ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಮಾಧ್ಯಮ ಪರಿಣಾಮಕಾರಿ: ಡಾ. ಪ್ರೇಮಾನಂದ್

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

Update: 2026-07-21 19:45 IST

ಕುಂದಾಪುರ, ಜು.21: ಕುಂದಾಪುರ ಸಮಾಜದಲ್ಲಿ ಜಾಗೃತಿ ಮೂಡಿಸು ವಲ್ಲಿ ಪತ್ರಿಕಾ ಮಾಧ್ಯಮಗಳು ಜನಮುಖಿ ಯಾಗಿ ಪರಿಣಾಮಕಾರಿಯಾದ ಪಾತ್ರ ವಹಿಸುತ್ತವೆ. ಪತ್ರಿಕೆಗಳು ನೀಡುವ ಎಚ್ಚರಿಕೆ, ಜಾಗೃತಿ ಹೆಚ್ಚು ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಪತ್ರಕರ್ತರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಹೇಳಿದ್ದಾರೆ.

ಮಂಗಳವಾರ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಂಡಾರ್ಕಾರ್ಸ್ ಕಾಲೇಜಿನ ರಾಧಾಬಾಯಿ ಹಾಲ್‌ನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಗ್ರಾಮೋಪೋನ್‌ನ ಧ್ವನಿಗೆ ಚಾಲನೆ ನೀಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಹಂದಿಗಳ ಸರಣಿ ಸಾವಿನ ಬಗ್ಗೆ ಪತ್ರಿಕೆಗಳು ತೋರಿಸಿದ ಕಾಳಜಿಯನ್ನು ಶ್ಲಾಘಿಸಿದ ಅವರು, ಇಂದು ಪತ್ರಿಕಾ ವಿತರಕರ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಪತ್ರಿಕೆಗಳ ಓದುಗರ ಸಂಖ್ಯೆಯೂ ಕಡಿಮೆ ಯಾಗ ಬಹುದು. ಪತ್ರಿಕಾ ವಿತರಕರಿಗೆ ಉತ್ತೇಜನ, ಜೀವನ ಭದ್ರತೆ ನೀಡುವ ಕಾರ್ಯಗಳು ಆಗಬೇಕಾಗಿದೆ ಎಂದವರು ಹೇಳಿದರು.

ಪತ್ರಿಕಾ ದಿನಾಚರಣೆಯ ಅಂಗವಾಗಿ ಕೆಯುಡಬ್ಲ್ಯುಜೆ 2024ನೇ ಸಾಲಿನ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪ್ರಶಾಂತ ಪಾದೆ ಅವರಿಗೆ ಪತ್ರಿಕೋದ್ಯಮ ದಿನದ ಗೌರವ ಸಲ್ಲಿಸಲಾಯಿತು.

ಹಿರಿಯ ಪತ್ರಕರ್ತ, ವಿಜಯ ಕರ್ನಾಟಕ ಮಂಗಳೂರು ವಿಭಾಗದ ಹಿರಿಯ ವರದಿಗಾರ ಮುಹಮ್ಮದ್ ಆರಿಫ್ ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿ ದಿಸೆಯಿಂದಲೇ ಪತ್ರಿಕೆಯ ಓದುವ ಹಸಿವು ಆರಂಭವಾಗಬೇಕು. ಪತ್ರಿಕಾ ಓದುವಿಕೆ ನೀಡುವ ಅನುಭವ ಬಹುದೊಡ್ಡದು. ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪತ್ರಿಕೆಯ ಓದು ಸಹಕಾರಿ ಯಾಗಬಲ್ಲದು. ಪತ್ರಿಕೆಗಳನ್ನು ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರವೂ ದೊಡ್ಡದು ಎಂದರು.

ಮಾಧ್ಯಮಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಬಹಳಷ್ಟು ವಿಭಾಗಳು ತೆರೆದುಕೊಂಡಿವೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳ ಪಾತ್ರವೂ ದೊಡ್ಡದಿದೆ. ಪತ್ರಿಕೆಗಳ ಸುದ್ಧಿ ಶಾಶ್ವತ. ಒಮ್ಮೆ ಪ್ರಕಟಗೊಂಡ ಬಳಿಕ ಅದು ಯಾವತ್ತಿಗೂ ಪ್ರಚಲಿತದಲ್ಲಿರುತ್ತದೆ. ಎಲ್ಲ ವಿಷಯಗಳನ್ನು ಒಗ್ಗೂಡಿಸಿ ಕೊಡುವುದು ಪತ್ರಿಕಾ ಮಾಧ್ಯಮ ಮಾತ್ರ ಎಂದವರು ಹೇಳಿದರು.

ಕುಂದಾಪುರ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ್, ಸಂಚಾರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಅನೂಪ್ ಕುಮಾರ್, ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಸರೋಜಾ ಎಂ., ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ (ಸುಜಿ ಕುರ್ಯ) ಮಾತನಾಡಿದರು.

ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ, ಕಾರ್ಯಕಾರಿ ಸಮಿತಿಯ ರಾಘವೇಂದ್ರ ಪೈ, ಚಂದ್ರಮ ತಲ್ಲೂರು, ಯೋಗೀಶ್ ಕುಂಭಾಶಿ ಉಪಸ್ಥಿತರಿದ್ದರು.

ಇತ್ತೀಚೆಗೆ ಅಗಲಿದ ಪತ್ರಕರ್ತ ದಿ.ನಾಗೇಶ ಗಾಣಿಗರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಶ್ರೀಕಾಂತ ಹೆಮ್ಮಾಡಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್. ಬೀಜಾಡಿ ವಂದಿಸಿದರು. ಪತ್ರಕರ್ತೆ ಅಕ್ಷತಾ ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News