ಕರಾವಳಿ ಭದ್ರತೆಯಲ್ಲಿ ಮೀನುಗಾರರ ಸಹಕಾರ ಅತ್ಯಗತ್ಯ: ಎಸ್ಪಿ ಹರಿರಾಂ ಶಂಕರ್
ಉಡುಪಿ, ಜು.11: ದೇಶದ ಸಮುದ್ರ ಗಡಿಯನ್ನು ಸುರಕ್ಷಿತವಾಗಿರಿಸಲು ಹಾಗೂ ಕರಾವಳಿ ಪ್ರದೇಶದ ಆಂತರಿಕ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಕರಾವಳಿ ಕಾವಲು ಪೊಲೀಸ್ ಸಿಬ್ಬಂದಿ ಸ್ಥಳೀಯ ಮೀನುಗಾರರೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಕರಾವಳಿ ಕಾವಲು ಪಡೆ ಪ್ರಭಾರ ಎಸ್ಪಿ ಹರಿರಾಂ ಶಂಕರ್ ಹೇಳಿದ್ದಾರೆ.
ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಕೇಂದ್ರ ಕಚೇರಿಯಲ್ಲಿ ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಅಧೀನದ ಕರಾವಳಿ ಭದ್ರತಾ ತರಬೇತಿ ಸಂಸ್ಥೆ ವತಿಯಿಂದ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕರಾವಳಿ ಕಾವಲು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆಯೋಜಿಸ ಲಾದ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮುದ್ರ ಮಾರ್ಗದ ಮೂಲಕ ನಡೆಯಬಹುದಾದ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವುದು, ಅನುಮಾನಾಸ್ಪದ ದೋಣಿಗಳ ಮೇಲೆ ನಿಗಾ ವಹಿಸುವುದು ಹಾಗೂ ನುಸುಳುಕೋರರು ದೇಶದೊಳಗೆ ಪ್ರವೇಶಿಸ ದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು ಕರಾವಳಿ ಕಾವಲು ಪೊಲೀಸ್ ಪಡೆಯ ಪ್ರಮುಖ ಜವಾಬ್ದಾರಿ ಯಾಗಿದೆ. ಕರ್ತವ್ಯ ನಿರ್ವ ಹಿಸುವ ವೇಳೆ ಸ್ಥಳೀಯ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದರು.
ಸಮುದ್ರ ಅಥವಾ ಕರಾವಳಿ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುವ ದೋಣಿಗಳು ಅಥವಾ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪರಿಶೀಲನೆ ನಡೆಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಕರಾವಳಿ ಭದ್ರತೆಯಲ್ಲಿ ಸಾರ್ವಜ ನಿಕರ, ಅದರಲ್ಲೂ ಮೀನುಗಾರರ ಸಹಕಾರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.
ಕರವಾಳಿ ಕಾವಲು ಪೊಲೀಸ್ ಡಿವೈಎಸ್ಪಿ ಕೆ.ಎಲ್.ಗಣೇಶ್, ಹೆಜಮಾಡಿ ಠಾಣೆ ಸಿಪಿಐ ರತ್ನಕುಮಾರ್, ಮೀಸಲು ಪಡೆಯ ಸಿಪಿಐ ಮೂರ್ತಿ ನಾಯ್ಕ, ಗುಪ್ತ ವಾರ್ತೆ ವಿಭಾಗದ ಸಿಪಿಐ ಸೀತಾರಾಮ ಹಾಗೂ ಮುಖ್ಯ ತರಬೇತುದಾರ ಆರ್.ಜಿ.ಬಿರಾದಾರ ಉಪಸ್ಥಿತರಿದ್ದರು. ಎಂಎಸ್‌ಐ ಶಶಿಧರ ಸ್ವಾಗತಿಸಿದರು. ಎಂಎಸ್‌ಐ ಭಾಸ್ಕರ್ ಶೆಟ್ಟಿಗಾರ್ ವಂದಿಸಿದರು.
ತರಬೇತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಕಾರವಾರ, ಬೇಲೆಕೇರಿ, ಕುಮಟಾ ಹಾಗೂ ಹೊನ್ನಾವರ ಕರಾವಳಿ ಕಾವಲು ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಉಡುಪಿ ಜಿಲ್ಲೆಯ ಗಂಗೊಳ್ಳಿ, ಮಲ್ಪೆ, ಹೆಜಮಾಡಿ ಹಾಗೂ ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ತರಬೇತಿಯಲ್ಲಿ ಪಾಲ್ಗೊಂಡಿದ್ದರು.