×
Ad

ಎಸ್‌ಐಆರ್: ಉಡುಪಿ ಜಿಲ್ಲೆಯಲ್ಲಿ 7,40,582 ಗಣತಿ ನಮೂನೆ ವಿತರಣೆ

Update: 2026-07-07 19:51 IST

ಉಡುಪಿ, ಜು.7: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್-2026) ಪ್ರಕ್ರಿಯೆಯಲ್ಲಿ ಗಣತಿ ನಮೂನೆ (ಎನ್ಯೂಮರೇಶನ್ ಫಾರ್ಮ್)ಗಳನ್ನು ಮತದಾರರಿಗೆ ವಿತರಿಸುವ ಕಾರ್ಯ ಇಂದೂ ಮುಂದುವರಿದಿದ್ದು, ಮಂಗಳವಾರದವರೆಗೆ ಒಟ್ಟು ಗುರಿಯಲ್ಲಿ ಶೇ.69.61 ರಷ್ಟು ಫಾರಂಗಳನ್ನು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ವಿತರಿಸಿದ್ದಾರೆ. ಭರ್ತಿ ಮಾಡಿದವರ ಗಣತಿ ನಮೂನೆಯನ್ನು ಸಹ ಅವರು ಸಂಗ್ರಹಿಸುತಿದ್ದಾರೆ.

ಜುಲೈ 7ರವರೆಗೆ ಉಡುಪಿ ಜಿಲ್ಲೆಯಲ್ಲಿ ವಿತರಿಸಬೇಕಾದ ಒಟ್ಟು 10,63,876 ಎನ್ಯೂಮರೇಶನ್ ಫಾರ್ಮ್‌ಗಳಲ್ಲಿ 7,40,582 ಫಾರ್ಮ್‌ಗಳನ್ನು ಮತದಾರರಿಗೆ ವಿತರಿಸಲಾಗಿದೆ ಎಂದು ಶೇ.70ರಷ್ಟು ಪ್ರಗತಿಯನ್ನು ಸಾಧಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಒಟ್ಟು 39469 ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಜಿಲ್ಲೆಯಲ್ಲಿ 282 ಮಂದಿ ಮತದಾರರು ಮೃತಪಟ್ಟಿರುವುದು ಈವರೆಗಿನ ಮನೆ ಭೇಟಿಯ ವೇಳೆ ಗೊತ್ತಾಗಿದೆ. ಅದೇ ರೀತಿ 154 ಮಂದಿ ಮತದಾರರು ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆ ಗೊಂಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 45 ಮಂದಿ ಮತದಾರರು ಸ್ವದಾಖಲಾತಿಯನ್ನು ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.

ಜಿಲ್ಲೆಯಲ್ಲಿ ಹೆಚ್ಚಿನ ಮತದಾರರು ಮೃತರಾಗಿರುವುದು ಉಡುಪಿಯಲ್ಲಿ. ಇಲ್ಲಿ 103ಮಂದಿ ಸತ್ತಿದ್ದಾರೆ. ಬೈಂದೂರಿನಲ್ಲಿ 96, ಕಾಪುವಲ್ಲಿ 41 ಹಾಗೂ ಕುಂದಾಪುರದಲ್ಲಿ 35 ಮಂದಿ ಮತದಾರರು ಸತ್ತಿರುವುದು ಮನೆ ಭೇಟಿ ವೇಳೆ ಪತ್ತೆಯಾಗಿದೆ. ವರ್ಗಾವಣೆಗೊಂಡವರಲ್ಲಿ 70 ಮಂದಿ ಉಡುಪಿಯಲ್ಲಿ 41 ಮಂದಿ ಬೈಂದೂರು, 30 ಮಂದಿ ಕುಂದಾಪುರದವರಾಗಿದ್ದಾರೆ. ಕಾರ್ಕಳದಲ್ಲಿ ಒಬ್ಬರು ಮಾತ್ರ ವರ್ಗಾವಣೆಗೊಂಡಿದ್ದಾರೆ.

ಸಾರ್ವಜನಿಕರು ಆನ್‌ಲೈನ್ ಮೂಲಕವೂ ತಮ್ಮ ವಿವರಗಳನ್ನು ಭರ್ತಿ ಮಾಡಬಹುದು ಅಥವಾ ನವೀಕರಿಸಿಕೊಳ್ಳಬ ಹುದಾಗಿದೆ. ಅರ್ಹ ಮತದಾರರು ವೋಟರ್ ಸರ್ವಿಸ್ ಪೋರ್ಟಲ್ (ವಿ.ಎಸ್.ಪಿ) - voters.eci.gov.in- /ಅಥವಾ ವೋಟರ್ ಹೆಲ್ಪ್‌ಲೈನ್ ಆ್ಯಪ್ -https://play.google.com/store/apps/details?id=com.eci.citizen- ಮೂಲಕ ನೋಂದಣಿ ಮಾಡಿ ಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಜು.7ರವರೆಗೆ ನಡೆದ ಎಸ್‌ಐಆರ್ ಪ್ರಕ್ರಿಯೆ ಸಾಧನೆ

ವಿಧಾನಸಭಾಕ್ಷೇತ್ರ        -      ಒಟ್ಟು ಮತದಾರರು          -       ವಿತರಿಸಿದ ನಮೂನೆ

118.ಬೈಂದೂರು        -         2,41,863                  -               1,81,451

119.ಕುಂದಾಪುರ       -          2,12,473                 -                1,59,874

120.ಉಡುಪಿ           -            2,21,680                 -                1,31,693

121.ಕಾಪು              -           1,94,718                    -               1,28,356

122.ಕಾರ್ಕಳ          -           1,93,142                    -                1,39,208

ಒಟ್ಟು                    -             10,63,876                  -                7,40,582

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News