ಉಡುಪಿ: ಜು.13ಕ್ಕೆ ಸ್ಕೀಂ ನೌಕರರಿಂದ ಕರಾಳ ದಿನಾಚರಣೆ
ಉಡುಪಿ, ಜು.11: ಕೇಂದ್ರ ಸರಕಾರ ಐಸಿಡಿಎಸ್ ಯೋಜನೆಗೆ ನೀಡುತ್ತಿದ್ದ ಅನುದಾನವನ್ನು ಬೆಲೆಯೇರಿಕೆಗೆ ತಕ್ಕಂತೆ ಹೆಚ್ಚಳ ಮಾಡದಿರುವುದನ್ನು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜು.13ರಂದು ಸ್ಕೀಂ ನೌಕರರ ಕರಾಳ ದಿನದ ಭಾಗವಾಗಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ಉಡುಪಿ ಜಿಲ್ಲಾ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಧರಣಿ ನಡೆಸಲು ನಿರ್ಧರಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ -2020ನ್ನು ಜಾರಿ ಮಾಡಿ 3-6 ವರ್ಷದ ಮಕ್ಕಳನ್ನು ಅಂಗನವಾಡಿಗಳಿಂದ ದೂರವಿಟ್ಟು, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಿ ಅಂಗನವಾಡಿ ಕೇಂದ್ರಗಳಲ್ಲಿ ಫಲಾನುಭವಿ ಗಳ ಸಂಖ್ಯೆ ಇಳಿಮುಖವಾಗುತ್ತಿರುವುದು, ಐಸಿಡಿಎಸ್ ಖಾಸಗೀಕರಣದ ಭಾಗವಾಗಿ ಕೂಸಿನ ಮನೆಗಳನ್ನು ಮಾಡಲು ಹೊರಟಿರುವುದನ್ನು ಖಂಡಿಸಿ ಈ ಧರಣಿಯನ್ನು ಆಯೋಜಿಸಲಾಗಿದೆ.
ಧರಣಿಯನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಹಾಗೂ ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಎಸ್ ವರಲಕ್ಷ್ಮಿ ಉದ್ಘಾಟಿಸಲಿದ್ದಾರೆ ಎಂದು ಸಿಐಟಿಯು ಪ್ರಕಟಣೆಯಲ್ಲಿ ತಿಳಿಸಿದೆ.