಂಡದ ಶಶಿಧರ ಭಟ್ ಸ್ಪಷ್ಟಪಡಿಸಿದ್ದಾರೆ.

ನೀಲಾವರ ಮತ್ತು ಕೊಡವೂರಿನ ಗೋಶಾಲೆಗಳಲ್ಲಿ ಸೇವೆ ಮಾಡಲು ಇಚ್ಚಿಸುವವರಿಗೆ ಸಹಾಯ ಮಾಡುವುದು, ಗೋಸೇವೆಗೆ ಸಾರ್ವಜನಿಕರನ್ನು ಪ್ರೇರೇಪಿಸುವುದು ಮತ್ತು ಗೋಶಾಲೆ ನಡೆಸಲು ಬೇಕಾದ ಸೌಕರ್ಯಗಳನ್ನು ಹೊಂದಿಸಿ ಕೊಡುವ ಸದುದ್ದೇಶದಿಂದ ತಂಡವನ್ನು ಪ್ರಾರಂಭಿಸಲಾಗಿದೆ.

ಪ್ರಾರಂಭಿಸುವಾಗ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯನ್ನು ಸಂಪರ್ಕಿಸಿ ಒಪ್ಪಿಗೆ ಪಡೆದಿದ್ದೇವೆ ಹಾಗೂ ನಮ್ಮ ಚಟುವಟಿಕೆಗಳನ್ನು ಅವರ ಒಪ್ಪಿಗೆಯಿಂದಲೇ ಮಾಡಿಕೊಂಡು ಅವರಿಗೆ ಎಲ್ಲಾ ಚಟುವಟಿಕೆಗಳ ವಿವರಗಳನ್ನು ಕಾಲಕಾಲಕ್ಕೆ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ತಂಡದಿಂದ ಮಾಡಿದ ಪ್ರತಿಯೊಂದು ಕಾರ್ಯ ಚಟುವಟಿಕೆಗಳ ಸಂಪೂರ್ಣ ಲೆಕ್ಕಾಚಾರ ಇಟ್ಟುಕೊಂಡಿದ್ದು, ಗೋಸೇವೆಗಾಗಿ ಮಾತ್ರ ಇದನ್ನು ವಿನಿಯೋಗಿಸಿರುತ್ತೇವೆ. ಸಂಗ್ರಹಿಸಿದ ಮೊತ್ತದಿಂದ ಗೋಗ್ರಾಸ ಸೇವೆಗೆ ಬೇಕಾದ ಪಾತ್ರೆಗಳು, ಹಿಂಡಿ ಇತ್ಯಾದಿ ಖರ್ಚು-ವೆಚ್ಚಗಳಿಗೆ ಮಾತ್ರ ಬಳಸುತ್ತಿದ್ದೇವೆ. ಉಳಿಕೆ ಮೊತ್ತವನ್ನು ಈಗಾಗಲೇ ಗೋವರ್ಧನ ಗಿರಿ ಟ್ರಸ್ಟ್ ಖಾತೆಗೆ ವರ್ಗಾಯಿಸಿದ್ದೇವೆ.

ಈ ಸಂದರ್ಭದಲ್ಲಿ ಕೆಲ ಸ್ಥಾಪಿತ ಹಿತಾಸಕ್ತಿಗಳು ವಿನಾಕಾರಣ ನಮ್ಮ ತೇಜೋವಧೆ ಮಾಡಿ ಅಪಪ್ರಚಾರದ ಸುದ್ದಿ ಗಳನ್ನು ಹರಡಿ ನನ್ನ ಹಾಗೂ ನಮ್ಮ ತಂಡದ ವಿರುದ್ಧ ವಿನಾಕಾರಣ ಈ ವಿಷಯದಲ್ಲಿ ವೈಯಕ್ತಿಕ ನಿಂದನೆ ಹಾಗೂ ನಾನು ಪಾಲುದಾರನಾಗಿರುವ ನಮ್ಮ ವ್ಯವಹಾರಿಕ ಸಂಸ್ಥೆಯ ಹೆಸರನ್ನು ಎಳೆದು ತಂದು ತೇಜೋವಧೆ ಮಾಡಲು ಪ್ರಯತ್ನಿಸಿದ್ದಾರೆ.

ಗೋಸೇವೆಯೇ ನಮ್ಮ ಧ್ಯೇಯ ಎಂದು ಪ್ರಾಮಾಣಿಕವಾಗಿ ಕೆಲಸ ಮಾಡಿ ಕೊಂಡು ಬಂದಿದ್ದೇವೆ. ನಮ್ಮ ಸೇವಾತ ತ್ಪರತೆ ಹಾಗೂ ಪಾರದರ್ಶಕತೆಯನ್ನು ಯಾವುದೇ ಸ್ಥಳ ಅಥವಾ ವ್ಯಕ್ತಿಗಳ ಸಮ್ಮುಖದಲ್ಲಿ ವ್ಯಕ್ತಪಡಿಸಲು ಸಿದ್ಧ ಎಂದು ಶಶಿಧರ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News