ಬೈಕ್ ಢಿಕ್ಕಿ: ಪಾದಚಾರಿ ಮೃತ್ಯು
Update: 2026-07-21 21:46 IST
ಕೋಟ, ಜು.21:ಅತಿ ವೇಗದಿಂದ ಬಂದ ಮೋಟಾರು ಸೈಕಲೊಂದು ಢಿಕ್ಕಿ ಹೊಡೆದು ರಸ್ತೆ ಬದಿಯ ಕಚ್ಛಾ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಪಾದಾಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ನಾರಾಯಣ ಶೆಟ್ಟಿ ಎಂದು ಗುರುತಿಸಲಾಗಿದೆ. ಅವರ ಅಳಿಯ ಹಳ್ಳಾಡಿ-ಹರ್ಕಾಡಿ ಗ್ರಾಮದ ಗಣೇಶ ಶೆಟ್ಟಿ ಅವರೇ ಆರೋಪಿ. ಬೆಳಗ್ಗೆ 10ಗಂಟೆ ಸುಮಾರಿಗೆ ಗಣೇಶ್ ತನ್ನ ಬೈಕ್‌ನಲ್ಲಿ ಬ್ರಹ್ಮಾವರಕ್ಕೆ ಹೋಗುತ್ತಿರುವಾಗ ಹಳ್ಳಾಡಿ ಹರ್ಕಾಡಿ ಗ್ರಾಮದ ಕೊಳ್ಕೆರೆ ಎಂಬಲ್ಲಿ ಮಾವನಿಗೆ ಢಿಕ್ಕಿ ಹೊಡೆದಿದ್ದ. ನಾರಾಯಣ ಶೆಟ್ಟಿ ಅವರ ತಲೆ ಹಾಗೂ ಎದೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅಪರಾಹ್ನ ಒಂದು ಗಂಟೆ ಸುಮಾರಿಗೆ ಮೃತಪಟ್ಟರು. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.